ADVERTISEMENT

ತರಕಾರಿ ಬೆಲೆ ಏರಿಕೆ: ಗ್ರಾಹಕರು ಕಂಗಾಲು

​ಪ್ರಜಾವಾಣಿ ವಾರ್ತೆ
Published 21 ಜುಲೈ 2017, 6:07 IST
Last Updated 21 ಜುಲೈ 2017, 6:07 IST
ಕಲಬುರ್ಗಿಯ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಸುತ್ತಿರುವ ಮಹಿಳೆ
ಕಲಬುರ್ಗಿಯ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಸುತ್ತಿರುವ ಮಹಿಳೆ   

ಕಲಬುರ್ಗಿ: ನಗರದಲ್ಲಿ ತರಕಾರಿ ಬೆಲೆ ದಿಢೀರ್‌ ಏರಿಕೆಯಾಗಿದೆ. 15 ದಿನಗಳ ಅವಧಿಯಲ್ಲಿ ದರದಲ್ಲಿ ವ್ಯತ್ಯಾಸ ಆಗಿರುವುದರಿಂದ ಒಂದೆಡೆ ಗ್ರಾಹಕರು ಕಂಗಾಲು ಆಗಿದ್ದರೆ, ಮತ್ತೊಂದೆಡೆ ರೈತರು, ವ್ಯಾಪಾರಸ್ಥರು ಉತ್ತಮ ಆದಾಯ ಗಳಿಸುವ ಖುಷಿಯಲ್ಲಿದ್ದಾರೆ. ಒಂದು ಕೆ.ಜಿ ಟೊಮೆಟೊ ₹100ಕ್ಕೆ ಮಾರಾಟವಾದರೆ, ಮೆಣಸಿನಕಾಯಿ ₹80. ಹೀರೆಕಾಯಿ ₹70, ನುಗ್ಗೆಕಾಯಿ ₹80ಕ್ಕೂ ಕಡಿಮೆ ದರಕ್ಕೆ ಸಿಗುವುದಿಲ್ಲ.

₹30ಕ್ಕೆ ದೊರೆಯುತ್ತಿದ್ದ 1 ಕೆಜಿ ಟೊಮೆಟೊ ₹100 ಆಗಿರುವುದು ಗ್ರಾಹಕರಿಗೆ ತಲೆನೋವಾಗಿದೆ. ಟೊಮೆಟೊಗೆ ₹100 ಖರ್ಚು ಮಾಡಿದರೆ, ಬೇರೆ ತರಕಾರಿಗಳನ್ನು ಕೊಳ್ಳುವುದು ಹೇಗೆ?  ಕಡಿಮೆ ಪ್ರಮಾಣದಲ್ಲಿ ಬೇರೆ ತರಕಾರಿ ಖರೀದಿಸಿದರೂ ಇಡೀ ಕುಟುಂಬಕ್ಕೆ ಸಾಕಾಗುವುದೇ ಎಂಬ ಪ್ರಶ್ನೆ ಅವರನ್ನು ಕಾಡುತ್ತಿದೆ.

‘ತರಕಾರಿ ಇಲ್ಲದೇ ರುಚಿಕಟ್ಟಾದ ಅಡುಗೆ ಸಿದ್ಧಪಡಿಸುವುದು ಕಷ್ಟವೆಂದು ಮನೆಯಲ್ಲಿ ಹೇಳುತ್ತಾರೆ. ಆದರೆ ಮಾರುಕಟ್ಟೆಯಲ್ಲಿ ಕಡಿಮೆ ದರಕ್ಕೆ ತರಕಾರಿ ಸಿಗದಿರುವಾಗ, ಅವುಗಳನ್ನು ಕೊಂಡು ಮನೆಗೆ ಒಯ್ಯುವುದಾದರೂ ಹೇಗೆ? ತಿಂಗಳಾಂತ್ಯದವರೆಗೆ ಖರ್ಚು ನಿಭಾಯಿಸುವುದು ಕಷ್ಟವಾಗುತ್ತದೆ’ ಎಂದು ಖಾಸಗಿ ಸಂಸ್ಥೆ ಉದ್ಯೋಗಿ ನಂದಪ್ಪ ಕನ್ನಳ್ಳಿ ತಿಳಿಸಿದರು.

ADVERTISEMENT

ಹೆಚ್ಚಿನ ಪ್ರಮಾಣದಲ್ಲಿ ಟೊಮೆಟೊ ಲಭ್ಯವಾಗದ ಕಾರಣ ಬೆಲೆ ದಿಢೀರ್‌ ಏರಿಕೆಯಾಗಿದೆ. ಕೆಲ ತಿಂಗಳುಗಳ ಹಿಂದೆ ಟೊಮೆಟೊ ಬೆಲೆ ಕುಸಿದಿತ್ತು. ಉತ್ತಮ ಮಳೆಯು ಆಗಲಿಲ್ಲ. ಇದರ ಮಧ್ಯೆಯೇ ರೈತರು ಕಷ್ಟಪಟ್ಟು ಬೆಳೆದ ಟೊಮೆಟೊಗೆ ಹೆಚ್ಚಿನ ಬೇಡಿಕೆ ಇರುವುದರಿಂದ ರೈತರ ಮೊಗದಲ್ಲಿ ಕೊಂಚ ನಗುವನ್ನು ತಂದಿದೆ.

‘ಕಳೆದ ವರ್ಷ ಟೊಮೆಟೊ ದರ ಕೆ.ಜಿಗೆ ₹15ರಿಂದ ₹10ಕ್ಕೆ ಕುಸಿದಿದ್ದರಿಂದ ರೈತರು ಕಂಗಾಲಾಗಿದ್ದರು. ಇದರಿಂದ ಕೆಲ ಕಡೆ ಟೊಮೆಟೊ ಕೊಯ್ಲು ಆಗಲಿಲ್ಲ. ಆದರೆ ಈ ಬಾರಿ ಪರಿಸ್ಥಿತಿ ಬದಲಾಗಿದೆ. ಸ್ವತಃ ವ್ಯಾಪಾರಸ್ಥರೇ ಹೆಚ್ಚಿನ ದರ ನೀಡಿ ರೈತರಿಂದ ಟೊಮೆಟೊ ಖರೀದಿಸುತ್ತಿದ್ದಾರೆ. ಅದರ ಬೆಲೆ ಇನ್ನೂ ಏರಿಕೆಯಾಗಬಹುದು’ ಎಂದು ವ್ಯಾಪಾರಿ ತಾರಾದೇವಿ ಹೇಳಿದರು.

‘ಪೌಷ್ಟಿಕ ಆಹಾರದ ರೂಪದಲ್ಲಿ ತರಕಾರಿ ಅಗತ್ಯ. ಅವು ಕಡಿಮೆ ದರದಲ್ಲಿ ಸಿಕ್ಕರೆ, ಅನುಕೂಲವಾಗುತ್ತದೆ. ಕುಟುಂಬ ಸದಸ್ಯರೆಲ್ಲರೂ ಆರೋಗ್ಯವಾಗಿ ಇರಬಹುದು. ಬೆಲೆ ಏರಿಕೆ ವಿಷಯದಲ್ಲಿ ಸರ್ಕಾರ ಮಧ್ಯೆ ಪ್ರವೇಶಿಸಬೇಕು. ಬೆಲೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಗಮನಹರಿಸಬೇಕು. ಗ್ರಾಹಕರಿಗೆ ಹೆಚ್ಚಿನ ಹೊರೆಯಾಗದಂತೆ ನೋಡಿಕೊಳ್ಳಬೇಕು’ ಎನ್ನುವುದು ಗೃಹಿಣಿ ವಿಜಯಲಕ್ಷ್ಮಿ ಅಭಿಪ್ರಾಯ.

ರೇವಣಸಿದ್ದಪ್ಪ ಎಸ್‌. ದೇಸಾಯಿ

ತಟ್ಟೆಯಿಂದ ತರಕಾರಿ ಮಾಯ!
ನಗರದ ಬಹುತೇಕ ಹೋಟೆಲ್‌ ಮತ್ತು ಖಾನಾವಳಿಗಳ ಆಹಾರದಲ್ಲಿ ತರಕಾರಿ ಪ್ರಮಾಣ  ಕಡಿಮೆಯಾಗಿದೆ. ರೊಟ್ಟಿ ಜೊತೆ ಪಲ್ಲೆಯನ್ನು ಮಿತವಾಗಿ ನೀಡುವುದನ್ನು ಖಾನಾವಳಿ ಮಾಲೀಕರು ರೂಢಿಸಿಕೊಳ್ಳುತ್ತಿದ್ದಾರೆ. ಹೆಚ್ಚುವರಿಯಾಗಿ ಪಲ್ಲೆ ಅಥವಾ ಚಟ್ನಿ ಕೇಳಿದರೆ ಹೆಚ್ಚುವರಿ ಹಣ ಪಡೆಯುತ್ತಾರೆ. ದುಬಾರಿ ದರದ ತರಕಾರಿಗಳಿಗಿಂತ ಮಾಂಸಾಹಾರ ಬೆಲೆ ಕೊಂಚ ಕಡಿಮೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಹೀಗಾಗಿ ಮಾಂಸಾಹಾರಕ್ಕೆ ಬೇಡಿಕೆ ಹೆಚ್ಚಾಗಿದೆ.

* * 

ಈ ಬಾರಿ ಟೊಮೆಟೊ ದರ  ದುಬಾರಿಯಾಗಿದೆ. ರೈತರಿಗೆ ಸಮಾಧಾನ ತಂದಿದೆ. ವ್ಯಾಪಾರದಲ್ಲಿ ಉತ್ತಮ ಆದಾಯ ಸಿಗುವ ನಿರೀಕ್ಷೆಯಿದೆ.
ತಾರಾದೇವಿ
ತರಕಾರಿ ವ್ಯಾಪಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.