ADVERTISEMENT

ಕಾರ್ಯಕ್ರಮ ಯಶಸ್ವಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2017, 5:48 IST
Last Updated 18 ಜನವರಿ 2017, 5:48 IST

ಕಲಬುರ್ಗಿ: ವಾರ್ತಾ ಮತ್ತು ಸಾರ್ವ­ಜನಿಕ ಸಂಪರ್ಕ ಇಲಾಖೆಯು ಜಿಲ್ಲಾ­ಡಳಿತದ ಸಹಯೋಗದೊಂದಿಗೆ ಚಂದ್ರ­ಶೇಖರ ಪಾಟೀಲ ಕ್ರೀಡಾಂಗಣ ಎದುರಿನ ಬಯಲು ಮೈದಾನದಲ್ಲಿ ಫೆಬ್ರುವರಿ 19 ಮತ್ತು 20ರಂದು ಆಯೋಜಿಸಿರುವ ‘ಮಾಹಿತಿ ಉತ್ಸವ’ ಹಾಗೂ 21ರಂದು ಹಮ್ಮಿಕೊಂಡಿರುವ ‘ಭಾರತ ಭಾಗ್ಯ­ವಿಧಾತಾ’ ಧ್ವನಿ ಬೆಳಕು ಕಾರ್ಯಕ್ರಮ ಯಶಸ್ವಿಗೊಳಿಸಲು ಜಿಲ್ಲಾ ಮಟ್ಟದ ಅಧಿಕಾರಿಗಳು ಎಲ್ಲ ಕ್ರಮ­ಗಳನ್ನು ಕೈಗೊಳ್ಳಬೇಕು ಎಂದು ವೈದ್ಯ­ಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಜಿಲ್ಲಾ ಮಟ್ಟದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಾಹಿತಿ ಉತ್ಸವಕ್ಕಾಗಿ ಕೃಷಿ, ತೋಟಗಾರಿಕೆ, ಪಶುಸಂಗೋಪನಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ರೇಷ್ಮೆ, ಖಾದಿ ಮತ್ತು ಗ್ರಾಮೋದ್ಯೋಗ, ಪ್ರವಾಸೋದ್ಯಮ, ಕಾನೂನುಮಾಪನ ಶಾಸ್ತ್ರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಸರ್ವ ಶಿಕ್ಷಣ ಅಭಿಯಾನ ಸೇರಿದಂತೆ ವಿವಿಧ ಇಲಾಖೆಗಳ ಯೋಜನೆಗಳ ವಿವರ ಒದಗಿಸಲು 10 ಮಳಿಗೆ ಹಾಗೂ ವಿವಿಧ ಮಹಿಳಾ ಸ್ವಸಹಾಯ ಗುಂಪುಗಳು ಉತ್ಪಾದಿಸಿದ ವಸ್ತುಗಳ ಮತ್ತು ಆಹಾರ ಉತ್ಪಾದನಾ ವಸ್ತುಗಳ ಮಾರಾಟಕ್ಕಾಗಿ ಹತ್ತು ಮಳಿಗೆಗಳನ್ನು ನಿರ್ಮಿಸಿ, ಉಚಿತವಾಗಿ ನೀಡಲಾಗುವುದು.

ಈ ಮಳಿಗೆಗಳಲ್ಲಿ ಸಂಬಂಧಪಟ್ಟ ಇಲಾಖೆಗಳ ಮುಖ್ಯಸ್ಥರು ತಮ್ಮ ತಮ್ಮ ಇಲಾಖೆಗಳ ಮಾಹಿತಿ ಒದಗಿಸುವ ಹಾಗೂ ಆಯ್ದ ಫಲಾನುಭವಿಗಳನ್ನು ಕರೆತರುವ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು. ಡಾ.ಬಿ.ಆರ್.ಅಂಬೇಡ್ಕರ್ ಅವರ 125ನೇ ಜನ್ಮ ದಿನಾಚರಣೆ ಅಂಗವಾಗಿ ಇದೇ ಸ್ಥಳದಲ್ಲಿ ಫೆಬ್ರುವರಿ 21ರಂದು ಸಂಜೆ 7ರಿಂದ ‘ಭಾರತ ಭಾಗ್ಯವಿಧಾತಾ’ ಧ್ವನಿ ಬೆಳಕು ವಿಶೇಷ ಕಾರ್ಯಕ್ರಮ ಜರುಗಲಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.