ADVERTISEMENT

ಜಾನಪದ ಕಲೆ ಸಂಸ್ಕೃತಿಯ ಜೀವಾಳ

​ಪ್ರಜಾವಾಣಿ ವಾರ್ತೆ
Published 28 ಜುಲೈ 2017, 6:20 IST
Last Updated 28 ಜುಲೈ 2017, 6:20 IST

ಆಳಂದ: ಆಧುನಿಕ ಶಿಕ್ಷಣ, ಮೊಬೈಲ್, ಟಿ.ವಿ ಪ್ರಭಾವದಿಂದ ಇಂದು ಜನಪದ ಕಲೆಗಳು ಮರೆಯುತ್ತಿವೆ. ಇಂತಹ ವೈವಿಧ್ಯಮಯ ಜನಪದ ಕಲೆಗಳು ನಮ್ಮ ಸಂಸ್ಕೃತಿಯ ಜೀವಾಳವಾಗಿವೆ ಎಂದು ಖಜೂರಿಯ ಮುರುಘೇಂದ್ರ ಕೋರಣೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಖಜೂರಿ ಗ್ರಾಮದಲ್ಲಿ ಗುರುವಾರ ಕನ್ನಡ ಜನಪದ ಪರಿಷತ್ತು ಹಾಗೂ ಖಜೂರಿ ಗ್ರಾಮದ ವಿವಿಧ ಸಾಂಸ್ಕೃತಿಕ ವೇದಿಕೆಗಳಿಂದ ನಾಗರಪಂಚಮಿ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ‘ಜನಪದ ಕಲಾಮೇಳ’ ಉದ್ಘಾಟಿಸಿ ಮಾತನಾಡಿದರು.

ಭಾರತದಲ್ಲಿನ ಪ್ರತಿಯೊಂದು ಹಬ್ಬ, ಹರಿದಿನ, ಆಚರಣೆಗಳಲ್ಲಿ ನಮ್ಮ ಕಲೆಗಳು ಕಾಣುತ್ತಿವೆ. ಜನಪದ ಕಲೆಯು ಕೇವಲ ಮನರಂಜನೆಗೆ ಮಾತ್ರ ಸೀಮಿತಗೊಳ್ಳದೆ, ಅದರಲ್ಲಿ ಸಾಮರಸ್ಯದ ಜೀವನಕ್ಕೆ ಅಗತ್ಯವಾದ ಜೀವನ ಮೌಲ್ಯಗಳು ಹುದುಗಿವೆ ಎಂದರು.

ADVERTISEMENT

ಅವಕಾಶಗಳು ಇಲ್ಲದೆ ಗ್ರಾಮೀಣ ಕಲಾವಿದರಿಗೆ ವಿಶೇಷ ಸೌಲಭ್ಯ, ಪ್ರೋತ್ಸಾಹ ನೀಡಿದಾಗ ಯುವಕರಲ್ಲಿ ಕಲಾ ಪೋಷಕ ಗುಣ ಬೆಳೆದುಬರುತ್ತದೆ ಎಂದು ಖಜೂರಿ ಶ್ರೀ ತಿಳಿಸಿದರು. ಯೋಗಪಟು ಚನ್ನಮಲ್ಲಯ್ಯ ಕಠಾರಿಮಠ ಮಾತನಾಡಿ, ‘ಯುವಕರಲ್ಲಿ   ಉತ್ಸಾಹ, ಸಮಾಜಸೇವೆ ಮತ್ತು ಕಲಾವಂತಿಕೆ ಗುಣಗಳು ಕಡಿಮೆ ಆಗುತ್ತಿವೆ. ಶಾಲೆ ಜೊತೆಗೆ ಸಮುದಾಯದಲ್ಲೂ ಮನರಂಜನೆಯ ಸಾಂಸ್ಕೃತಿಕ ಚಟುವಟಿಕೆಗಳು ನಿರಂತರವಾಗಿ ನಡೆಯಬೇಕು ಎಂದರು.

ಸಂಗೀತ ಕಲಾವಿದ ಸಂಜೀವನ ದೇಶಮುಖ, ಕನ್ನಡ ಜಾನಪದ ಸಾಹಿತ್ಯ ಪರಿಷತ್ತು ತಾಲ್ಲೂಕು ಅಧ್ಯಕ್ಷ ಅಪ್ಪಾಸಾಹೇಬ ತೀರ್ಥೆ, ಉಪನ್ಯಾಸಕ ಶರಣಬಸಪ್ಪ ಇಟಗಿ ಮಾತನಾಡಿದರು.

ಖಜೂರಿ ವಲಯ ಅಧ್ಯಕ್ಷ ರಾಜಶೇಖರ ಹರಿಹರ ಅಧ್ಯಕ್ಷತೆ ವಹಿಸಿದರು. ಡಾ.ಶ್ರೀನಿವಾಸ ದೇಶಮುಖ, ರಾಘವೇಂದ್ರ ಕುಮಟಾ, ಕಾರ್ಯದರ್ಶಿ ಡಿ.ಎಂ.ಪಾಟೀಲ, ಮಂಜುನಾಥ ಕಂದಗೂಳೆ, ವಿರೂಪಾಕ್ಷಪ್ಪ ವಾಡೆ, ಮಹಾದೇವಪ್ಪ ರಾಂಪೂರೆ, ಶ್ರೀಮಂತ ಸುಲ್ತಾನಪೂರೆ, ಗುರುಬಸಪ್ಪ ನಡಗೇರಿ, ರವಿ ಭದ್ರೆ, ಸಂತೋಷ ವಾನೇಗಾಂವ, ಶ್ರೀಶೈಲ ಭೀಮಪುರೆ, ಸುಭಾಷ ಹರಳಯ್ಯ, ರೇವಣಪ್ಪ ಅಲ್ದಿ,  ಶಂಕರ ಬಂಡೆ ಇದ್ದರು.

ಗ್ರಾಮದ ವೆಂಕಟೇಶ್ವರ ದೇವಸ್ಥಾನ, ಸಿದ್ದೇಶ್ವರ ದೇವಸ್ಥಾನ, ಅಂಬೇಡ್ಕರ್ ಸಮುದಾಯ ಭವನದಲ್ಲಿ ಸಾಂಸ್ಕೃತಿಕ ತಂಡಗಳಿಂದ ಆಕರ್ಷಕ ಕೋಲಾಟ, ಗ್ರಾಮೀಣ ನೃತ್ಯ ಮತ್ತು ಗಾಯನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.