ADVERTISEMENT

‘ದಮನಿತರ ಗಟ್ಟಿ ದನಿ ಸಂವಿಧಾನ’

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2017, 9:42 IST
Last Updated 15 ಏಪ್ರಿಲ್ 2017, 9:42 IST

ಕಲಬುರ್ಗಿ: ‘ಡಾ.ಬಿ.ಆರ್‌.ಅಂಬೇಡ್ಕರ್‌ ರಚಿಸಿದ ಸಂವಿಧಾನ ಸಾರ್ವಕಾಲಿಕ ಮತ್ತು ಶಾಶ್ವತವಾಗಿದ್ದು, ದೇಶದ ಪ್ರತಿಯೊಬ್ಬ ಪ್ರಜೆಯ ದನಿಯಾಗಿದೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಅಭಿಪ್ರಾಯಪಟ್ಟರು.ಡಾ.ಬಿ.ಆರ್‌.ಅಂಬೇಡ್ಕರ್ ಜಯಂತ್ಯುತ್ಸವದ ಪ್ರಯುಕ್ತ ಭಾರತ ರಿಪಬ್ಲಿಕನ್ ಪಕ್ಷ (ಎ) ಮತ್ತು ದಲಿತ ಮೈನಾರಿಟಿ ಬ್ರಿಗೇಡ್‌ ಶುಕ್ರವಾರ ಹಮ್ಮಿಕೊಂಡಿದ್ದ ಕಾವ್ಯಕುಂಚ ಗಾಯನ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ‘ಸಂವಿಧಾನವು ಬಡವರು, ನಿರ್ಗತಿಕರನ್ನು ರಕ್ಷಿಸುವುದರ ಜೊತೆಗೆ ಅವರಿಗೆ ನೆಮ್ಮದಿಯಿಂದ ಬದುಕುವ ಹಕ್ಕು ಸಹ ನೀಡಿದೆ’ ಎಂದುಅವರು ಹೇಳಿದರು.

‘ವಿವಿಧ ದೇಶಗಳ ಸಂವಿಧಾನಗಳನ್ನು ಆಳವಾಗಿ ಅಧ್ಯಯನ ಮಾಡಿದ ಅಂಬೇಡ್ಕರ್‌ ನಮ್ಮ ದೇಶದ ಜನಜೀವನ ಮತ್ತು ಸಂಸ್ಕೃತಿಯನ್ನು ಅನುಸರಿಸಿ ಅತ್ಯುತ್ತಮ ಸಂವಿಧಾನ ರಚಿಸಿದರು’ ಎಂದು ಶ್ಲಾಘಿಸಿದರು.ಸಂವಿಧಾನ ನಿರ್ಗತಿಕರಿಗೆ ಆತ್ಮಬಲ ತಂದುಕೊಟ್ಟಿದೆ. ಸಮಾನತೆಯ ತಳಹದಿಯ ಮೇಲೆ ಜನರು ಬದುಕಲು ಸಾಧ್ಯವಾಗಿದೆ. ಇದೆಲ್ಲಾ ಅಂಬೇಡ್ಕರ್‌ ಅವರ ಆಶಯದಿಂದ ಸಾಧ್ಯವಾಗಿದೆ ಎಂದು ಹೇಳಿದರು.

ವಿಧಾನ ಪರಿಷತ್‌ ಮಾಜಿ ಸದಸ್ಯ ಅಲ್ಲಂಪ್ರಭು ಪಾಟೀಲ ಮಾತನಾಡಿ, ‘ಅಂಬೇಡ್ಕರ್ ಕಂಡ ಕನಸುಗಳನ್ನು ನನಸು ಮಾಡುವ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮಿಸಬೇಕಿದೆ. ಸಂವಿಧಾನದಲ್ಲಿರುವ ಅಂಶಗಳ ಆಧಾರದ ಮೇಲೆ ಉತ್ತಮ ಸಮಾಜ ಕಟ್ಟಬೇಕು’ ಎಂದರು.

ADVERTISEMENT

ಮಾಜಿ ಸಚಿವ ರೇವುನಾಯಕ ಬೆಳಮಗಿ ‘ಹಿಂದುಳಿದ ಸಮುದಾಯಕ್ಕೆ ಸೇರಿದ ನನ್ನಂತಹವರು ರಾಜಕೀಯವಾಗಿ ಪ್ರಗತಿ ಸಾಧಿಸಲು ಅಂಬೇಡ್ಕರ್ ಅವರೇ ಮೂಲ ಕಾರಣಕರ್ತರು. ಅವರು ಸಂವಿಧಾನ ರಚಿಸಿರದಿದ್ದರೆ, ಬಹುತೇಕ ಸಮುದಾಯಗಳು ಇನ್ನಷ್ಟು ತುಳಿತಕ್ಕೆ ಮತ್ತು ಶೋಷಣೆಗೆ ಒಳಗಾಗುತ್ತಿದ್ದವು. ಆ ಸಮುದಾಯಗಳಿಗೆ ನ್ಯಾಯ ಸಿಗುತ್ತಿರಲಿಲ್ಲ’ ಎಂದರು.

ಸಾಹಿತಿ ಪ್ರೊ.ಆರ್‌.ಕೆ.ಹುಡಗಿ ಅಂಬೇಡ್ಕರ್‌ ಕುರಿತು ವಿಶೇಷ ಉಪನ್ಯಾಸ ನೀಡಿದರು. ಆರ್‌ಪಿಐ (ಎ) ರಾಜ್ಯ ಘಟಕದ ಅಧ್ಯಕ್ಷ ಎ.ಬಿ.ಹೊಸಮನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಚಿತ್ರ ಕಲಾವಿದ ಬಸವರಾಜ ಜಾನೆ ಅವರನ್ನು ಸನ್ಮಾನಿಸಲಾಯಿತು. ವಿಧಾನ ಪರಿಷತ್‌ ಮಾಜಿ ಸದಸ್ಯ ಶಶೀಲ ನಮೋಶಿ, ನಿವೃತ್ತ ಮುಖ್ಯ ಎಂಜಿನಿಯರ್ ಬಿ.ಬಿ.ರಾಂಪುರೆ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಟಿ.ಟಿ.ಭೀಮರಾವ, ಗುರುಶಾಂತ ಪಟ್ಟೇದಾರ, ಮಹಾನಗರ ಪಾಲಿಕೆ ಸದಸ್ಯ ವಿಠಲ ಜಾಧವ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.