ADVERTISEMENT

ಕಾಯ್ದಿಟ್ಟ ಅರಣ್ಯ ಪ್ರದೇಶ ಒತ್ತುವರಿ: ವರದಿ ಸಲ್ಲಿಸಿದ್ದಕ್ಕೆ ಗ್ರಾಮ ಲೆಕ್ಕಾಧಿಕಾರಿಗೆ ಬೆದರಿಕೆ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2017, 9:41 IST
Last Updated 10 ಸೆಪ್ಟೆಂಬರ್ 2017, 9:41 IST
ಕಾಯ್ದಿಟ್ಟ ಅರಣ್ಯ ಪ್ರದೇಶ ಒತ್ತುವರಿ: ವರದಿ ಸಲ್ಲಿಸಿದ್ದಕ್ಕೆ ಗ್ರಾಮ ಲೆಕ್ಕಾಧಿಕಾರಿಗೆ ಬೆದರಿಕೆ
ಕಾಯ್ದಿಟ್ಟ ಅರಣ್ಯ ಪ್ರದೇಶ ಒತ್ತುವರಿ: ವರದಿ ಸಲ್ಲಿಸಿದ್ದಕ್ಕೆ ಗ್ರಾಮ ಲೆಕ್ಕಾಧಿಕಾರಿಗೆ ಬೆದರಿಕೆ   

ಕಲಬುರ್ಗಿ: ಜಿಲ್ಲೆಯ ಜೇವರ್ಗಿ ತಾಲ್ಲೂಕು ಯಲಗೋಡ ಗ್ರಾಮದ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರೊಬ್ಬರು ನಾಲ್ಕು ಎಕರೆ ಕಾಯ್ದಿಟ್ಟ ಅರಣ್ಯ ಪ್ರದೇಶ ಒತ್ತುವರಿ ಮಾಡಿಕೊಂಡಿದ್ದು, ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಿದ ಗ್ರಾಮ ಲೆಕ್ಕಾಧಿಕಾರಿಗೆ ಜೀವ ಬೆದರಿಕೆ ಹಾಕಿದ್ದಾರೆ.

ಯಲಗೋಡ ಕ್ಷೇತ್ರದ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಮಾನಪ್ಪ ಶರ್ಮಾ ಅವರು ಗ್ರಾಮ ಲೆಕ್ಕಾಧಿಕಾರಿ ರಮೇಶ್ ಎಂಬುವರಿಗೆ ಬೆದರಿಕೆ ಹಾಕಿದ್ದಾರೆ.

'ಮಾನಪ್ಪ ಅವರು ಅರಣ್ಯ ಪ್ರದೇಶದ 4 ಎಕರೆ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದರು. ಈ ಬಗ್ಗೆ ರಮೇಶ್ ಅವರು ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದರು. ಆದರೆ ಈ ಜಮೀನನ್ನು ಸಕ್ರಮವಾಗಿ ಮಾಡಿಕೊಡುವಂತೆ ಮಾನಪ್ಪ ಅವರು ರಮೇಶ್ಅವರಿಗೆ ಪದೇ ಪದೇ ಕಿರುಕುಳ ಕೊಡುತ್ತಿದ್ದರು' ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ADVERTISEMENT

'ಯಾವುದೇ ಕಾರಣಕ್ಕೂ ನಾನು ಸಕ್ರಮ ಮಾಡಿಕೊಡುವುದಿಲ್ಲ ಎಂದು ಹೇಳಿದ ರಮೇಶ್ ಕಂದಾಯ ಇಲಾಖೆಗೆ ವರದಿಯನ್ನ ಸಲ್ಲಿಸಿದ್ದರು. ಇದರಿಂದ ಕೆರಳಿದ ಮಾನಪ್ಪ ಶರ್ಮಾ, ಶನಿವಾರ ಗ್ರಾಮ ಲೆಕ್ಕಿಗ ರಮೇಶ್ ಅವರಿಗೆ ದೂರವಾಣಿ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದ್ದಾರೆ' ಎಂಬುದು ಮೂಲಗಳ ವಿವರಣೆ.

'ನಿನ್ನ ಪತ್ನಿಯನ್ನು ಒತ್ತೆಯಾಳಾನ್ನಾಗಿ ಇಟ್ಟುಕೊಳ್ಳುತ್ತೇನೆ, ಅದು ಹೇಗೆ ಇಲ್ಲಿ ಕೆಲಸ ಮಾಡುತ್ತಿಯಾ ನೋಡುತ್ತೇನೆ ಎಂದು ಬಾಯಿಗೆ ಬಂದ ಹಾಗೆ ಬೈಯ್ದಿದ್ದಾರೆ' ಎಂದು ಮೂಲಗಳು ಹೇಳುತ್ತವೆ.

ಸದ್ಯ ಮಾನಪ್ಪ ಶರ್ಮಾ ವಿರುದ್ಧ ಗ್ರಾಮ ಲೆಕ್ಕಿಗ ರಮೇಶ್ ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ಗುರುಮೂರ್ತಿ, 'ದಕ್ಷ ಮತ್ತು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಮ ಲೆಕ್ಕಿಗ ರಮೇಶ್ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲೆ, ಜೀವ ಬೆದರಿಕೆ ಹಾಕಿರುವುದು ಖಂಡನೀಯ. ತಕ್ಷಣವೇ ಮಾನಪ್ಪ ಶರ್ಮಾ ಅವರನ್ನು ಬಂಧಿಸಿ, ಶಿಕ್ಷೆಗೊಳಪಡಿಸಬೇಕು. ಇಲ್ಲವಾದಲ್ಲಿ ರಾಜ್ಯದಾದ್ಯಂತ ಉಗ್ರ ಹೋರಾಟ ಮಾಡಲಾಗುವುದು' ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.