ADVERTISEMENT

‘ಕೃಷಿಯಿಂದ ವಿಮುಖರಾಗುವುದು ಬೇಡ’

ಕುಷ್ಟಗಿಯಲ್ಲಿ ಪಂಚಮಸಾಲಿ ಸಮಾಜದ ಬೃಹತ್‌ ಸಮಾವೇಶದಲ್ಲಿ ಸಂಸದ ಕರಡಿ ಸಂಗಣ್ಣ

​ಪ್ರಜಾವಾಣಿ ವಾರ್ತೆ
Published 31 ಜನವರಿ 2017, 7:15 IST
Last Updated 31 ಜನವರಿ 2017, 7:15 IST
‘ಕೃಷಿಯಿಂದ ವಿಮುಖರಾಗುವುದು ಬೇಡ’
‘ಕೃಷಿಯಿಂದ ವಿಮುಖರಾಗುವುದು ಬೇಡ’   
ಕುಷ್ಟಗಿ: ಕೃಷಿ ಅವಲಂಬಿಸಿ ಬಂದಿರುವ ಪಂಚಮಸಾಲಿ ಸಮುದಾಯ ವ್ಯವಸಾಯದಿಂದ ವಿಮುಖರಾಗಬಾರದು ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ಕಿತ್ತೂರು ರಾಣಿ ಚನ್ನಮ್ಮ ಅವರ 188ನೇ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಸೋಮವಾರ ಇಲ್ಲಿ ಏರ್ಪಡಿಸಲಾಗಿದ್ದ ಪಂಚಮಸಾಲಿ ಸಮುದಾಯದ ತಾಲ್ಲೂಕು ಮಟ್ಟದ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
 
ತಾಂತ್ರಿಕತೆಯನ್ನ ಬಳಸಿಕೊಂಡು ಕೃಷಿ, ತೋಟಗಾರಿಕೆಯನ್ನು ಪುನಃ ಮುಂದುವರೆಸಿಕೊಂಡು ಹೋಗಬೇಕು. ಬಹುತೇಕ ರೈತರು ಒಂದೇ ವಿಧದ ಬೆಳೆಗಳಿಗೆ ಜೋತು ಬೀಳುತ್ತಿದ್ದಾರೆ. ಅನೇಕ ಬೆಳೆಗಳನ್ನು ಬೆಳೆಯುವ ಮೂಲಕ ವೈವಿಧ್ಯತೆಯನ್ನು ಕಾಪಾಡಿಕೊಳ್ಳಬೇಕು. ನೈಸರ್ಗಿಕ ವಿಕೋಪದ ಹಾನಿಗಳಿಂದ ಒಂದು ಬೆಳೆ ಕೈಕೊಟ್ಟರೂ ಇನ್ನೊಂದು ಬೆಳೆಯಾದರೂ ಕೈಹಿಡಿಯುತ್ತದೆ. ಭೂಮಿಯ ಫಲವತ್ತತೆಯ ಕಡೆಗೆ ಗಮನಹರಿಸಿ ಕೃಷಿಯಲ್ಲಿ ತೊಡಗಬೇಕು ಎಂದರು.
 
ಪಂಚಮಸಾಲಿ ಸಮಾಜ ಉನ್ನತ ಶಿಕ್ಷಣದಲ್ಲಿ ಹಿನ್ನಡೆ ಕಾಣುತ್ತಿದೆ. ಶಿಕ್ಷಣ ಸ್ವಾವಲಂಬನೆಯ ಬದುಕಿಗೆ ಪೂರಕವಾಗುತ್ತದೆ. ಅದೇ ರೀತಿ ಸಾಮಾಜಿಕ ನ್ಯಾಯದ ಆಧಾರದ ಮೇಲೆ ರಾಜ್ಯ ಸರ್ಕಾರ ಈ ಸಮಾಜದ ಬೆಳವಣಿಗೆ ಅಗತ್ಯ ಮೀಸಲಾತಿ ವ್ಯವಸ್ಥೆ ಕಲ್ಪಿಸಬೇಕಿದೆ ಎಂದು ಹೇಳಿದರು.
 
ಪಟ್ಟಣದಲ್ಲಿ ಪಂಚಮಸಾಲಿ ಸಮಾಜದಿಂದ ಬಡ ವಿದ್ಯಾರ್ಥಿಗಳಿಗಾಗಿ ನಿರ್ಮಿಸುತ್ತಿರುವ  ವಸತಿ ನಿಲಯಕ್ಕೆ ಸಂಸದರ ನಿಧಿಯಲ್ಲಿ ₹ 15 ಲಕ್ಷ ಅನುದಾನ ನೀಡುವುದಾಗಿ ಸಂಸದ ಸಂಗಣ್ಣ ಕರಡಿ ಪ್ರಕಟಿಸಿದರು. ಹಿಂದುಳಿದ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಬೆಳೆಸುವುದಕ್ಕೆ ಬೆಳಗಾವಿಯ ಕೆಎಲ್‌ಇ ಸಂಸ್ಥೆ ಆಸಕ್ತಿ ವಹಿಸಿದ್ದು, ಲಭ್ಯ ಇರುವ ಸರ್ಕಾರದ ಒಡೆತನದ ಒಂದಷ್ಟು ಜಮೀನನ್ನು ನೀಡಿದರೆ ಸುಸಜ್ಜಿತ ಶಿಕ್ಷಣ ಸಂಸ್ಥೆ ಕುಷ್ಟಗಿ ತಾಲ್ಲೂಕಿನಲ್ಲಿ ತಲೆ ಎತ್ತಲಿದೆ ಎಂದರು. 
ಪಂಚಮಸಾಲಿ ಸಮಾವೇಶವು ಇತರೆ ಸಮಾಜದ ವಿರುದ್ಧದ ಶಕ್ತಿಪ್ರದರ್ಶನವಲ್ಲ. ಬದಲಾಗಿ ಸಂಘಟನೆ ಮೂಲಕ ಸ್ವಾಭಿಮಾನದ ಬದುಕು ರೂಪಿಸಿಕೊಳ್ಳಲು ನಡೆಸಲಾಗಿದೆ ಎಂದು ವಿವರಿಸಿದರು.
 
ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ಪಂಚಮಸಾಲಿ ಸಮಾಜದ ಶೈಕ್ಷಣಿಕ ಆಶೋತ್ತರಗಳಿಗೆ ಸ್ಪಂದಿಸುತ್ತೇನೆ. ವಿದ್ಯಾರ್ಥಿ ನಿಲಯದ ಕಟ್ಟಡ ನಿರ್ಮಾಣಕ್ಕೆ ಶಾಸಕರ ಅನುದಾನದಲ್ಲಿ ₹ 15 ಲಕ್ಷ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದರು.
 
ಸರ್ಕಾರಿ ಹಿರಿಯ ವಕೀಲ ಬಿ.ಎಸ್‌.ಪಾಟೀಲ ಮಾತನಾಡಿ, ಹಿಂದುಳಿದಿರುವ ಪಂಚಮಸಾಲಿ ಸಮುದಾಯಕ್ಕೆ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ  ಹಕ್ಕೊತ್ತಾಯ ಮಂಡಿಸಬೇಕು. 371 ಜೆ ಅನ್ವಯ ಲಭ್ಯವಾಗಿರುವ ಮೀಸಲಾತಿಯಿಂದ ವಂಚಿತರಾಗದಂತೆ ಹೇಳಿದರು.
 
ಮಾಜಿ ಸಚಿವರಾದ ಅಮರೇಗೌಡ ಬಯ್ಯಾಪುರ, ಕಳಕಪ್ಪ ಬಂಡಿ, ಮಾಜಿ ಸಂಸದ ಶಿವರಾಮೆಗೌಡ, ಮಾಜಿ ಶಾಸಕರಾದ ಹಸನ್‌ಸಾಬ್‌ ದೋಟಿಹಾಳ, ಕೆ.ಶರಣಪ್ಪ, ಶ್ರೀಶೈಲಪ್ಪ ಬಿದರೂರು, ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ವೀಣಾ ಕಾಶೆಪ್ಪನವರ, ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಮಹೇಶ, ತಾಲ್ಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷ ಚಂದ್ರಶೇಖರ ನಾಲತ್ವಾಡ ಇತರರು ಮಾತನಾಡಿದರು.
 
ಪಂಚಮಸಾಲಿ ಸಮಾಜದ ಹರಿಹರ ಪೀಠದ ಸಿದ್ದಲಿಂಗ ಸ್ವಾಮೀಜಿ, ಕೂಡಲಸಂಗಮ ಪೀಠದ ಜಯಮೃತ್ಯುಂಜಯ ಸ್ವಾಮೀಜಿ, ಕರಿಬಸವ ಸ್ವಾಮೀಜಿ, ಶಿವಲಿಂಗ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. 
 
ಬಸಲಿಂಗಪ್ಪ ಬೂತೆ, ವೀರಣ್ಣ ಹಂಚಿನಾಳ, ಜಿಲ್ಲಾ ಪಂಚಾಯಿತಿ ಸದಸ್ಯರಾದ ವಿಜಯ ನಾಯಕ, ಭೀಮಣ್ಣ ಅಗಸಿಮುಂದಿನ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಮಹಾಂತಮ್ಮ ಪೂಜಾರ, ಪ್ರಮುಖರಾದ ಬಸಣ್ಣ ಗೋನಾಳ, ನಾಗಪ್ಪ ಸೂಡಿ, ದೇವೇಂದ್ರಪ್ಪ ಬಳೂಟಗಿ  ಇದ್ದರು. ಪ್ರಮುಖ ಬೀದಿಗಳಲ್ಲಿ ರಾಣಿ ಚನ್ನಮ್ಮ ಭಾವಚಿತ್ರದ ಮೆರವಣಿಗೆ ನಡೆಯಿತು. 108 ಕುಂಭ ಹೊತ್ತ ಮಹಿಳೆಯರು, ಡೊಳ್ಳು ಮತ್ತಿತರ ಜನಪದ ಕಲಾಮೇಳ ತಂಡ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. 
 
ವಿದ್ಯಾರ್ಥಿ ನಿಲಯದ ಕಟ್ಟಡದ ಭೂಮಿಪೂಜೆ ನಂತರ ದೋಟಿಹಾಳ ವೃತ್ತದಲ್ಲಿ ರಾಣಿಚನ್ನಮ್ಮ ಹೆಸರಿನ ವೃತ್ತವನ್ನು ಉದ್ಘಾಟಿಸಲಾಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.