ADVERTISEMENT

ಜಲಮೂಲ ಅಭಿವೃದ್ಧಿಗೆ ₹500 ಕೋಟಿ: ಸಚಿವ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2017, 4:07 IST
Last Updated 19 ಏಪ್ರಿಲ್ 2017, 4:07 IST
ಕಲಬುರ್ಗಿ:  ‘ಜಿಲ್ಲೆಯ ಆಳಂದ ತಾಲ್ಲೂಕಿನಲ್ಲಿ ಶಿರಪುರ ಮಾದರಿಯಲ್ಲಿ ಜಲಮೂಲಗಳ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ₹500 ಕೋಟಿ ಅನುದಾನ ನೀಡುತ್ತಿದೆ’ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ ಹೇಳಿದರು.
 
ಪಟ್ಟಣದಲ್ಲಿ ತಲಾ ₹1 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕ ಮತ್ತು ಬಾಲಕಿಯರ ವಸತಿ ನಿಲಯದ ಉದ್ಘಾಟನೆ ಹಾಗೂ ₹3.28 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
 
ಈ ಸಂಬಂಧ ಆಳಂದ ಶಾಸಕ ಬಿ.ಆರ್. ಪಾಟೀಲ ಅವರು ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರು. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಮೋದನೆ ನೀಡಿದ್ದಾರೆ. ಭೀಮಾ ನದಿಯಿಂದ ಅಮರ್ಜಾಕ್ಕೆ ನೀರು ತುಂಬುವುದು ಮತ್ತು ಅಂತರ್ಜಲ ಹೆಚ್ಚಳಕ್ಕೆ ರಾಜ್ಯ ಸರ್ಕಾರ ವಿಶೇಷ ಅನುದಾನ ನೀಡಿದೆ ಎಂದರು.
 
ಇದುವರೆಗೆ 26 ಲಕ್ಷ ಕ್ವಿಂಟಲ್ ತೊಗರಿ ಖರೀದಿಸಲಾಗಿದ್ದು, ಜಿಲ್ಲೆಯಿಂದ 10 ಲಕ್ಷ ಕ್ವಿಂಟಲ್ ಖರೀದಿಸಲಾಗಿದೆ. ತೊಗರಿ ಖರೀದಿ ಅವಧಿಯನ್ನು ಇನ್ನೂ 15 ದಿನ ವಿಸ್ತರಿಸಲಾಗುವುದು. ತೊಗರಿ ಬೇಳೆಯನ್ನು ಪಡಿತರ ವ್ಯವಸ್ಥೆಗೆ ಸೇರಿಸುವ ಉದ್ದೇಶವನ್ನು ರಾಜ್ಯ ಸರ್ಕಾರವು ಹೊಂದಿದೆ ಎಂದು ಹೇಳಿದರು.
 
ಶಾಸಕ ಬಿ.ಆರ್. ಪಾಟೀಲ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂತರ್ಜಲ ಹೆಚ್ಚಳಕ್ಕೆ ಅನುದಾನ ನೀಡಿರುವುದು ತಾಲ್ಲೂಕಿಗೆ ಬಹುದೊಡ್ಡ ಕೊಡುಗೆಯಾಗಿದೆ. ಚಿಲ್ಲರೆ ಮದ್ಯ ಮಾರಾಟ ತಡೆಗಟ್ಟಬೇಕು. ರೈತರಲ್ಲಿ ಉಳಿದ ಬಾಕಿ ತೊಗರಿ ಖರೀದಿ ಮಾಡಬೇಕು ಎಂದರು.
 
ಜಿಲ್ಲಾ ಪಂಚಾಯಿತಿ ಸದಸ್ಯ ಸಿದ್ದರಾಮ ಪ್ಯಾಟಿ, ಜಾವೇದ್ ಬಾಗವಾನ ಮಾತನಾಡಿದರು. ಪುರಸಭೆ ಮಾಜಿ ಅಧ್ಯಕ್ಷ ವಿಠಲರಾವ್ ಪಾಟೀಲ, ಉಪಾಧ್ಯಕ್ಷ ಅಜಗರ ಅಲಿ ಹವಾಲ್ದಾರ್, ಎಪಿಎಂಸಿ ಅಧ್ಯಕ್ಷ ಶರಣು ಭೂಸನೂರ, ಮಲ್ಲೇಶಪ್ಪ ಬಿರಾದಾರ, ಗುರುನಾಥ ಷಣ್ಮುಖ, ತಹಶೀಲ್ದಾರ್ ಬಸವರಾಜ ಎಂ. ಬೆಣ್ಣೆಶಿರೂರ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ. ಸಂಜಯ ರೆಡ್ಡಿ ಇದ್ದರು. ಸತೀಶ ಪನಶೆಟ್ಟಿ ನಿರೂಪಿಸಿ, ಗುರುಶರಣ ಪಾಟೀಲ ಕೊರಳ್ಳಿ ವಂದಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.