ADVERTISEMENT

ಉದ್ಯೋಗ ಖಾತರಿ ಟೊಂಕಕಟ್ಟಿದ ‘ಬೆವರು ಹನಿ ಬಳಗ’

​ಪ್ರಜಾವಾಣಿ ವಾರ್ತೆ
Published 19 ಮೇ 2017, 6:03 IST
Last Updated 19 ಮೇ 2017, 6:03 IST
ಚಿಂಚೋಳಿ ತಾಲ್ಲೂಕು ಶಾದಿಪುರದಲ್ಲಿ ಗ್ರಾ.ಪಂ ಗುರುವಾರ ಹಮ್ಮಿಕೊಂಡ ಉದ್ಯೋಗ ಖಾತರಿ ಕೂಲಿಕಾರರ ಸಮಾವೇಶದಲ್ಲಿ ಸಂಸದೀಯ ಕಾರ್ಯದರ್ಶಿ ಡಾ.ಉಮೇಶ ಜಾಧವ್‌ ಉದ್ಯೋಗ ಚೀಟಿ ವಿತರಿಸಿದರು
ಚಿಂಚೋಳಿ ತಾಲ್ಲೂಕು ಶಾದಿಪುರದಲ್ಲಿ ಗ್ರಾ.ಪಂ ಗುರುವಾರ ಹಮ್ಮಿಕೊಂಡ ಉದ್ಯೋಗ ಖಾತರಿ ಕೂಲಿಕಾರರ ಸಮಾವೇಶದಲ್ಲಿ ಸಂಸದೀಯ ಕಾರ್ಯದರ್ಶಿ ಡಾ.ಉಮೇಶ ಜಾಧವ್‌ ಉದ್ಯೋಗ ಚೀಟಿ ವಿತರಿಸಿದರು   

ಚಿಂಚೋಳಿ: ಅದು ನಿಜಾಮ ಕಾಲದಲ್ಲಿ ನಿರ್ಮಾಣವಾದ ಹಳೆಯ ಕೆರೆ. ಶತಮಾನಗಳ ಚರಿತ್ರೆ ಹೊಂದಿರುವ ಈ ಕೆರೆ ಬಹುತೇಕ ಹೂಳು ತುಂಬಿದೆ. ಇದರಿಂದ ಕೆರೆಯಲ್ಲಿ ನೀರು ಸಂಗ್ರಹ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತ ಸಾಗಿದೆ.

ಸಂಗ್ರಹಗೊಂಡ ಹೂಳು ತೆಗೆಯುವ ಇಚ್ಛಾಶಕ್ತಿಯನ್ನು ಯಾರೂ ಪ್ರದರ್ಶಿಸಿರಲಿಲ್ಲ. ಇದರಿಂದಾಗಿ ಬಡವರು ಉದ್ಯೋಗ ಅರಸಿ, ಮುಂಬೈ, ಪುಣೆ, ಗೋವಾ, ಹೈದರಾಬಾದ್‌ ಮೊದಲಾದ ಕಡೆ ಗುಳೆ ಹೋಗಿ ಹಾದಿ ಬೀದಿಯಲ್ಲಿ ವಾಸ ಮಾಡುವುದು ಮಾಮೂಲಾಗಿತ್ತು.

ಗುಳೆ ಹೋದ ಜನ ಆಯಕಟ್ಟಿನ ಸ್ಥಳದಲ್ಲಿ ಕಾಯುತ್ತಿರುತ್ತಾರೆ. ಕೂಲಿಗಳು ಬೇಕಾದರೆ ಅಲ್ಲಿಗೆ ಬಂದು ಅವರನ್ನು ಕರೆದೊಯ್ಯುತ್ತಾರೆ. ಯಾರೂ ಅಲ್ಲಿಗೆ ಬರದಿದ್ದರೆ, ಇಲ್ಲವೆ ಕೆಲಸ ಕಮ್ಮಿ ಇದ್ದು ಕೂಲಿಕಾರರು ಹೆಚ್ಚಾಗಿ ನೆರೆದಿದ್ದರೆ, ಅವರಿಗೆ ಅಂದು ಕೆಲಸ ಸಿಗದ ಸ್ಥಿತಿ ಮಹಾ ನಗರಗಳಲ್ಲಿ ಸಾಮಾನ್ಯ.

ADVERTISEMENT

ಇದನ್ನು ಅರಿತ ಜನವಾದಿ ಮಹಿಳಾ ಸಂಘಟನೆ, ಪ್ರಜ್ಞಾನ ಕಾನೂನು ಸಲಹಾ ಕೇಂದ್ರ ಮತ್ತು ಬೆವರು ಹನಿ ಬಳಗದವರು ಸೇರಿ ಸ್ವಾಭಿಮಾನದ ಬದುಕಿಗಾಗಿ ಗುಳೆ ಹೋಗದೇ ನಿಮ್ಮ ಊರಿನಲ್ಲಿಯೇ ಕೆಲಸ ಮಾಡಿ ಎಂದು ಹುರಿದುಂಬಿಸಿದ್ದರ ಫಲವಾಗಿ ಸುಮಾರು 6 ಸಾವಿರಕ್ಕೂ ಹೆಚ್ಚು ಜನರು ಗುಳೆ ಹೋಗದೇ ಸ್ವಗ್ರಾಮದಲ್ಲಿಯೇ ದುಡಿಯುತ್ತಿದ್ದಾರೆ.

ಇದಕ್ಕೆ ಜಿಲ್ಲಾ ಪಂಚಾಯಿತಿ ಬೆನ್ನಿಗೆ ನಿಂತಿದ್ದರೆ, ಗ್ರಾ.ಪಂ ಬೆವರು ಹನಿ ಬಳಗದೊಂದಿಗೆ ಕೈಜೋಡಿಸಿದೆ. ಈ ಮೂಲಕ ಉದ್ಯೋಗ ಖಾತರಿ ಯೋಜನೆಯ ಯಶೋಗಾಥೆ ತಾಲ್ಲೂಕಿನಲ್ಲಿ ಆರಂಭವಾಗಿದೆ.

ಹೊಲದಂತೆ ಕಾಣುತ್ತಿದ್ದ ಹೂಳು ತುಂಬಿದ್ದ ಕೆರೆಯಲ್ಲಿ ಚಲನಚಿತ್ರ ನಟ, ಸಾಮಾಜಿಕ ಕಾರ್ಯಕರ್ತರು, ನೂರಾರು ಕೂಲಿಕಾರ್ಮಿಕರು ಮತ್ತು ಜನಪ್ರತಿನಿಧಿಗಳು,ಅಧಿಕಾರಿಗಳು ಸೇರಿದ್ದರು. ಅವರೆಲ್ಲರೂ ಹಮ್ಮು ಬಿಮ್ಮು ಮರೆತು ಕೈಯಲ್ಲಿ ಪಿಕಾಸು, ಗುದ್ದಲಿ, ಸಲಿಕೆ, ಬುಟ್ಟಿ ಹಿಡಿದು ಕೆರೆ ಹೂಳೆತ್ತಲು ಕಾರ್ಮಿಕರೊಂದಿಗೆ ಕೈಜೋಡಿಸಿದರು. ನಂತರ ಟ್ರ್ಯಾಕ್ಟರ್‌, ಜೀಪ್‌, ಬೈಕ್‌ಗಳಲ್ಲಿ  ಕೆಲಸಕ್ಕೆ ಬಂದವರು ಖಾತರಿ ಕಾರ್ಮಿಕ ಜಾಗೃತಿ ಸಮಾವೇಶದತ್ತ ಹೆಜ್ಜೆ ಹಾಕಿದರು ಇದು ಗುರುವಾರ ತಾಲ್ಲೂಕಿನ ಶಾದಿಪುರ ಕೆರೆಯಲ್ಲಿ ಕಂಡುಬಂದ ದೃಶ್ಯ.

28ಸಾವಿರ ಮಾನವ ದಿನಗಳ ಸೃಜನೆ: ಜಿಲ್ಲಾ ಪಂಚಾಯಿತಿ ಸಿಇಒ ಹೆಬ್ಸಿಬಾರಾಣಿ ಕೋರ್ಲಪಾಟಿ ಮಾತನಾಡಿ, ಇಲ್ಲಿವರೆಗೆ ಚಿಂಚೋಳಿ ತಾಲ್ಲೂಕಿನಲ್ಲಿ 28 ಸಾವಿರ ಮಾನವ ದಿನಗಳು ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಸೃಜನೆಯಾಗಿದೆ ಎಂದರು. ಅವರು ತಾಲ್ಲೂಕಿನ ಶದಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೇವೂ ನಾಯಕ ತಾಂಡದಲ್ಲಿ ಆಯೋಜಿಸಿದ್ದ ಉದ್ಯೋಗ ಖಾತ್ರಿ ಯೋಜನೆಯ ಕೂಲಿಕಾರ್ಮಿಕ ಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಪಾರಂಪರಿಕ ಪದ್ಧತಿಯಲ್ಲಿ ನೀರು ಸಂರಕ್ಷಿಸಿ: ಸುಸ್ಥಿರ ಅಭಿವೃದ್ಧಿ ಹಾಗೂ ಪರಿಸರದ ಸಮತೋಲನೆಗಾಗಿ ನಮ್ಮ ಪುರಾತನ ಪಾರಂಪರಿಕ ಜಲಾನಯನ ವ್ಯವಸ್ಥೆ ಕಾಪಾಡಿಕೊಳ್ಳಬೇಕು. ಪಾರಂಪರಿಕ ಪದ್ಧತಿಯಂತೆ ನೀರು ಸಂರಕ್ಷಣೆಗೆ ಮುಂದಾಗಬೇಕೆಂದು ಚಲನಚಿತ್ರ ನಟ ಚೇತನ ತಿಳಿಸಿದರು.

‘ಜಗತ್ತಿನಲ್ಲಿಯೇ ದುಡಿಯುವ ಹಕ್ಕು ನೀಡಿದ ಏಕೈಕ ದೇಶ ಭಾರತವಾಗಿದೆ. ವರ್ಷದಲ್ಲಿ 100 ದಿನ ಉದ್ಯೋಗ ನಿಮ್ಮ ಹಕ್ಕಾಗಿದೆ. ಇದು ಭಿಕ್ಷೆಯಲ್ಲ’ ಎಂದು ಸಂಸದೀಯ ಕಾರ್ಯದರ್ಶಿ ಡಾ.ಉಮೇಶ ಜಾಧವ್‌ ತಿಳಿಸಿದರು.

ಜಲ ಸಂರಕ್ಷಣೆಗೆ ಖಾತರಿ ವರ: ‘ಉದ್ಯೋಗ ಖಾತರಿ ಯೋಜನೆ ನೆಲ, ಜಲ, ವನ ಸಂರಕ್ಷಣೆಯೊಂದಿಗೆ ಸುಸ್ಥಿರ ಅಭಿವೃದ್ಧಿಗೆ ಪೂರಕವಾದ ಯೋಜನೆಯಾಗಿದೆ’ ಎಂದು ವಕೀಲ ಅನಂತ ನಾಯಕ್‌ ತಿಳಿಸಿದರು.

7 ಸಾವಿರ ಕಾರ್ಮಿಕರಿಂದ ಕೆಲಸಕ್ಕಾಗಿ ಬೇಡಿಕೆ: ‘ನಾವು ನಿಮಗಾಗಿ, ನಿಮ್ಮ ಹಕ್ಕು ತಿಳಿಸುವುದಕ್ಕಾಗಿ, ನಿಮಗೆ ಸ್ವಾಭಿಮಾನದ ಬದುಕು ಕಟ್ಟಿಕೊಡುವ ಸಂಕಲ್ಪ ಹೊತ್ತು ಮನೆ ಬಿಟ್ಟು, ಸರ್ಕಾರಿ ಕಚೇರಿಗಳಲ್ಲಿ ಉಳಿದು 7ಸಾವಿರಕ್ಕೂ ಹೆಚ್ಚು ಉದ್ಯೋಗ ಚೀಟಿಗಾಗಿ ಬೇಡಿಕೆಯನ್ನು ಗ್ರಾ.ಪಂ.ಗಳಿಗೆ ಸಲ್ಲಿಸಿದ್ದೇವೆ’ ಎಂದು ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ  ಕೆ.ನೀಲಾ ತಿಳಿಸಿದರು.

ತಹಶೀಲ್ದಾರ್‌ ದಯಾನಂದ ಪಾಟೀಲ, ತಾ.ಪಂ ಕಾರ್ಯನಿರ್ವಹಕ ಅಧಿಕಾರಿ ಅನಿಲ ರಾಠೋಡ್‌ ಮಾತನಾಡಿದರು. ಗ್ರಾ.ಪಂ ಅಧ್ಯಕ್ಷೆ ಪುಷ್ಪಾ ತುಳಜಪ್ಪ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ನಂದಾದೇವಿ ಮುಂಗೋಂಡಿ, ಚಂದಮ್ಮಾ ಗೋಳಾ, ಸೌಭಾಗ್ಯಮ್ಮ ಮಠಪತಿ, ಅಶ್ವಿನಿ ಮದನಕರ್‌, ಅಮರ ಲೊಡ್ಡನೋರ್‌, ಅಶೋಕ ಚವ್ಹಾಣ, ಗೋಪಾಲ ಜಾಧವ್‌ ಇದ್ದರು. ಪಿಡಿಒ ರಾಮಕೃಷ್ಣ ಸ್ವಾಗತಿಸಿದರು. ಡಾ.ಮೀನಾಕ್ಷಿ ಬಾಳಿ ನಿರೂಪಿಸಿದರು. ಭೀಮಾಶಂಕರ ವಂದಿಸಿದರು.

*

ದುಡಿಯುವ ಜನರಿಗೆ ಉದ್ಯೋಗ ಖಾತರಿ ಅಡಿಯಲ್ಲಿ ಕೆಲಸ ಕೊಡಲು ಪ್ರತಿ ಪಂಚಾಯಿತಿ ಕಚೇರಿಯಲ್ಲಿ ಪ್ರತ್ಯೇಕ ಸಿಬ್ಬಂದಿ ಅಗತ್ಯವಿದೆ
ಕೆ.ನೀಲಾ, ರಾಜ್ಯ  ಉಪಾಧ್ಯಕ್ಷೆ,
ಜನವಾದಿ ಮಹಿಳಾ ಸಂಘಟನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.