ADVERTISEMENT

ಕಲಬುರ್ಗಿ ಗ್ರಾಮೀಣ; ‘ಕುಸ್ತಿಪಟು’ಗೆ ಕೋಕ್‌

ಚಿಂಚೋಳಿ, ಚಿತ್ತಾಪುರ ಕ್ಷೇತ್ರಕ್ಕೆ ಹಳಬರಿಗೆ ಮಣೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2018, 9:17 IST
Last Updated 21 ಏಪ್ರಿಲ್ 2018, 9:17 IST

ಕಲಬುರ್ಗಿ: ಮಾಜಿ ಸಚಿವ ರೇವೂ ನಾಯಕ ಬೆಳಮಗಿ ಅವರಿಗೆ ಕಲಬುರ್ಗಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ ಕೈತಪ್ಪಿದ್ದು, ಜಿಲ್ಲಾ ಪಂಚಾಯಿತಿ ಸದಸ್ಯ ಬಸವರಾಜ ಮುತ್ತಿಮೂಡ್‌ ಅವರನ್ನು ಕಣಕ್ಕಿಳಿಸಿದೆ.

ಟಿಕೆಟ್‌ ಕೈತಪ್ಪಿರುವ ರೇವೂ ನಾಯಕ ಅವರ ಮುಂದಿನ ನಡೆ ಏನು ಎಂಬುದು ಇನ್ನೂ ಗೊತ್ತಾಗಿಲ್ಲ. ಅವರು ಸಂಪರ್ಕಕ್ಕೂ ಸಿಗಲಿಲ್ಲ. ಆದರೆ, ಅವರ ಪುತ್ರಿ ಸುನಿತಾ ಅವರು ಯಡಿಯೂರಪ್ಪ ಮತ್ತು ಶೋಭಾ ಕರಂದ್ಲಾಜೆ ವಿರುದ್ಧ ‘ಟಿಕೆಟ್‌ ಮಾರಿಕೊಂಡಿದ್ದಾರೆ’ ಎಂಬ ಆರೋಪ ಮಾಡಿದ್ದಾರೆ.

ಏತನ್ಮಧ್ಯೆ ಅಖಿಲ ಭಾರತ ಬಂಜಾರ ಸೇವಾ ಸಂಘದ ಜಿಲ್ಲಾ ಘಟಕದವರು ಏ.21ರಂದು ತುರ್ತುಸಭೆ ಕರೆದಿದ್ದಾರೆ. ‘ಮಾಜಿ ಸಚಿವರಾಗಿರುವ ಸಮಾಜದ ಇಬ್ಬರನ್ನು ತಿರಸ್ಕರಿಸಿ, ಜಾತಿ ಮತಗಳು ಇಲ್ಲದ ವ್ಯಕ್ತಿಗೆ ಟಿಕೆಟ್‌ ನೀಡಿದ್ದಾರೆ. ಈ ಬಗ್ಗೆ ಚರ್ಚಿಸಲು ಬೆಳಿಗ್ಗೆ 11ಕ್ಕೆ ಕಲಬುರ್ಗಿಯ ಲಂಬಾಣಿ ವಸತಿ ನಿಲಯದಲ್ಲಿ ಸಭೆ ಕರೆಯಲಾಗಿದೆ. ಸಮಾಜದ ಎಲ್ಲರೂ ಪಾಲ್ಗೊಳ್ಳಬೇಕು’ ಎಂದು ಸಂಘದ ಜಿಲ್ಲಾ ಘಟಕ ಪ್ರಧಾನ ಕಾರ್ಯದರ್ಶಿ ದಿನೇಶ್‌ ಪವಾರ ಮನವಿ ಮಾಡಿದ್ದಾರೆ.

ADVERTISEMENT

ನಿರೀಕ್ಷೆಯಂತೆ ಚಿಂಚೋಳಿ ಮತ್ತು ಚಿತ್ತಾಪುರ ಕ್ಷೇತ್ರಗಳಿಗೆ ಸುನೀಲ್ ವಲ್ಲ್ಯಾಪುರ ಮತ್ತು ವಾಲ್ಮೀಕ್‌ ನಾಯಕ್‌ ಅವರಿಗೆ ಟಿಕೆಟ್‌ ನೀಡಲಾಗಿದೆ. ಚಿಂಚೋಳಿ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ಗೆ ಸುನೀಲ್‌ ವಲ್ಲ್ಯಾಪುರ, ಜಿಲ್ಲಾ ಪಂಚಾಯಿತಿ ಸದಸ್ಯ ಸಂಜೀವನ ಯಾಕಾಪುರ, ಮುಖಂಡ ಸುಭಾಸ ರಾಠೋಡ ಮಧ್ಯೆ ತೀವ್ರ ಪೈಪೋಟಿ ನಡೆದಿತ್ತು.

ಸಾಮಾಜಿಕ ನ್ಯಾಯ?

ಕಳೆದ ಚುನಾವಣೆಗಳಲ್ಲಿ ಎರಡು ಕ್ಷೇತ್ರಗಳಲ್ಲಿ ಬಂಜಾರ ಸಮಾಜದವರಿಗೆ ಬಿಜೆಪಿ ಟಿಕೆಟ್‌ ನೀಡಿತ್ತು. ಈಗ ಚಿತ್ತಾಪುರದಲ್ಲಿ ಬಂಜಾರ, ಚಿಂಚೋಳಿಯಲ್ಲಿ ಭೋವಿ ಹಾಗೂ ಕಲಬುರ್ಗಿ ಗ್ರಾಮೀಣದಲ್ಲಿ ದಲಿತರಿಗೆ ಟಿಕೆಟ್‌ ನೀಡಲಾಗಿದೆ.

ಜಿಲ್ಲೆಯ ‘ಟಿಕೆಟ್‌ ಕೊಡುವಲ್ಲಿ ಸಾಮಾಜಿಕ ನ್ಯಾಯ’ ಪಾಲನೆ ಮಾಡುವುದಾಗಿ ಬಿಜೆಪಿಯ ಉನ್ನತ ಮೂಲಗಳು ಈ ಹಿಂದೆಯೇ ಖಚಿತ ಪಡಿಸಿದ್ದವು. ಆ ಬಗ್ಗೆ ‘ಪ್ರಜಾವಾಣಿ’ಯಲ್ಲಿ ವರದಿಯೂ ಪ್ರಕಟವಾಗಿತ್ತು. ಗ್ರಾಮೀಣ ಕ್ಷೇತ್ರದಲ್ಲಿ ದಲಿತ ಎಡಗೈ ಪಂಗಡಕ್ಕೆ ಸೇರಿದ ಬಸವರಾಜ ಅವರಿಗೆ ಟಿಕೆಟ್‌ ನೀಡುವ ಮೂಲಕ ಜಿಲ್ಲೆಯಲ್ಲಿ ದಲಿತ ಮತಗಳನ್ನು ತಮ್ಮತ್ತ ಸೆಳೆಯುವ ತಂತ್ರ ಬಿಜೆಪಿಯದ್ದು. ಆದರೆ, ಆ ಕ್ಷೇತ್ರದಲ್ಲಿ ಬಂಜಾರ ಸಮಾಜದವರ ನಡೆ ಏನು ಎಂಬುದು ಇನ್ನಷ್ಟೇ ನಿರ್ಧಾರವಾಗಬೇಕಿದೆ.

‘ಯಡಿಯೂರಪ್ಪ ಟಿಕೆಟ್ ಮಾರಿಕೊಂಡಿದ್ದಾರೆ’

‘ಕಳೆದ ಚುನಾವಣೆಯಲ್ಲಿ ಕೆಜೆಪಿಗೆ ಹೋಗಲಿಲ್ಲ ಎನ್ನುವ ಕಾರಣಕ್ಕೆ ಈಗ ನಮ್ಮ ತಂದೆಗೆ ಟಿಕೆಟ್‌ ತಪ್ಪಿಸಿದ್ದಾರೆ’ ಎಂದು ಅವರು ಮಾಜಿ ಸಚಿವ ರೇವೂ ನಾಯಕ ಬೆಳಮಗಿ ಅವರ ಪುತ್ರಿ ಸುನಿತಾ ಆರೋಪಿಸಿದ್ದಾರೆ. ‘ಈ ಭಾಗದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ್ದು ನಮ್ಮ ತಂದೆ. ಕ್ಷೇತ್ರದಲ್ಲಿ ನಡೆದ ಸಮೀಕ್ಷೆಗಳ ವರದಿಗಳೂ ನಮ್ಮ ಪರವಾಗಿದ್ದವು. ಬೇಕಿದ್ದರೆ ಇನ್ನೊಮ್ಮೆ ಸಮೀಕ್ಷೆ ನಡೆಸಿ ಟಿಕೆಟ್‌ ನೀಡಲಿ’ ಎಂದು ಅವರು ಹೇಳಿದ್ದಾರೆ. ‘ಮುತ್ತಿಮೂಡ್‌ ಮೇಲೆ ಹಲವಾರು ಮೊಕದ್ದಮೆಗಳಿವೆ. ಆದರೂ, ಟಿಕೆಟ್‌ ನೀಡಿ ನಮ್ಮ ಕುಟುಂಬಕ್ಕೆ ಅನ್ಯಾಯ ಮಾಡಲಾಗಿದೆ’ ಎಂದು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.