ADVERTISEMENT

ಇಂಗ್ಲಿಷ್‌ನಲ್ಲಿ ಪ್ರೌಢಿಮೆ ಬೆಳೆಸಲು ‘ಭಾಷಾ ಪ್ರಯೋಗಾಲಯ’

ಕಲಬುರ್ಗಿ ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸ್ಥಾಪನೆ

ಗಣೇಶ ಚಂದನಶಿವ
Published 21 ಫೆಬ್ರುವರಿ 2017, 5:47 IST
Last Updated 21 ಫೆಬ್ರುವರಿ 2017, 5:47 IST
ಇಂಗ್ಲಿಷ್‌ನಲ್ಲಿ ಪ್ರೌಢಿಮೆ ಬೆಳೆಸಲು ‘ಭಾಷಾ ಪ್ರಯೋಗಾಲಯ’
ಇಂಗ್ಲಿಷ್‌ನಲ್ಲಿ ಪ್ರೌಢಿಮೆ ಬೆಳೆಸಲು ‘ಭಾಷಾ ಪ್ರಯೋಗಾಲಯ’   

ಕಲಬುರ್ಗಿ: ಹೈದರಾಬಾದ್‌ ಕರ್ನಾಟಕ ಪ್ರದೇಶದ ಶಿಕ್ಷಕರಲ್ಲಿ ಇಂಗ್ಲಿಷ್‌ ಭಾಷೆಯ ಪ್ರೌಢಿಮೆ ಬೆಳೆಸಿ, ಆ ಮೂಲಕ ವಿದ್ಯಾರ್ಥಿಗಳ ಕಲಿಕಾ ಮಟ್ಟ ಹೆಚ್ಚಿಸಲು ಇಲ್ಲಿಯ ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ‘ಭಾಷಾ ಪ್ರಯೋಗಾಲಯ’ ಸ್ಥಾಪಿಸಲಾಗುತ್ತಿದೆ.

ಹೈದರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಎಚ್‌ಕೆಆರ್‌ಡಿಬಿ) ಇದಕ್ಕೆ ₹33.50 ಲಕ್ಷ ಅನುದಾನ ನೀಡಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ ಪ್ರಸಕ್ತ ಸಾಲಿನ ಜೂನ್‌ನಿಂದ ಈ ಪ್ರಯೋಗಾಲಯ ಕಾರ್ಯಾರಂಭ ಮಾಡಲಿದೆ.

ಇಲ್ಲಿಯ ಚಂದ್ರಶೇಖರ ಪಾಟೀಲ ಕ್ರೀಡಾಂಗಣದ ಬಳಿ ಇರುವ ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯದ ಒಂದು ಕೊಠಡಿಯಲ್ಲಿ ಈ ಪ್ರಯೋಗಾಲಯ ಸ್ಥಾಪನೆಯಾಗಲಿದೆ. ಕೊಠಡಿ ನವೀ­ಕರಣ, ಅಗತ್ಯ ಉಪಕರಣ ಅಳ­ವ­ಡಿಕೆಯ ಕಾಮಗಾರಿಯನ್ನು ಕಲಬುರ್ಗಿ ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿದ್ದು, ಕಾಮ­ಗಾರಿ ಇನ್ನಷ್ಟೇ ಆರಂಭಗೊಳ್ಳಬೇಕಿದೆ.

ಹೈದರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ 25 ಕಂಪ್ಯೂಟರ್‌­ಗಳನ್ನು ನೀಡಲಿದೆ. ಬೆಂಗಳೂರಿನಲ್ಲಿರುವ ಪ್ರಾದೇಶಿಕ ಇಂಗ್ಲಿಷ್‌ ಸಂಸ್ಥೆ  ಬಳಸುತ್ತಿರುವ ಸಾಫ್ಟ್‌ವೇರ್‌ ಅನ್ನೇ ಖರೀದಿಸಿ, ಇಲ್ಲಿ ಅಳವಡಿಸಲಾಗುವುದು. ಈ ಸಾಫ್ಟ್‌ವೇರ್‌ನ್ನು ‘ಬ್ರಿಟಿಷ್‌ ಕೌನ್ಸಿಲ್‌ ಆಫ್‌ ಇಂಡಿಯಾ’ ಅಭಿವೃದ್ಧಿ ಪಡಿಸಿದೆ. ಈ ಪ್ರಯೋಗಾಲಯಕ್ಕೆ ಅಂತರ್ಜಾಲ ಮತ್ತು ವೈಫೈ ಸೌಲಭ್ಯ ಕಲ್ಪಿಸಲಾಗುವುದು.  ಇಲ್ಲಿ ತರಬೇತುದಾರರು ಇರಲಿದ್ದಾರೆ.

‘ನಮ್ಮ ಶಿಕ್ಷಕರಲ್ಲಿ ಇಂಗ್ಲಿಷ್‌ ಜ್ಞಾನದ ಕೊರತೆ ಇಲ್ಲ. ಆದರೆ, ಸ್ಪಷ್ಟ ಉಚ್ಚಾರಣೆ ಸಮಸ್ಯೆ ಇದೆ. ಶಿಕ್ಷಕರು ಪದಗಳನ್ನು ಸ್ಪಷ್ಟವಾಗಿ ಉಚ್ಚಾರ ಮಾಡಿದರೆ ವಿದ್ಯಾರ್ಥಿ­ಗಳು ಅದನ್ನು ಅನುಸರಿಸು­ತ್ತಾರೆ. ಉಚ್ಚಾರಣೆ ಸರಿಯಾಗಿದ್ದರೆ ಆ ಪದಗಳ ಸ್ಪೆಲ್ಲಿಂಗ್‌ ಕಂಠಪಾಠ ಮಾಡುವ ಅವಶ್ಯಕತೆ ಅಷ್ಟಾಗಿ ಇರುವುಲ್ಲ. ಶಿಕ್ಷಕರಿಗೆ ತರಬೇತಿ ನೀಡುವ ಮೂಲಕ ಮಕ್ಕಳಲ್ಲಿ ಇಂಗ್ಲಿಷ್‌ ಕಲಿಕಾ ಮಟ್ಟ ಹೆಚ್ಚಿಸುವುದು ಈ ಭಾಷಾ ಪ್ರಯೋಗಾಲಯ ಸ್ಥಾಪಿಸುವ ಮುಖ್ಯ ಉದ್ದೇಶ’ ಎನ್ನುವುದು ಹೈದರಾ­ಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಶೈಕ್ಷಣಿಕ ಸಲಹೆಗಾರ ಎನ್‌.ಬಿ. ಪಾಟೀಲ ಅವರ ವಿವರಣೆ.

‘ಈ ಕೇಂದ್ರದಲ್ಲಿ ಏಕಕಾಲಕ್ಕೆ 25 ಜನ ಶಿಕ್ಷಕರಿಗೆ ತರಬೇತಿ ನೀಡಲು ಸಾಧ್ಯ. ಹೈದರಾಬಾದ್‌ ಕರ್ನಾಟಕದ ಸರ್ಕಾರಿ ಪ್ರೌಢ ಶಾಲಾ ಇಂಗ್ಲಿಷ್‌ ಶಿಕ್ಷಕರಿಗೆ ಸರದಿಯಂತೆ ತರಬೇತಿ ನೀಡಲಾಗುವುದು’ ಎಂದು ಅವರು ಹೇಳಿದರು.

ಎರಡನೇ ಕೇಂದ್ರ: ಪಾಟೀಲ
‘ಬೆಂಗಳೂರು ವಿಶ್ವವಿದ್ಯಾಲ­ಯದ ಜ್ಞಾನಭಾರತಿ ಆವರಣದಲ್ಲಿ  ದಕ್ಷಿಣ ಭಾರತ ಪ್ರಾದೇಶಿಕ ಇಂಗ್ಲಿಷ್‌ ಸಂಸ್ಥೆ  ಕಾರ್ಯನಿರ್ವಹಿಸುತ್ತಿದೆ. ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಮತ್ತು ತಮಿಳುನಾಡು ರಾಜ್ಯಗಳು ಈ ಕೇಂದ್ರದ ವ್ಯಾಪ್ತಿಯಲ್ಲಿವೆ. ಅದನ್ನು ಹೊರತುಪಡಿಸಿದರೆ ನಮ್ಮ ರಾಜ್ಯದಲ್ಲಿ ಸರ್ಕಾರಿ ಸ್ವಾಮ್ಯದ ಎರಡನೇ ಇಂಗ್ಲಿಷ್‌ ಭಾಷಾ ಪ್ರಯೋಗಾಲಯ ಇದಾಗಲಿದೆ’ ಎನ್ನುತ್ತಾರೆ ಬೆಂಗಳೂರಿನ ದಕ್ಷಿಣ ಭಾರತ ಪ್ರಾದೇಶಿಕ ಇಂಗ್ಲಿಷ್‌ ಸಂಸ್ಥೆಯ  ಹಿಂದಿನ ನಿರ್ದೇಶಕರೂ ಆಗಿರುವ ಎನ್‌.ಬಿ. ಪಾಟೀಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT