ADVERTISEMENT

ಕೀರ್ತಿ ನಗರದಲ್ಲಿ ನೀರಿನ ಕಿರಿಕಿರಿ

ದುಡಿದ ಹಣದಲ್ಲಿ ಅರ್ಧ ಕುಡಿಯುವ ನೀರಿಗೆ ಖರ್ಚು

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2018, 9:31 IST
Last Updated 25 ಏಪ್ರಿಲ್ 2018, 9:31 IST
ಕಲಬುರ್ಗಿಯಲ್ಲಿ ಅಪರೂಪಕ್ಕೆ ಒಮ್ಮೆ ಬರುವ ನೀರು ಸಂಗ್ರಹಿಸುತ್ತಿರುವ ನಿವಾಸಿಗಳು
ಕಲಬುರ್ಗಿಯಲ್ಲಿ ಅಪರೂಪಕ್ಕೆ ಒಮ್ಮೆ ಬರುವ ನೀರು ಸಂಗ್ರಹಿಸುತ್ತಿರುವ ನಿವಾಸಿಗಳು   

ಕಲಬುರ್ಗಿ: ತಿಂಗಳುಗಳಿಂದ ಸ್ವಚ್ಛಗೊಳ್ಳದೆ ತುಂಬಿಕೊಂಡಿರುವ ಗಟಾರುಗಳು. ರಾಶಿ–ರಾಶಿಯಾಗಿ ಬಿದ್ದಿರುವ ಕಸ. ಎಲ್ಲಿ ನೋಡಿದರಲ್ಲಿ ಹಂದಿಗಳ ದಿಂಡು. ಮೂಗು ಮುಚ್ಚಿಕೊಂಡೇ ನಡೆದಾಡುವ ಸ್ಥಿತಿ. ತೆರೆದುಕೊಂಡ ಗಟಾರದ ಪಕ್ಕದಲ್ಲಿ ಆಟವಾಡುತ್ತಿರುವ ಮಕ್ಕಳು–ಇವೆಲ್ಲ ದೃಶ್ಯಗಳು ಕೀರ್ತಿ ನಗರದಲ್ಲಿ ಹಾದು ಹೊರಟರೆ ಕಣ್ಣಿಗೆ ರಾಚುತ್ತವೆ.

41ನೇ ವಾರ್ಡ್‌ನ ವ್ಯಾಪ್ತಿಯಲ್ಲಿ ಇರುವ ಕೀರ್ತಿ ನಗರ, ಶಾಮಸುಂದರ ನಗರ, ನ್ಯಾಮ ನಗರಗಳಲ್ಲಿ ಎರಡು ದಶಕಗಳಿಂದ ಹೋರಾಟ ಮಾಡಿ 200ಕ್ಕೂ ಅಧಿಕ ಕುಟುಂಬಗಳು ಸೂರು ಕಟ್ಟಿಕೊಂಡಿವೆ. ಪಾಲಿಕೆಯು ಕೊಳಚೆ ಪ್ರದೇಶವೆಂದು ಘೋಷಣೆ ಮಾಡಿದ ದಿನದಿಂದ ಮೂಲ ಸೌಕರ್ಯದ ಜಪ ನಿಂತಿಲ್ಲ. ಹೋರಾಟ ಬಿಟ್ಟು ಸಮಸ್ಯೆಗಳಿಗೆ ಬೇರೆ ದಾರಿ ಇಲ್ಲವಾಗಿದೆ.

‘ಭೀಮಾ ನದಿ ನೀರಿನ ಸಂಪರ್ಕವಿದ್ದರೂ ಸಮರ್ಪಕವಾಗಿ ಕುಡಿಯುವ ನೀರು ಸಿಗುತ್ತಿಲ್ಲ. ಮೊದಲು ಎರಡು ದಿನಕ್ಕೊಮ್ಮೆ ಬರುತ್ತಿದ್ದ ನೀರು ಈಗ ಐದಾರು ದಿನಕ್ಕೆ ಬಿಡುತ್ತಿದ್ದಾರೆ. ಆ ನೀರಲ್ಲಿ ಕಪ್ಪೆಜೊಂಡು, ಹೊಲಸು ತುಂಬಿ ಕೊಂಡಿರುತ್ತದೆ. ಕೆಲವು ಬಾರಿ ಹುಳಗಳು ಬಂದಿರುವುದಿದೆ’ ಎಂದು ಮುಖ ಕಿವುಚಿಕೊಂಡ ಹೇಳುತ್ತಾರೆ ಕೀರ್ತಿ ನಗರದ ನಿವಾಸಿ ಮಹಾದೇವಿ ಜಮಾದಾರ.

ADVERTISEMENT

ಮಕ್ಕಳು ಅದೇ ನೀರನಲ್ಲಿ ಸ್ನಾನ ಮಾಡುತ್ತವೆ. ಗೊತ್ತಿಲ್ಲದೆ ನೀರು ಕುಡಿದು ಅನಾರೋಗ್ಯಕ್ಕೆ ತುತ್ತಾಗುತ್ತಿವೆ. ಕುಡಿಯೋ ನೀರಿನ ಬೋರ್‌ವೆಲ್‌ ಕೆಟ್ಟು ವಾರಗಳೇ ಕಳೆದರೂ ಯಾವ ಒಬ್ಬ ಅಧಿಕಾರಿಯು ಸುಳಿದಿಲ್ಲ. ಮನವಿಪತ್ರ, ಪ್ರತಿಭಟನೆಗಳೇ ನಮ್ಮ ಬೇಡಿಕೆಗಳಿಗೆ ಬಲ ತುಂಬಿವೆ. ನಾವು ದುಡಿದ ಹಣದಲ್ಲಿ ಅರ್ಧದಷ್ಟು ಕುಡಿಯುವ ನೀರಿಗೇ ಖರ್ಚಾಗುತ್ತಿದೆ ಎನ್ನುವುದು ದೇವಕಿ ದೊರಿ ಅವರ ದೂರು.

ಇಲ್ಲಿನ 90ರಷ್ಟು ಜನ ಕಟ್ಟಡ ಕೆಲಸ ಮಾಡಿ ಜೀವನ ಸಾಗಿಸುವವರು. ಹೆಂಗಸರೆಲ್ಲ ಅಡುಗೆ ಕೆಲಸಕ್ಕೆ ಹೋಗುತ್ತಾರೆ. ನಾವು ಗಳಿಸಿದ್ದ ಹಣ ನಮ್ಮ ಹೊಟ್ಟೆ, ಬಟ್ಟೆಗೆ, ಮಕ್ಕಳ ಶಾಲೆಯ ಶುಲ್ಕಕ್ಕೇ ಸಾಲುವುದಿಲ್ಲ. ಇನ್ನೂ ಫಿಲ್ಟರ್ ನೀರನ್ನು ಪ್ರತಿದಿನ ತಂದು ಕುಡಿಯೋದು ನಮ್ಮಿಂದ ಆಗಲ್ಲ. ರಟ್ಟೆ ಮೇಲೆ ಶಕ್ತಿ ಇರುತನಕ ಕೆಲಸ ಮಾಡುತ್ತೇವೆ ಎನ್ನುತ್ತಾರೆ ಕೀರ್ತಿ ನಗರದ ಮಹಿಳೆಯರು.

ರಾಜಕಾರಣಿಗಳು ಚುನಾವಣೆ ಸಮಯದಲ್ಲಿ ಮಾತ್ರ ಬರುತ್ತಾರೆ. ಅಧಿಕಾರಿಗಳನ್ನು ಕೇಳಿದರೆ ಸ್ಲಂ ಜನರಿಗೆ ಯಾಕೆ ತುಂಬಾ ಸೌಕರ್ಯಬೇಕು ಎಂದು ಹೀಯಾಳಿಸುತ್ತಾರೆ ಎಂದು ಮಲ್ಲಮ್ಮ ಗುತ್ತೇದಾರ ಹೇಳುತ್ತಾರೆ.

**
ದುಡಿಮೆ ಬಿಟ್ಟು ನೀರಿಗಾಗಿ ವಡ್ಡರಗಲ್ಲಿ, ಬಸವನಗರಗಳಿಗೆ ಹೋಗಬೇಕು. ಅಲ್ಲೂ ಸಿಗದಿದ್ದರೆ ಬೈಕ್‌ಗಳಿಗೆ ಕೊಡ ಕಟ್ಟಿಕೊಂಡು ದಿನವಿಡೀ ನಗರ ಸುತ್ತಬೇಕಾಗುತ್ತದೆ. ಬೇಸಿಗೆ ದಿನಗಳಲ್ಲಿ ಈ ಗೋಳು ತಪ್ಪಿದ್ದಲ್ಲ
– ಮಲ್ಲೇಶ ಪೂಜಾರಿ, ಕೀರ್ತಿ ನಗರ ನಿವಾಸಿ

**

ಇಲ್ಲಿಗೆ ಬಂದು ಕರ್ತವ್ಯ ವಹಿಸಿಕೊಂಡು ವಾರ ಕಳೆದಿದೆ. ಬೋರ್‌ವೆಲ್‌ ಸಮಸ್ಯೆ ಇರುವುದು ನನ್ನ ಗಮನಕ್ಕೆ ಬಂದಿಲ್ಲ. ಶೀಘ್ರವೇ ಭೇಟಿ ನೀಡಿ ಸಮಸ್ಯೆ ಬಗೆ ಹರಿಸುತ್ತೇನೆ
– ಡಿಸೋಜಾ, ಜೆ.ಇ ಎಂಜಿನಿಯರ, ಕಲಬುರ್ಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.