ADVERTISEMENT

ಇಟಗಾ–ಜೇರಟಗಿ ರಸ್ತೆಗೆ ₹35ಕೋಟಿ

ಜೇರಟಗಿ : ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2018, 10:59 IST
Last Updated 22 ಮಾರ್ಚ್ 2018, 10:59 IST

ಜೇವರ್ಗಿ: ‘ತಾಲ್ಲೂಕಿನ ಇಟಗಾದಿಂದ ಅಂಕಲಗಾ ಮಾರ್ಗವಾಗಿ ಜೇರಟಗಿವರೆಗಿನ 23ಕಿ.ಮೀ ರಸ್ತೆ ಸುಧಾರಣೆಗೆ ರಾಜ್ಯ ಸರ್ಕಾರ ಲೋಕೋಪಯೋಗಿ ಇಲಾಖೆಯಿಂದ ನಬಾರ್ಡ್ (ಆರ್.ಐ.ಡಿ.ಎಫ್)–23ಯೋಜನೆ ಅಡಿಯಲ್ಲಿ ₹35ಕೋಟಿ ಅನುದಾನ ಬಿಡುಗಡೆಗೊಳಿಸಿ ನಿಗದಿತ ಅವಧಿಯಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಳಿಸುವ ಮೂಲಕ ಈ ಭಾಗದ ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.

ಬುಧವಾರ ತಾಲ್ಲೂಕಿನ ಜೇರಟಗಿ ಗ್ರಾಮದ ಅಮರಪ್ಪ ದೊಡ್ಡಪ್ಪ ನಿಷ್ಠಿ ದೇಶಮುಖ ಪ್ರೌಢಶಾಲೆಯ ಆವರಣದಲ್ಲಿ ಲೋಕೋಪಯೋಗಿ ಇಲಾಖೆ ಆಯೋಜಿಸಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕಳೆದ 5ವರ್ಷಗಳಲ್ಲಿ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ರಾಜ್ಯದಲ್ಲಿ ಸಂಕಷ್ಟಕ್ಕೆ ಸಿಲುಕಿದ ರೈತರಿಗೆ ಸಹಾಯಹಸ್ತ ಚಾಚುವ ನಿಟ್ಟಿನಲ್ಲಿ ರೈತರ
₹8ಸಾವಿರ ಕೋಟಿ ಸಾಲ ಮನ್ನಾ ಮಾಡಿದೆ. ತೊಗರಿ ಅಭಿವೃದ್ಧಿ ಮಂಡಳಿಯಿಂದ ರೈತರ 35ಲಕ್ಷ ಕ್ವಿಂಟಲ್ ತೊಗರಿ ಖರೀದಿಸಲಾಗಿದೆ. ರಾಜ್ಯ ಸರ್ಕಾರ ಪ್ರತಿ ಕ್ವಿಂಟಲ್ ತೊಗರಿಗೆ ₹550 ಸಹಾಯಧನ ನೀಡಿದೆ. ಸಮಾಜದಲ್ಲಿ ಸಾಮರಸ್ಯ ಮೂಡಿಸುವ ಉದ್ದೇಶದಿಂದ ರಾಜ್ಯದ ಎಲ್ಲಾ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿದೆ’ ಎಂದು ಸಚಿವರು ತಿಳಿಸಿದರು.

ADVERTISEMENT

ಶಾಸಕ ಡಾ.ಅಜಯಸಿಂಗ್ ಮಾತನಾಡಿ, ‘ತಾಲ್ಲೂಕಿನ ಕೂಟನೂರ ಕಲ್ಲಹಂಗರಗಾ ರಸ್ತೆ ಸುಧಾರಣೆಗೆ ₹7ಕೋಟಿ ಅನುದಾನ ಬಿಡುಗಡೆಗೊಳಿಸಲಾಗಿದೆ. ಕಳೆದ 5ವರ್ಷದ ಅವಧಿಯಲ್ಲಿ ತಾಲ್ಲೂಕಿನಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳಿಗೆ ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ₹175ಕೋಟಿ ಅನುದಾನ ಬಿಡುಗಡೆಯಾಗಿದೆ’ ಎಂದು ಅವರು ಹೇಳಿದರು.

‘ತಾಲ್ಲೂಕಿನ ಪ್ರತಿ ಹಳ್ಳಿಗಳಿಗೆ ರಸ್ತೆ, ಕುಡಿಯುವ ನೀರು, ಚರಂಡಿ ಸೇರಿದಂತೆ ಮೂಲಸೌಕರ್ಯ ಕಲ್ಪಿಸಲಾಗಿದೆ. ಬಳಬಟ್ಟಿ ಚಾಮನಾಳ ರಸ್ತೆ ಸುಧಾರಣೆ ಕಾಮಗಾರಿ ಪ್ರಗತಿ ಹಂತದಲ್ಲಿದೆ. ಜೇರಟಗಿ ಮತ್ತು ಇಟಗಾ ಗ್ರಾಮದ ಕುಡಿಯುವ ನೀರಿನ ಯೋಜನೆಗೆ ₹55ಲಕ್ಷ ಅನುದಾನ ಬಿಡುಗಡೆಗೊಳಿಸಲಾಗಿದೆ’ ಎಂದು ತಿಳಿಸಿದರು.

ಮಾಜಿ ಶಾಸಕ ಅಲ್ಲಮಪ್ರಭು ಪಾಟೀಲ, ತೊಗರಿ ಮಂಡಳಿ ಮಾಜಿ ಅಧ್ಯಕ್ಷ ಅಮೃತಗೌಡ ಪಾಟೀಲ ವಡಗೇರಾ, ಮುಖಂಡರಾದ ಅಣ್ಣಾರಾವ್ ನಿಷ್ಠಿ ದೇಶಮುಖ, ರುಕುಂಪಟೇಲ್ ಇಜೇರಿ, ಬೈಲಪ್ಪ ನೆಲೋಗಿ, ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ದೇವಕ್ಕೆಮ್ಮ ಚನಮಲ್ಲಯ್ಯ ಹಿರೇಮಠ, ಇಜೇರಿ ಜಿಲ್ಲಾ ಪಂಚಾಯಿತಿ ಸದಸ್ಯ ಶಾಂತಪ್ಪ ಕೂಡಲಗಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಚಂದಮ್ಮ ಸಂಗಣ್ಣ ಇಟಗಾ, ಜೇರಟಗಿ ತಾಲ್ಲೂಕು ಪಂಚಾಯಿತಿ ಸದಸ್ಯ ಸಾವಿತ್ರಿ ಮಹಾಂತೇಶ ಆನೂರ, ಜೇರಟಗಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಲಿಮಾಬೀ ಹಸನಸಾಬ್ ನದಾಫ್, ಅಂಕಲಗಾ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾಮಲಾ ಶರಣಬಸ್ಸು ಕಲಶೆಟ್ಟಿ ಪಾಲ್ಗೊಂಡಿದ್ದರು.
**
ತಾಲ್ಲೂಕಿನ ಕೋನಾ ಹಿಪ್ಪರಗಾ–ಕಲಬುರ್ಗಿ ತಾಲ್ಲೂಕಿನ ಸರಡಗಿ (ಬಿ) ಮಧ್ಯೆ ಭೀಮಾ ನದಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಸೇತುವೆ ಕಾಮಗಾರಿಗೆ ₹54ಕೋಟಿ ಅನುದಾನ ನೀಡಲಾಗಿದೆ. ಸೇತುವೆ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ.

ಡಾ.ಅಜಯಸಿಂಗ್, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.