ADVERTISEMENT

ಕಲಬುರ್ಗಿ ದಕ್ಷಿಣ; ಲಿಂಗಾಯತ ಅಭ್ಯರ್ಥಿಗೆ ಮಣೆ

ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಲ್ಲಿ ನಿರೀಕ್ಷಿತ ಅಭ್ಯರ್ಥಿಗಳಿಗೆ ಟಿಕೆಟ್

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2018, 9:02 IST
Last Updated 16 ಏಪ್ರಿಲ್ 2018, 9:02 IST

ಕಲಬುರ್ಗಿ: ಜಿಲ್ಲೆಯ ಒಂಬತ್ತು ವಿಧಾನಸಭಾ ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಭಾನುವಾರ ಬಿಡುಗಡೆಯಾಗಿದ್ದು, ಕಲಬುರ್ಗಿ ದಕ್ಷಿಣ ಮತಕ್ಷೇತ್ರದಲ್ಲಿ ಅಲ್ಲಮಪ್ರಭು ಪಾಟೀಲ ಅವರಿಗೆ ಟಿಕೆಟ್ ಘೋಷಣೆ ಮಾಡುವ ಮೂಲಕ ‘ಲಿಂಗಾಯತ’ ಅಭ್ಯರ್ಥಿಗೆ ಪಕ್ಷ ಮಣೆ ಹಾಕಿದೆ.

ಕಲಬುರ್ಗಿ ದಕ್ಷಿಣ ಮತಕ್ಷೇತ್ರದಲ್ಲಿ ಹಿಂದುಳಿದ ವರ್ಗದ ಅಭ್ಯರ್ಥಿಗೆ ಟಿಕೆಟ್ ನೀಡಲಾಗುತ್ತದೆ ಎಂಬ ಮಾತು ಕೇಳಿ ಬಂದಿದ್ದವು. ಆದರೆ ಎಲ್ಲಕ್ಕೂ ತೆರೆ ಎಳೆದಿರುವ ಹೈಕಮಾಂಡ್ ವಿಧಾನಪರಿಷತ್‌ ಮಾಜಿ ಸದಸ್ಯ ಅಲ್ಲಮಪ್ರಭು ಅವರಿಗೆ ಟಿಕೆಟ್ ನೀಡಿದೆ. ಇದರಿಂದಾಗಿ ಕ್ಷೇತ್ರದಲ್ಲಿ ಈಗ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಬಿಜೆಪಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಈಗಾಗಲೇ ಪ್ರಚಾರ ಆರಂಭಿಸಿದ್ದಾರೆ.

ಜೆಡಿಎಸ್‌ನ ಬಸವರಾಜ ಡಿಗ್ಗಾವಿ ಕೂಡ ಒಂದು ಸುತ್ತಿನ ಪ್ರಚಾರ ಪೂರ್ಣಗೊಳಿಸಿದ್ದಾರೆ. ಇದೀಗ ಅಲ್ಲಮಪ್ರಭು ಅಖಾಡಕ್ಕೆ ಇಳಿದಿರುವುದರಿಂದ ‘ರಾಜಕೀಯ ಲೆಕ್ಕಾಚಾರ’ ಗರಿಗೆದರಿವೆ.

ADVERTISEMENT

ತಂದೆಯ ಬದಲು ಮಗನಿಗೆ ಟಿಕೆಟ್: ಕಲಬುರ್ಗಿ ಗ್ರಾಮೀಣ ಮತ ಕ್ಷೇತ್ರದಲ್ಲಿ ಶಾಸಕ ಜಿ. ರಾಮಕೃಷ್ಣ ಅವರ ಪುತ್ರ ವಿಜಯಕುಮಾರ್ ಅವರಿಗೆ ಟಿಕೆಟ್ ಘೋಷಿಸಲಾಗಿದೆ.

ಜಿಲ್ಲೆಯ ಮೂರು ಮೀಸಲು ವಿಧಾನಸಭಾ ಕ್ಷೇತ್ರಗಳ ಪೈಕಿ ಚಿತ್ತಾಪುರದಲ್ಲಿ ಬಲಗೈ ಸಮುದಾಯದ ಪ್ರಿಯಾಂಕ್ ಖರ್ಗೆ ಅವರಿಗೆ, ಚಿಂಚೋಳಿಯಲ್ಲಿ ಲಂಬಾಣಿ ಸಮುದಾಯದ ಡಾ. ಉಮೇಶ ಜಾಧವ್ ಅವರಿಗೆ ಟಿಕೆಟ್ ನೀಡಿದ ಕಾರಣ ಗ್ರಾಮೀಣದಲ್ಲಿ ಎಡಗೈ ಸಮುದಾಯದ ವಿಜಯಕುಮಾರ್ ಅವರಿಗೆ ಟಿಕೆಟ್ ನೀಡಲಾಗಿದೆ. ಈ ಹಿಂದೆ ಪರಾಭವಗೊಂಡಿದ್ದ ಚಂದ್ರಿಕಾ ಪರಮೇಶ್ವರ ಮತ್ತು ಶಾಮ ನಾಟೀಕಾರ ಕೂಡ ಪ್ರಬಲ ಆಕಾಂಕ್ಷಿಗಳಾಗಿದ್ದರು.

ಅದಲು–ಬದಲು: ಅಫಜಲಪುರ ಮತಕ್ಷೇತ್ರದಲ್ಲಿ ಬಿಜೆಪಿಯಿಂದ ಕಾಂಗ್ರೆಸ್‌ಗೆ ಸೇರ್ಪಡೆಯಾಗಿರುವ ಎಂ.ವೈ.ಪಾಟೀಲ ಅವರಿಗೆ ಟಿಕೆಟ್ ಸಿಕ್ಕಿದೆ. ಈ ಮೊದಲು ಕಾಂಗ್ರೆಸ್‌ನಲ್ಲಿದ್ದ ಮಾಲೀಕಯ್ಯ ಗುತ್ತೇದಾರ ಈಗ ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಅಂತೆ–ಕಂತೆಗಳಿಗೆ ತೆರೆ: ಸಚಿವ ಪ್ರಿಯಾಂಕ್ ಖರ್ಗೆ ಅವರು ಕಲಬುರ್ಗಿ ಗ್ರಾಮೀಣ ಮತಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ವದಂತಿಗಳು ದಟ್ಟವಾಗಿದ್ದವು. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲೂ ಈ ಕುರಿತು ಊಹಾಪೋಹ ಕೇಳಿ ಬಂದಿದ್ದವು. ಇದೀಗ ಚಿತ್ತಾಪುರ ಟಿಕೆಟ್ ಅನ್ನು ಅವರಿಗೇ ನೀಡಿರುವುದರಿಂದ ಅಂತೆ–ಕಂತೆಗಳಿಗೆ ತೆರೆ ಬಿದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.