ADVERTISEMENT

ಖರೀದಿ ಕೇಂದ್ರದತ್ತ ಸುಳಿಯದ ರೈತ

ಔರಾದ್: ತೊಗರಿ ಬೆಲೆಯಲ್ಲಿ ಭಾರಿ ಕುಸಿತ; ಕಂಗಾಲಾದ ಅನ್ನದಾತರು

​ಪ್ರಜಾವಾಣಿ ವಾರ್ತೆ
Published 17 ಜನವರಿ 2017, 6:08 IST
Last Updated 17 ಜನವರಿ 2017, 6:08 IST
ಖರೀದಿ ಕೇಂದ್ರದತ್ತ ಸುಳಿಯದ ರೈತ
ಖರೀದಿ ಕೇಂದ್ರದತ್ತ ಸುಳಿಯದ ರೈತ   

ಔರಾದ್: ತೊಗರಿ ಬೆಲೆ ಈ ವರ್ಷ ಭಾರಿಕುಸಿತ ಕಂಡ ಹಿನ್ನೆಲೆಯಲ್ಲಿ ರೈತರಲ್ಲಿ ಆತಂಕ ಎದುರಾಗಿದೆ. ಅತಿವೃಷ್ಟಿಯಿಂದ ಉದ್ದು, ಹೆಸರು, ಸೋಯಾ ಹಾಳಾಗಿದ್ದು, ರೈತರು ಅಳಿದುಳಿದ ತೊಗರಿ ಬೆಳೆ ಮೇಲೆ ಭರವಸೆ ಇಟ್ಟುಕೊಂಡಿದ್ದರು.

ತಾಲ್ಲೂಕಿನಲ್ಲಿ 18,600 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆಯಾಗಿದೆ. ಸುಮಾರು 10 ಸಾವಿರ ಟನ್ ಇಳುವರಿ ಬರುವ ಸಾಧ್ಯತೆ ಇದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಈಗಾಗಲೇ ಶೇ 40ರಷ್ಟು ಕಟಾವು ಆಗಿ ರಾಶಿ ಮನೆಗೆ ತರಲಾಗಿದೆ. ಆದರೆ, ಬೆಲೆ ಕುಸಿತದಿಂದ ರೈತರಿಗೆ ತೊಗರಿ ಮಾರಾಟ ಮನಸ್ಸು ಆಗುತ್ತಿಲ್ಲ.

ಇಲ್ಲಿಯ ಎಪಿಎಂಸಿಯಲ್ಲಿ ತಾಲ್ಲೂಕು ಕೃಷಿ ಹುಟ್ಟುವಳಿ ಮಾರಾಟ ಮಂಡಳಿ ಮೂಲಕ ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿಗೆ ವ್ಯವಸ್ಥೆ ಮಾಡಲಾಗಿದೆ. ಕ್ವಿಂಟಲ್‌ಗೆ ₹ 5,500 ಬೆಲೆ ನಿಗದಿ ಮಾಡಲಾಗಿದೆ. ಆದರೆ, ಬೆಲೆ ಕಡಿಮೆ ಇರುವುದರಿಂದ ರೈತರು ಖರೀದಿ ಕೇಂದ್ರದ ಕಡೆ ಬರುತ್ತಿಲ್ಲ. ಎರಡು ವಾರಗಳಲ್ಲಿ ಕೇವಲ 130 ಕ್ವಿಂಟಲ್ ಮಾತ್ರ ಖರೀದಿಸಿದ್ದೇವೆ ಎಂದು ಹೇಳುತ್ತಾರೆ ಖರೀದಿ ಕೇಂದ್ರದ ಸಿಬ್ಬಂದಿ.

ಕಳೆದ ವರ್ಷ ಕ್ವಿಂಟಲ್ ತೊಗರಿಗೆ ₹ 11 ಸಾವಿರ ಬೆಲೆ ಇತ್ತು. ಆದರೆ, ಈಗ ಅರ್ಧದಷ್ಟು ಬೆಲೆ ಕುಸಿದಿದೆ. ಕಟಾವು ಮಾಡಲು ಕ್ವಿಂಟಲ್‌ಗೆ ₹ 2ರಿಂದ 3 ಸಾವಿರ ಖರ್ಚು ಬರುತ್ತಿದೆ. ಹೀಗಾಗಿ ಈ ಬಾರಿ ತೊಗರಿ ಬೆಳೆದ ರೈತನಿಗೆ ಲಾಭಕ್ಕಿಂತ ಹಾನಿ ಜಾಸ್ತಿಯಾಗಿದೆ ಎಂದು ಎಪಿಎಂಸಿ ಸದಸ್ಯ ಪ್ರಕಾಶ ಘುಳೆ ಹೇಳಿದರು.

ಈಗ ಮಾರುಕಟ್ಟೆಯಲ್ಲಿ ಕ್ವಿಂಟಲ್ ತೊಗರಿಗೆ ₹ 4,500ರಿಂದ ₹ 5,000 ವರೆಗೆ ಮಾರಾಟವಾಗುತ್ತಿದೆ. ಖರೀದಿ ಕೇಂದ್ರದಲ್ಲಿ ಕ್ವಿಂಟಲ್‌ಗೆ ₹ 500 ಜಾಸ್ತಿ ಕೊಡುತ್ತಿದ್ದಾರೆ. ಅದೂ ಖರೀದಿ ಆದ ನಂತರ 2–3 ವಾರದಲ್ಲಿ ಹಣ ಬರುತ್ತದೆ. ಹೀಗಾಗಿ ರೈತರು ಖರೀದಿ ಕೇಂದ್ರದ ಕಡೆ ಹೋಗುತ್ತಿಲ್ಲ ಎನ್ನುತ್ತಾರೆ ಅವರು.

ಸರ್ಕಾರಕ್ಕೆ ಕಾಳಜಿ ಇಲ್ಲದ ಕಾರಣ ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಸಿಗುತ್ತಿಲ್ಲ. ಒಂದೆಡೆ ಪ್ರಕೃತಿಯ ಮುನಿಸು, ಮತ್ತೊಂದೆಡೆ ಸರ್ಕಾರದ ವಿರೋಧ ನೀತಿಯಿಂದಾಗಿ ರೈತರು ಆತ್ಮಸ್ಥೈರ್ಯ ಕಳೆದುಕೊಂಡು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ರಾಜ್ಯ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀಮಂತ ಬಿರಾದಾರ ಆಕ್ರೋಶ ವ್ಯಕ್ತಪಡಿಸಿದರು.

*

ಖರೀದಿ ಕೇಂದ್ರ ಆರಂಭವಾಗಿ ಎರಡು ವಾರ ಕಳೆದರೂ ರೈತರು ತೊಗರಿ ಮಾರಾಟ ಮಾಡಲು ಮುಂದೆ ಬರುತ್ತಿಲ್ಲ. ಇಲ್ಲಿಯ ತನಕ ಕೇವಲ 130 ಕ್ವಿಂಟಲ್ ತೊಗರಿ ಖರೀದಿ ಮಾಡಿದ್ದೇವೆ
-ಚನ್ನಬಸವಯ್ಯ ಸ್ವಾಮಿ, ವ್ಯವಸ್ಥಾಪಕ, ಕೃಷಿ ಹುಟ್ಟುವಳಿ ಮಾರಾಟ ಮಂಡಳಿ, ಔರಾದ್‌

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.