ADVERTISEMENT

ಗ್ರಾಮೀಣ ಉದ್ಯೋಗ ಖಾತ್ರಿ ಕೆಲಸ ಶುರು

ವೈಯಕ್ತಿಕ ಬ್ಯಾಂಕ್‌ ಖಾತೆಗಾಗಿ ಪರದಾಟ,ಜನರು ಗುಳೆ ಹೋಗುವುದು ತಪ್ಪಿಸಲು ಕ್ರಮ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2017, 6:03 IST
Last Updated 3 ಫೆಬ್ರುವರಿ 2017, 6:03 IST
ಗ್ರಾಮೀಣ ಉದ್ಯೋಗ ಖಾತ್ರಿ ಕೆಲಸ ಶುರು
ಗ್ರಾಮೀಣ ಉದ್ಯೋಗ ಖಾತ್ರಿ ಕೆಲಸ ಶುರು   

ಚಿಂಚೋಳಿ: ತಾಲ್ಲೂಕಿನಲ್ಲಿ ಜನರು ಗುಳೆ ಹೋಗುವುದನ್ನು ತಡೆಯಲು ಶ್ರಮಿ ಸುತ್ತಿರುವ ಅಧಿಕಾರಿಗಳು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉ ದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮ ಸ್ಥರ ನೆರವಿನಿಂದ ಕೆಲಸ ಶುರು ಮಾಡಿದ್ದಾರೆ.

ತಾಲ್ಲೂಕಿನ ರಟಕಲ್‌, ಕುಂಚಾವರಂ ಹಾಗೂ ಸಾಲೇಬೀರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಟ್ರೆಂಚಿಂಗ್‌ ಹಾಗೂ ಸಸಿ ನೆಡುವ ಗುಂಡಿ ತೋಡುವ ಕೆಲಸ ನಡೆದಿದೆ. ತಾಲ್ಲೂಕಿನ ರಟಕಲ್‌ ಗ್ರಾಮಕ್ಕೆ ಭೇಟಿ ನೀಡಿದ ತಾ.ಪಂ. ಅಧ್ಯಕ್ಷೆ ರೇಣುಕಾ ಅಶೋಕ ಚವ್ಹಾಣ, ಉಪಾಧ್ಯಕ್ಷ ರುದ್ರಶೆಟ್ಟಿ ಪಡಶೆಟ್ಟಿ ಅವರು ಭೇಟಿ ನೀಡಿ ಪರಿಶೀಲಿಸಿದರು.

ದಿನಕ್ಕೆ ಎಷ್ಟು ಕೂಲಿ ಕೊಡುತ್ತಿದ್ದಾರೆ ಎಂದು ಕಾರ್ಯನಿರ್ವಹಣಾಧಿಕಾರಿ ಅನಿಲ ರಾಠೋಡ್‌ ಪ್ರಶ್ನಿಸಿದಾಗ, ಕಾರ್ಮಿಕ ಮಹಿಳೆಯರು ಉತ್ತರ ಗೊತ್ತಿಲ್ಲ ಎಂದರು. ಆಗ ಪಕ್ಕದಲ್ಲಿದ್ದ ಮಹಿಳೆಯೊಬ್ಬರು ₹ 224 ಎಂದು ಉತ್ತರಿಸಿದರು.

ಇಲ್ಲಿ 35 ಮಂದಿ ಕಾರ್ಮಿಕರು ಟ್ರೆಂಚ್ ನಿರ್ಮಾಣದಲ್ಲಿ ತೊಡಗಿದ್ದಾರೆ. ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿಗಳ ಮೇಲುಸ್ತುವಾರಿಯಲ್ಲಿ ನಡೆಯುತ್ತಿರುವ ಕೆಲಸ ಬುಧವಾರ ಶುರು ಮಾಡಿದ್ದಾರೆ. ಈಗಾಗಲೇ ವಾರದಿಂದ 60 ಮಂದಿ ಕಾರ್ಮಿಕರು ಕುಂಚಾವರಂ ಕೆಲಸ ಮಾಡುತ್ತಿದ್ದಾರೆ. ಸಾಲೇಬೀರನ ಹಳ್ಳಿಯಲ್ಲಿ 40 ಮಂದಿ ಕೆಲಸ ಮಾಡುತ್ತಿದ್ದಾರೆ.

ತಿರುವನಂತಪುರ ಮಾದರಿಯಲ್ಲಿ ಅಂತರ್ಜಲ ವೃದ್ಧಿಗೆ ನೆರವಾಗುವಂತೆ ಕೆಲಸ ಅರಣ್ಯ, ಗುಡ್ಡ ಬೆಟ್ಟಗಳಲ್ಲಿ ಟ್ರಂಚ್‌ ನಿರ್ಮಿಸಲಾಗುವುದು. ಟ್ರೆಂಚನಲ್ಲಿ ಮಳೆ ನೀರು ಸಂಗ್ರಹವಾದರೆ ಅದರ ಮೇಲ್ಬಾಗ ದಲ್ಲಿ ವಿವಿಧ ಗಿಡಗಳ ಬೀಜ ಹಾಕಿ ಹಸಿರು ವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಹಾಯಕ ನಿರ್ದೇಶಕ ಸಂತೋಷ ಕುಮಾರ ಯಾಚೆ ತಿಳಿಸಿದರು.

ಬ್ಯಾಂಕ್‌ ಖಾತೆ ಸಮಸ್ಯೆ: ಈ ಹಿಂದೆ ಕುಟುಂಬದ ಯಜಮಾನನ ಬ್ಯಾಂಕ್‌ ಖಾತೆಯ ಕುಟುಂಬದ ಸದಸ್ಯರ ಕೂಲಿ ಧನ ಜಮಾ ಮಾಡಲಾಗುತ್ತಿತ್ತು. ಆದರೆ ಈಗ ಪ್ರತಿ ಕಾರ್ಮಿಕ ವೈಯಕ್ತಿಕ ಖಾತೆಗೆ ಕೂಲಿ ಹಣ ಪಾವತಿಸಬೇಕಾಗಿದೆ. ಹೀಗಾಗಿ ಬ್ಯಾಂಕ್‌ ಖಾತೆಗಾಗಿ ಪರದಾಟ ಶುರುವಾಗಿದೆ. ಕೋಡ್ಲಿ, ರಟಕಲ್‌ ಸೇರಿದಂತೆ ಅನೇಕ ಕಡೆ ಕಾರ್ಮಿಕರು ಬ್ಯಾಂಕ್‌ ಖಾತೆಗಳಿಂದ ವಂಚಿತ ರಾಗಿದ್ದಾರೆ  ಎಂದು ರೈತ ಸಂಘದ ಜಿಲ್ಲಾ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ತಿಳಿಸಿದರು.

ಆಗ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‌ ವ್ಯವಸ್ಥಾಪಕರ ನೇತೃತ್ವದಲ್ಲಿ ಎಲ್ಲಾ ಬ್ಯಾಂಕ್‌ ಶಾಖಾ ವ್ಯವಸ್ಥಾಪಕರ ಸಭೆ ನಡೆಸಿ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳುವುದಾಗಿ ಅಧ್ಯಕ್ಷೆ ರೇಣುಕಾ ಉಪಾಧ್ಯಕ್ಷ ರುದ್ರಶೆಟ್ಟಿ ತಿಳಿಸಿದರು.
ತಾ.ಪಂ. ಸದಸ್ಯ ದತ್ತಾತ್ರೆಯ ಕುಲ್ಕರ್ಣಿ, ಉಪ ವಲಯ ಅರಣ್ಯಾಧಿಕಾರಿ ಸಂಜೀವಕುಮಾರ ಚವ್ಹಾಣ, ಅಭಿವೃದ್ಧಿ ಅಧಿಕಾರಿ ಹೀರಾಸಿಂಗ್‌, ಉಪಾಧ್ಯಕ್ಷ ಗೌರಿಶ ಕರ ಕಿಣ್ಣಿ ಇದ್ದರು.

***

ಟ್ರೆಂಚನಲ್ಲಿ ಮಳೆ ನೀರು ಸಂಗ್ರಹವಾದರೆ, ಅದರ ಮೇಲ್ಭಾಗದಲ್ಲಿ ವಿವಿಧ ಗಿಡಗಳ ಬೀಜ ಹಾಕಿ, ಹಸಿರು ವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
- ಸಂತೋಷಕುಮಾರ ಯಾಚೆ, ಸಹಾಯಕ ನಿರ್ದೇಶಕ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.