ADVERTISEMENT

ಅಪರಾಧ ಚಕ್ರವ್ಯೂಹದಲ್ಲಿ ಸಿಲುಕಬೇಡಿ

ರೌಡಿಶೀಟರ್‌ಗಳಿಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌. ಶಶಿಕುಮಾರ್‌ ಕಿವಿಮಾತು

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2017, 8:35 IST
Last Updated 14 ಫೆಬ್ರುವರಿ 2017, 8:35 IST
ಕಲಬುರ್ಗಿ ಜಿಲ್ಲಾ ಪೊಲೀಸ್‌ ಮೈದಾನದಲ್ಲಿ ಸೋಮವಾರ ಅಯೋಜಿಸಿದ್ದ ರೌಡಿಶೀಟರ್‌ಗಳ ಪರೆಡ್‌ನಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಶಶಿಕುಮಾರ್‌ ಅವರು ಹಿಪ್ಪಿ ಶೈಲಿಯಲ್ಲಿ ಕೂದಲು ಬಿಟ್ಟಿದ್ದ ರೌಡಿಶೀಟರ್‌ನನ್ನು ವಿಚಾರಿಸುತ್ತಿರುವುದು ಗಮನ ಸೆಳೆಯಿತು
ಕಲಬುರ್ಗಿ ಜಿಲ್ಲಾ ಪೊಲೀಸ್‌ ಮೈದಾನದಲ್ಲಿ ಸೋಮವಾರ ಅಯೋಜಿಸಿದ್ದ ರೌಡಿಶೀಟರ್‌ಗಳ ಪರೆಡ್‌ನಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಶಶಿಕುಮಾರ್‌ ಅವರು ಹಿಪ್ಪಿ ಶೈಲಿಯಲ್ಲಿ ಕೂದಲು ಬಿಟ್ಟಿದ್ದ ರೌಡಿಶೀಟರ್‌ನನ್ನು ವಿಚಾರಿಸುತ್ತಿರುವುದು ಗಮನ ಸೆಳೆಯಿತು   
ಕಲಬುರ್ಗಿ: ಪೊಲೀಸ್‌ ಠಾಣೆಯ ರೌಡಿಗಳ ಪಟ್ಟಿಯಲ್ಲಿ ಇರುವವರು ಸಮಾಜದೊಂದಿಗೆ ಸನ್ಮಾರ್ಗದಲ್ಲಿ ಬದುಕುವುದನ್ನು ರೂಢಿಸಿಕೊಳ್ಳಬೇಕು. ಅಪರಾಧದ ಚಕ್ರವ್ಯೂಹದಲ್ಲಿ ಸಿಲುಕಿ ಪ್ರಾಣ ಕಳೆದುಕೊಳ್ಳಬೇಡಿ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಶಶಿಕುಮಾರ್‌ ಕಿವಿಮಾತು ಹೇಳಿದರು.
 
ಇಲ್ಲಿನ ಜಿಲ್ಲಾ ಪೊಲೀಸ್‌ ಮೈದಾನದಲ್ಲಿ ಸೋಮವಾರ ಜಿಲ್ಲೆಯ ರೌಡಿಶೀಟರ್‌ಗಳ ಪರೇಡ್‌ ತೆಗೆದುಕೊಂಡು ಮಾತನಾಡಿದರು. ಅಕ್ರಮ ಚಟುವಟಿಕೆಗಳಲ್ಲಿ ಪದೇ ಪದೇ ಭಾಗವಹಿಸುವವರ ವಿರುದ್ಧ ಗೂಂಡಾ ಕಾಯ್ದೆ ಮತ್ತು ಗಡಿಪಾರು ಕಾಯ್ದೆ ಅಡಿ ಕ್ರಮ ಕೈಗೊಳ್ಳಲಾಗುವುದು. ಇದಕ್ಕಾಗಿ ಯೋಜನೆ ಮಾಡಿಕೊಳ್ಳಲಾಗಿದ್ದು, ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.
 
ಸಮಾಜದಲ್ಲಿ ಸಾರ್ವಜನಿಕರಿಗೆ ಕಿರುಕುಳ ನೀಡುವುದು, ವಿಛಿದ್ರಕಾರಕ ಶಕ್ತಿಗಳೊಡನೆ ಕೈ ಜೋಡಿಸಿ ಸಮಾಜದಲ್ಲಿ ಶಾಂತಿ ಕದಡುವ ಚಟುವಟಿಕೆಗಳನ್ನು ನಿಯಂತ್ರಿಸುವ ಉದ್ದೇಶದಿಂದ ಹಾಗೂ ರೌಡಿಶೀಟರ್‌ಗಳು ಒಳ್ಳೆಯವರಾಗಿ ಬದುಕಲು ಪ್ರೇರೇಪಿಸುವುದಕ್ಕಾಗಿ ಪರೇಡ್‌ ನಡೆಸಲಾಗುತ್ತಿದೆ. ಪ್ರತಿ ರೌಡಿಯ ಸಂಪೂರ್ಣ ಮಾಹಿತಿ ಪೊಲೀಸರ ಬಳಿ ಇದೆ. ಅಕ್ರಮ ಆದಾಯ, ಸಂಬಂಧಗಳ ಚರಿತ್ರೆಯೆ ಇದೆ. ಈಗಾಗಲೇ ದಾಖಲಾದ ಪ್ರಕರಣದಿಂದ ಹೊರಬಂದು ಒಳ್ಳೆಯ ವ್ಯಕ್ತಿಗಳಾಗಿ ಬದಲಾಗುವುದಕ್ಕೆ ಅವಕಾಶ ಮಾಡಲಾಗುತ್ತಿದೆ. ಒಳ್ಳೆಯ ನಡತೆ ಕಂಡುಬಂದ ಮೇಲೆ ರೌಡಿಶೀಟರ್‌ ಪಟ್ಟಿಯಿಂದ ಹೆಸರು ತೆಗೆದುಹಾಕುವ ಪ್ರಕ್ರಿಯೆ ಕೂಡಾ ಪ್ರತಿವರ್ಷವೂ ನಡೆಯುತ್ತದೆ ಎಂದು ಹೇಳಿದರು.
 
ಜಿಲ್ಲೆಯಲ್ಲಿ 2012 ರಿಂದ 2015 ರ ವರೆಗಿನ ಅಪರಾಧ ಪ್ರಕರಣಗಳಿಗೆ ಹೋಲಿಸಿದರೆ 2016 ರಲ್ಲಿ ತುಂಬಾ ಹೆಚ್ಚು ಅಪರಾಧ ಪ್ರಕರಣಗಳು ದಾಖಲಾಗಿವೆ. ಪೊಲೀಸರು ಕೂಡಾ ಸಾಕಷ್ಟು ಅಪರಾಧಿಗಳನ್ನು ಹಿಡಿದಿದ್ದಾರೆ. ರೌಡಿಶೀಟರ್‌ಗಳ ಸಂಖ್ಯೆಯೂ ಹೆಚ್ಚಳವಾಗಿದೆ. ಅಪರಾಧ ತಡೆಯುವುದಕ್ಕಾಗಿ ಪೊಲೀಸರು ನಿರಂತರ ಕಾರ್ಯಾಚರಣೆ ನಡೆಸುತ್ತಾರೆ ಎಂದು ತಿಳಿಸಿದರು.
 
2016 ರಲ್ಲಿ ಸುಮಾರು 8 ಸಾವಿರ ಪ್ರಕರಣಗಳು ದಾಖಲಾಗಿವೆ. 60 ಅತ್ಯಾಚಾರ, 40 ಕ್ಕೂ ಹೆಚ್ಚು ಕೊಲೆ, ಎಂಟು ದರೋಡೆ ಹಾಗೂ 60 ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳು ನಡೆದಿವೆ. ಸಮಾಜದಲ್ಲಿ ಅಶಾಂತಿ ಹರಡಿದ್ದಕ್ಕಾಗಿ 431 ಜನರನ್ನು ರೌಡಿಶೀಟರ್‌ಗೆ ಸೇರ್ಪಡೆ ಮಾಡಲಾಗಿತ್ತು. ಹೀಗಾಗಿ ಸದ್ಯ ಜಿಲ್ಲೆಯಲ್ಲಿ 1,987 ರೌಡಿಶೀಟರ್‌ಗಳಿದ್ದಾರೆ. ಇವರಲ್ಲಿ ತೀವ್ರ ನಿಗಾ ಇಡಲೇ ಬೇಕಾದಂತಹ ಸುಮಾರು 500 ರೌಡಿಗಳನ್ನು ಪರೇಡ್‌ಗೆ ಕರೆಯಲಾಗಿತ್ತು ಎಂದು ಹೇಳಿದರು.
 
ಪೊಲೀಸರ ಕಾರ್ಯಾಚರಣೆ: ಸಮವಸ್ತ್ರ ಹಾಕಿಕೊಳ್ಳದೆ ವಾಹನ ಚಲಾಯಿಸುವ, ಅತಿಹೆಚ್ಚು ಪ್ರಯಾಣಿಕರನ್ನು ತುಂಬಿಸುವುದು ಹಾಗೂ ಪರವಾನಗಿ ಇಲ್ಲದೆ ವಾಹನ ಓಡಿಸುವವರ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಕಳೆದ ವಾರ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಒಂದು ವಾರದಲ್ಲಿ 3,781 ಪ್ರಕರಣಗಳನ್ನು ದಾಖಲಿಸಲಾಗಿದೆ. ನಿಯಮ ಉಲ್ಲಂಘಿಸಿದ ವಾಹನ ಸವಾರರಿಂದ ₹6,43,600 ಮೊತ್ತ ವಸೂಲಿಯಾಗಿದೆ. ಅಲ್ಲಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ನಿಂತು ಜನರಿಗೆ ತೊಂದರೆ ಕೊಡುತ್ತಿದ್ದವರ ಮೇಲೆ ಒಂದು ವಾರದಲ್ಲಿ 560 ಪ್ರಕರಣಗಳು ದಾಖಲಿಸಲಾಗಿದ್ದು, ₹69,750 ದಂಡ ವಸೂಲಿಯಾಗಿದೆ ಎಂದು ಹೇಳಿದರು.
 
ಒಂದು ವಾರದಲ್ಲಿ ಕೈಗೊಂಡ ಕ್ರಮ
 
- 3,781 ಸಂಚಾರ ನಿಯಮ   ಉಲ್ಲಂಘಿಸಿ ದಾಖಲಾದ ಪ್ರಕರಣಗಳು
- ₹6,43,600 ಸಂಚಾರ ನಿಯಮ  ಉಲ್ಲಂಘನೆಯಿಂದ ವಸೂಲಾದ ದಂಡ
- 560 ಸಾರ್ವಜನಿಕ ಸ್ಥಳಗಳಲ್ಲಿ ಕಿರುಕುಳ ನೀಡುತ್ತಿದ್ದ ಪೋಕರಿಗಳು
- ₹69,750 ಪೋಕರಿಗಳಿಂದ ವಸೂಲಿಯಾದ ದಂಡ ಮೊತ್ತ
- 229 ಸೋಮವಾರ ಪರೇಡ್‌ಗೆ ಹಾಜರಾದ ರೌಡಿಶೀಟರ್‌ಗಳು
 
* ಜಿಲ್ಲೆಯಲ್ಲಿ ಬಡ್ಡಿ ವಸೂಲಿ ಮಾಡುವ ರೌಡಿಗಳು ಇದ್ದಾರೆ. ಈ ಬಗ್ಗೆ ಇಲಾಖೆಯ ಗಮನಕ್ಕೆ ಬಂದಿದ್ದು, ಮುಂದಿನ ತಿಂಗಳು ಕ್ರಮ ಕೈಗೊಳ್ಳಲಾಗುವುದು
ಎನ್‌.ಶಶಿಕುಮಾರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.