ADVERTISEMENT

ತೆರೆದ ಬಾವಿ ಸುರಕ್ಷತೆಗೆ ಕ್ರಮ: ಶಾಸಕ ಡಾ.ಅಜಯಸಿಂಗ್

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2017, 5:39 IST
Last Updated 6 ಸೆಪ್ಟೆಂಬರ್ 2017, 5:39 IST

ಜೇವರ್ಗಿ: ತಾಲ್ಲೂಕಿನ ಚನ್ನೂರ್ ಗ್ರಾಮದಲ್ಲಿ ದಲಿತ ಸಮುದಾಯದ ಜನತೆ ಬಳಸುತ್ತಿರುವ ಕುಡಿಯುವ ನೀರಿನ ಬಾವಿಗೆ ಕಿಡಿಗೇಡಿಗಳು ಕ್ರಿಮಿನಾಶಕ ಮಿಶ್ರಣ ಮಾಡಿದ್ದಾರೆ ಎನ್ನಲಾದ ವಿಷಯ ತಿಳಿಯುತ್ತಿದ್ದಂತೆಯೇ ಮಂಗಳವಾರ ಶಾಸಕ ಡಾ.ಅಜಯಸಿಂಗ್ ಗ್ರಾಮಕ್ಕೆ ಭೇಟಿ ನೀಡಿ ಘಟನೆ ಕುರಿತು ಗ್ರಾಮಸ್ಥರಿಂದ ಮಾಹಿತಿ ಪಡೆದುಕೊಂಡರು.

ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕೆಲ ದಿನಗಳ ಹಿಂದೆ ಕಿಡಿಗೇಡಿಗಳು ದಲಿತ ಸಮುದಾಯವರು ಬಳಸುವ ಕುಡಿಯುವ ನೀರಿನ ಬಾವಿಗೆ ಕ್ರಿಮಿನಾಶಕ ಮಿಶ್ರಣ ಮಾಡಿದ ಘಟನೆಯನ್ನು ತಾವು ಗಂಭೀರವಾಗಿ ಪರಿಗಣಿಸಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಿರುವುದಾಗಿ ಹೇಳಿದರು.

ತೆರೆದ ಬಾವಿಯ ಸುರಕ್ಷತೆ ಕಾಪಾಡಲು ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಬಾವಿ ಸುತ್ತ ಸುಸಜ್ಜಿತವಾದ ಕೋಣೆಯನ್ನು ನಿರ್ಮಿಸಿ ಬಾಗಿಲು ಅಳವಡಿಸಬೇಕು. ಕಲುಷಿತಗೊಂಡ ನೀರನ್ನು ಸ್ವಚ್ಛಗೊಳಿಸಬೇಕು. ಗ್ರಾಮಸ್ಥರ ಆರೋಗ್ಯಕ್ಕೆ ತೊಂದರೆ ಉಂಟಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳದಲ್ಲಿದ್ದ ತಹಶೀಲ್ದಾರ್ ಯಲ್ಲಪ್ಪ ಸುಬೇದಾರ್ ಅವರಿಗೆ ಸೂಚನೆ ನೀಡಿದರು.

ADVERTISEMENT

ಮುಂಬರುವ ದಿನಗಳಲ್ಲಿ ಇಂತಹ ಅಹಿತಕರ ಘಟನೆ ಮರುಕಳಿಸದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳಿಯ ಪೊಲೀಸ್ ಅಧಿಕಾರಿಗಳಿಗೆ ಶಾಸಕ ಡಾ.ಅಜಯಸಿಂಗ್ ತಾಕೀತು ಮಾಡಿದರು. ಶಾಸಕರ ಭೇಟಿ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಚಂದ್ರಶೇಖರ ಹರನಾಳ, ಕಾಶಿರಾಯಗೌಡ ಯಲಗೋಡ, ವಸಂತ ನರಿಬೋಳ, ನೀಲಕಂಠ ಅವಂಟಿ, ಮರೆಪ್ಪ ಸರಡಗಿ ಇದ್ದರು.

ಮಾಜಿ ಶಾಸಕರ ಭೇಟಿ : ಬಾವಿಗೆ ಕ್ರಿಮಿನಾಶಕ ಮಿಶ್ರಣ ಮಾಡಿದ್ದಾರೆ ಎನ್ನಲಾದ ಸುದ್ದಿ ಅರಿತು ಮಂಗಳವಾರ ಬೆಳಿಗ್ಗೆ ಮಾಜಿ ಶಾಸಕ ಹಾಗೂ ಬಿಜೆಪಿ ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಭೇಟಿ ನೀಡಿ ಗ್ರಾಮಸ್ಥರಿಂದ ಮಾಹಿತಿ ಪಡೆದರು. ಜಿಲ್ಲಾ ಪಂಚಾಯಿತಿ ಸದಸ್ಯರಾದ ಶಿವರಾಜ ಪಾಟೀಲ್ ರದ್ದೇವಾಡಗಿ, ದಂಡಪ್ಪ ಸಾಹು ಕುಳಗೇರಿ, ಮಾಜಿ ಸದಸ್ಯ ಮರೆಪ್ಪ ಬಡಿಗೇರ್ ಇದ್ದರು.

ಗ್ರಾಮಕ್ಕೆ ಭೇಟಿ ನೀಡಿದ್ದ ಉಪ ವಿಭಾಗಾಧಿಕಾರಿ ಎಂ.ರಾಚಪ್ಪ ಅವರು, ಬಾವಿಯಲ್ಲಿರುವ ನೀರು ಖಾಲಿ ಮಾಡಿ ಹೊಸ ನೀರು ಬರುವವರೆಗೆ ನೀರು ಬಳಸದಂತೆ ಗ್ರಾಮಸ್ಥರಿಗೆ ತಿಳಿಸಬೇಕು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪ್ರಭು ಮಾನೆ ಅವರಿಗೆ ಸೂಚನೆ ನೀಡಿದರು.

ತಹಶೀಲ್ದಾರ್ ಯಲ್ಲಪ್ಪ ಸುಬೇದಾರ್, ಜೇವರ್ಗಿ ಸರ್ಕಲ್ ಇನ್‌ಸ್ಪೆಕ್ಟರ್ ಎಚ್.ಎಂ.ಇಂಗಳೇಶ್ವರ್, ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಮಂಜುನಾಥ ಹೂಗಾರ, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಅಶೋಕ ನಾಯಕ್ ಉಪ ವಿಭಾಗಾಧಿಕಾರಿ ಭೇಟಿ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.