ADVERTISEMENT

ದಶಕದ ಹೋರಾಟಕ್ಕೆ ಫಲ

​ಪ್ರಜಾವಾಣಿ ವಾರ್ತೆ
Published 27 ಮೇ 2017, 7:09 IST
Last Updated 27 ಮೇ 2017, 7:09 IST

ಕಲಬುರ್ಗಿ: ನಗರದ ಇಂದಿರಾ ಸ್ಮಾರಕ ಭವನದ ಆವರಣದಲ್ಲಿ ಮೇ 27ರಂದು ಡಾ.ಬಾಬು ಜಗಜೀವನರಾಂ ಅವರ ಪ್ರತಿಮೆ ಅನಾವರಣಗೊಳಿಸಲಾಗುತ್ತಿದೆ. ಮುಖಂಡರ, ಸಂಘ–ಸಂಸ್ಥೆಗಳ ಹೋರಾಟದ ಫಲವಾಗಿ ಡಾ.ಜಗಜೀವನರಾಂ ಅವರ ಪ್ರತಿಮೆ ಅನಾವರಣ ಕನಸು ನನಸಾಗುತ್ತಿದೆ.

‘ಶಾಸಕ ಜಿ.ರಾಮಕೃಷ್ಣ, ಭೀಮಣ್ಣ ಟಿ.ಬಿಲ್ಲಾವ, ಅಂಬಾರಾಯ ಎಂ.ಚಲಗೇರಾ ಅವರು ಡಾ.ಬಾಬು ಜಗಜೀವನರಾಂ ಮೂರ್ತಿ ನಿರ್ಮಾಣದ ಸಮಿತಿ ರಚಿಸಿಕೊಂಡು 2007ರ ಜುಲೈ 27ರಂದು ಜಿಲ್ಲಾಧಿಕಾರಿ, ಮಹಾನಗರ ಪಾಲಿಕೆ ಆಯುಕ್ತ ಹಾಗೂ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮೂರ್ತಿ ನಿರ್ಮಾಣಕ್ಕಾಗಿ ಮನವಿ ಸಲ್ಲಿಸಿದರು.

ನಂತರ ಹಲವು ಸಭೆ ಮತ್ತು ಚರ್ಚೆ ನಡೆಸಿ, ಮುಂಬೈ ಮೂಲದ ವಾಘ ಅವರಿಂದ ಮಾಹಿತಿ ತರಿಸಿಕೊಂಡು 2009ರ ಮಾರ್ಚ್‌ 13ರಂದು ಮತ್ತೊಮ್ಮೆ ಮನವಿ ಸಲ್ಲಿಸಿದರು’ ಎಂದು ಡಾ.ಬಾಬು ಜಗಜೀವನರಾಂ ಹೋರಾಟ ಸಮಿತಿಯವರು ಸ್ಮರಿಸುತ್ತಾರೆ.

ADVERTISEMENT

ಪ್ರತಿಮೆ ನಿರ್ಮಾಣಕ್ಕಾಗಿ ಮಹಾನಗರ ಪಾಲಿಕೆಯಿಂದ 2008–09ನೇ ಸಾಲಿನ ಕ್ರಿಯಾ ಯೋಜನೆಯಲ್ಲಿ ಪಾಲಿಕೆಯ ಶೇ 22.75 ಅನುದಾನದಲ್ಲಿ ₹30 ಲಕ್ಷ ಕಾಯ್ದಿರಿಸಲಾಯಿತು. 2010ರ ಮಾರ್ಚ್‌ 5ರಂದು ಗುತ್ತಿಗೆ ಕೊಡಲಾಯಿತು.

‘2012ರ ಫೆ.10ರಂದು ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ನಿವೇಶನಕ್ಕಾಗಿ ಗೊತ್ತುವಳಿ ಮಂಡಿಸಿ, ಸರ್ವಾನುಮತದಿಂದ ಅನುಮೋದನೆಯೂ ದೊರೆಯಿತು. 10 ವರ್ಷಗಳ ಸತತ ಪ್ರಯತ್ನದಿಂದ ಮೂರ್ತಿ ಅನಾವರಣಗೊಳ್ಳುತ್ತಿದೆ’ ಎಂದು ಮೂರ್ತಿ ಸ್ಥಾಪನೆ ಮತ್ತು ಭವನ ನಿರ್ಮಾಣ ಸಮಿತಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಅಂಬಾರಾಯ ಎಂ.ಚಲಗೇರಾ ತಿಳಿಸಿದ್ದಾರೆ.

ಸಂತಸ: ಜಗಜೀವನರಾಂ ಅವರ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಮಹಿಳೆಯರು, ಪದಾಧಿಕಾರಿಗಳು, ಸಾರ್ವಜನಿಕರು ಭಾಗವಹಿಸಬೇಕು ಎಂದು  ಜಗಜೀವನರಾಂ ಪ್ರತಿಮೆ ಅನಾವರಣ ಮಹಿಳಾ ಘಟಕದ ಅಧ್ಯಕ್ಷೆ ಚಂದ್ರಿಕಾ ಪರಮೇಶ್ವರ ಮನವಿ ಮಾಡಿದ್ದಾರೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ 2005–06 ರ ಸಾಲಿನಲ್ಲಿ ನಾನು ಮೇಯರ್‌ ಆಗಿದ್ದ ಅವಧಿಯಲ್ಲಿ ಪ್ರತಿಮೆ ಸ್ಥಾಪನೆಗೆ ಪಾಲಿಕೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದ್ದು, ಈಗ ಪ್ರತಿಮೆ ಅನಾವರಣಗೊಳ್ಳುತ್ತಿರುವುದು ಸಂತಸ ತಂದಿದೆ. ಇದಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದರು. ಘಟಕದ ಕಾರ್ಯಾಧ್ಯಕ್ಷೆ ಗೀತಾ ರಾಜು ವಾಡೇಕರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.