ADVERTISEMENT

ಅನುದಾನ ವೆಚ್ಚ: ನಿರೀಕ್ಷೆ ಮೀರಿದ ಸಾಧನೆ

ಎಚ್‌ಕೆಆರ್‌ಡಿಬಿ ಅಧ್ಯಕ್ಷ ಡಾ.ಶರಣಪ್ರಕಾಶ ಪಾಟೀಲ ವಿವರಣೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2017, 5:45 IST
Last Updated 17 ಜನವರಿ 2017, 5:45 IST
ಅನುದಾನ ವೆಚ್ಚ: ನಿರೀಕ್ಷೆ ಮೀರಿದ ಸಾಧನೆ
ಅನುದಾನ ವೆಚ್ಚ: ನಿರೀಕ್ಷೆ ಮೀರಿದ ಸಾಧನೆ   

ಕಲಬುರ್ಗಿ: ಈ ಭಾಗದ ಅಭಿವೃದ್ಧಿಗಾಗಿ ಹೈದರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಎಚ್‌ಕೆಆರ್‌ಡಿಬಿ)ಯಿಂದ ಕೈಗೊಂಡ ಎಲ್ಲ ಯೋಜನೆಗಳು ಸಮರ್ಪಕ ಅನುಷ್ಠಾನವಾಗುತ್ತಿದ್ದು ಪ್ರಸಕ್ತ ಸಾಲಿನಲ್ಲಿ ನಿರೀಕ್ಷೆಗೂ ಮೀರಿದ ಪ್ರಗತಿ ಸಾಧಿಸಲಾಗಿದೆ ಎಂದು ಮಂಡಳಿ ಅಧ್ಯಕ್ಷ ಶರಣಪ್ರಕಾಶ ಪಾಟೀಲ ಹೇಳಿದರು.

ಸೋಮವಾರ ಎಚ್‌ಕೆಆರ್‌ಡಿಬಿ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಸಕ್ತ ಹಣಕಾಸು ವರ್ಷದ ಎರಡನೇ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

2013–14 ರಿಂದ ಇಲ್ಲಿಯವರೆಗೂ ಸರ್ಕಾರವು ಬಿಡುಗಡೆ ಮಾಡಿದ್ದ ₹1,580 ಕೋಟಿ ಹಣದಲ್ಲಿ ₹1,135 ಕೋಟಿ ವೆಚ್ಚವಾಗಿದೆ. ಇನ್ನೂ ಅನೇಕ ಕಾಮಗಾರಿಗಳು ಮುಕ್ತಾಯ ಹಂತದಲ್ಲಿದ್ದು ಲೆಕ್ಕಚುಕ್ತಾ ಬಾಕಿ ಇದೆ. ಫೆಬ್ರುವರಿ ಅಂತ್ಯಕ್ಕೆ ಅನುದಾನವೆಲ್ಲವೂ ಸಂಪೂರ್ಣ ವೆಚ್ಚವಾಗಲಿದೆ.  ಅನುದಾನ ಬಳಕೆ ಪ್ರಮಾಣಪತ್ರ ಒದಗಿಸಿದ ಕೂಡಲೇ ಹಣ ದೊರೆಯಲಿದೆ ಎಂದು ತಿಳಿಸಿದರು.

ಪ್ರತಿ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಲಾಗಿದ್ದು ಸಾಕ್ಷಿಗಳನ್ನು ಇಟ್ಟುಕೊಳ್ಳಲಾಗಿದೆ. ಕಾಮಗಾರಿಗಳ ಛಾಯಾಚಿತ್ರ, ವಿಡಿಯೊ ಹಾಗೂ ಮೂರನೇ ವ್ಯಕ್ತಿಗಳ ವರದಿಗಳನ್ನು ಸಂಗ್ರಹಿಸಲಾಗಿದೆ. ನಾಲ್ಕು ವರ್ಷದಲ್ಲಿ 8,939 ಕಾಮಗಾರಿಗಳಿಗೆ ಕ್ರಿಯಾಯೋಜನೆ ರೂಪಿಸಲಾಗಿತ್ತು. ಅದರಲ್ಲಿ 3,098 ಕಾಮಗಾರಿಗಳು ಪೂರ್ಣಗೊಂಡಿವೆ ಎಂದರು.

ಮಾನವ ಅಭಿವೃದ್ಧಿ ಸೂಚ್ಯಂಕ (ಎಚ್‌ಡಿಐ) ಅನುಸರಿಸಿ ಹೈದರಾಬಾದ್‌ ಕರ್ನಾಟಕ ಭಾಗದ ಶಿಕ್ಷಣ, ಆರೋಗ್ಯ ಹಾಗೂ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಮಂಡಳಿಯಿಂದ ಹೆಚ್ಚು ಮಹತ್ವ ನೀಡಲಾಗಿದೆ. ಆಸ್ಪತ್ರೆಗಳು, ಶಾಲೆ, ಕಾಲೇಜುಗಳಿಗೆ ಅಗತ್ಯ ಉಪಕರಣಗಳ ಖರೀದಿಗೆ ನೆರವು ನೀಡಲಾಗುತ್ತಿದೆ.

ಗ್ರಾಮೀಣ ಭಾಗದಲ್ಲಿ ಸಂಪರ್ಕ ರಸ್ತೆಗಳ ಅಭಿವೃದ್ಧಿಗೆ ಸಾಕಷ್ಟು ಅನುದಾನ ಕೊಟ್ಟು ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಹೇಳಿದರು.
ಸಮಸ್ಯಾತ್ಮಕ ಗ್ರಾಮಗಳಲ್ಲಿ, ಪಟ್ಟಣಗಳಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಅನುದಾನ ಕೊಡಲಾಗಿದೆ. ಶುದ್ಧ ಕುಡಿಯುವ ನೀರು ಒದಗಿಸುವ ಯೋಜನೆಗಳನ್ನು ಜಾರಿ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಅಭಿವೃದ್ಧಿಗಾಗಿ ಜನಾಭಿಪ್ರಾಯ: ಹೈದರಾಬಾದ್‌ ಕರ್ನಾಟಕದ ಸಮಗ್ರ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ಈಗಾಗಲೇ ಮಾಡಿದ ಕೆಲಸಗಳು ಹಾಗೂ ಮಾಡಬೇಕಾದ ಕೆಲಸಗಳ ಕುರಿತು ಜನಾಭಿಪ್ರಾಯ ಸಂಗ್ರಹಿಸಲಾಗಿದ್ದು, ಶೀಘ್ರದಲ್ಲೆ ಇದರ ಪ್ರಮುಖ ಅಂಶಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಡಾ.ಶರಣಪ್ರಕಾಶ ಪಾಟೀಲ ಹೇಳಿದರು.

ಸಂವಿಧಾನದ 371–ಜೆ ತಿದ್ದುಪಡಿ ಬಳಿಕ ಈ ಭಾಗದ ಜನರ ಭಾವನೆಗಳನ್ನು ಸಂಗ್ರಹಿಸುವ ತೀರ್ಮಾನವು ಮಹತ್ವದ ಬೆಳವಣಿಗೆ. ಇದಕ್ಕಾಗಿ ಒಂದು ಏಜೆನ್ಸಿ ನಿಗದಿ ಮಾಡಲಾಗಿತ್ತು. ಏಜೆನ್ಸಿಯ ಕಾರ್ಯಕರ್ತರು ಗ್ರಾಮಗಳಲ್ಲಿ ಮನೆಮನೆಗೂ ತೆರಳಿ ಜನರ ಸಲಹೆ, ಅಭಿಪ್ರಾಯ ಸಂಗ್ರಹಿಸಿದ್ದಾರೆ. ಈ ವರದಿಯಿಂದಾಗಿ ಕೆಲಸ ಮಾಡುವ ಕಾರ್ಯಕ್ಷಮತೆ ಹೆಚ್ಚಾಗಲಿದೆ. ಅಲ್ಲದೆ ಎಚ್‌ಕೆಆರ್‌ಡಿಬಿ ಕೆಲಸಗಳು ಜನರಿಗೆ ಹತ್ತಿರವಾಗಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಪೌರಾಡಳಿತ ಸಚಿವ ಈಶ್ವರ ಖಂಡ್ರೆ, ಸಂಸದೀಯ ಕಾರ್ಯದರ್ಶಿ ಡಾ.ಉಮೇಶ ಜಾಧವ, ಶಾಸಕರಾದ ಅಶೋಕ ಖೇಣಿ, ರಹೀಂಖಾನ್‌, ಎಚ್‌ಕೆಆರ್‌ಡಿಬಿ ಕಾರ್ಯದರ್ಶಿ ಆದಿತ್ಯ ಆಮ್ಲನ್‌ ಬಿಸ್ವಾಸ್‌ ಇದ್ದರು. 2017–18ನೇ ಸಾಲಿನ ₹1 ಸಾವಿರ ಕೋಟಿ ಅನುದಾನದ ಕ್ರಿಯಾಯೋಜನೆಗೆ ಎಚ್‌ಕೆಆರ್‌ಡಿಬಿ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

ಅದರಲ್ಲಿ ಮೈಕ್ರೊ ಯೊಜನೆಗಳಿಗೆ ಶೇ 50 ರಷ್ಟು ಅನುದಾನ ಒದಗಿಸಲಾಗುತ್ತಿದ್ದು ಸಮಗ್ರ ಅಭಿವೃದ್ಧಿ ಸೂಚ್ಯಂಕ (ಸಿಡಿಐ) ಅನುಸರಿಸಲಾಗುವುದು. 2017 ರ ಮೇ ಒಳಗಾಗಿ ಈ ಯೋಜನೆಗಳಿಗೆ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ.
 

ಕ್ರಿಯಾಯೋಜನೆಗೆ ಅನುಮೋದನೆ: 
ವಿದ್ಯಾರ್ಥಿಗಳಿಗೆ 30 ಕಡೆಗಳಲ್ಲಿ ಸ್ಯಾಟ್‌ಲೈಟ್‌ ಮೂಲಕ ಎನ್‌ಇಇಟಿ/ಸಿಇಟಿ ತರಬೇತಿ ನೀಡಲಾಗುವುದು. ಇದಕ್ಕಾಗಿ 2016–17ನೇ ಸಾಲಿನಲ್ಲಿ ₹2 ಕೋಟಿ ಅನುದಾನ ಒದಗಿಸಲು ಸಭೆ ಒಪ್ಪಿಗೆ ಸೂಚಿಸಿದೆ.

ADVERTISEMENT

*

ಫೆಬ್ರುವರಿ ಅಂತ್ಯಕ್ಕೆ ಅನುದಾನವೆಲ್ಲವೂ ಸಂಪೂರ್ಣ ವೆಚ್ಚವಾಗಲಿದೆ. ಮತ್ತೊಂದು ಕಂತು ₹250 ಕೋಟಿ ಹಣ ಬಿಡುಗಡೆಗೆ ಬೇಡಿಕೆ ಸಲ್ಲಿಸಲಾಗಿದೆ
-ಶರಣಪ್ರಕಾಶ ಪಾಟೀಲ, ಎಚ್‌ಕೆಆರ್‌ಡಿಬಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.