ADVERTISEMENT

ನಿರ್ವಹಣೆ ನಿರೀಕ್ಷೆಯಲ್ಲಿ ಉದ್ಯಾನಗಳು

ರಾಹುಲ ಬೆಳಗಲಿ
Published 21 ಮೇ 2017, 6:01 IST
Last Updated 21 ಮೇ 2017, 6:01 IST
ಕಲಬುರ್ಗಿಯ ಆನಂದ ನಗರದ ಬಳಿಯಿರುವ ಉದ್ಯಾನ
ಕಲಬುರ್ಗಿಯ ಆನಂದ ನಗರದ ಬಳಿಯಿರುವ ಉದ್ಯಾನ   

ಕಲಬುರ್ಗಿ: ನಗರದ ವಿವಿಧ ವಾರ್ಡ್‌ಗಳಲ್ಲಿ ಇರುವ ಕೆಲ ಉದ್ಯಾನಗಳು ನಿರ್ವಹಣೆ ಕೊರತೆಯಿಂದ ಸೊರಗಿದರೆ, ಇನ್ನೂ ಕೆಲ ಉದ್ಯಾನಗಳು ಮೂಲ ಸೌಕರ್ಯದ ಕೊರತೆ ಎದುರಿಸುತ್ತಿವೆ.ಹಸಿರಾಗಿ ಕಂಗೊಳಿಸಬೇಕಿದ್ದ ಇಡೀ ಆವರಣದಲ್ಲಿ ಒಂದೆಡೆ ತ್ಯಾಜ್ಯ ಶೇಖರಣೆಗೊಂಡಿದ್ದರೆ, ಮತ್ತೊಂದೆಡೆ ಸಾರ್ವಜನಿಕರಿಗೆ ಕೂರಲು ಸಮರ್ಪಕವಾದ ಆಸನ
ವ್ಯವಸ್ಥೆಯೂ ಇಲ್ಲ.

ಆನಂದನಗರ, ವೆಂಕಟೇಶನಗರ, ಆಳಂದ ಕಾಲೊನಿ ಮುಂತಾದ ವಾರ್ಡ್‌ಗಳಲ್ಲಿನ ಕೆಲ ಉದ್ಯಾನಗಳು ಅಂದ ಕಳೆದುಕೊಳ್ಳುತ್ತಿವೆ. ಕೆಲ ಉದ್ಯಾನಗಳಿಗೆ ಕಾಂಪೌಂಡ್ ನಿರ್ಮಾಣ, ನಾಮಫಲಕ ಅಳವಡಿಕೆ, ನೀರು ಪೂರೈಕೆ ಮುಂತಾದ ವ್ಯವಸ್ಥೆ ಆಗಬೇಕಿದ್ದು, ಅವು ಕಾಯಕಲ್ಪದ ನಿರೀಕ್ಷೆಯಲ್ಲಿವೆ.

‘ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುವ ಈ ಉದ್ಯಾನಗಳ ಪುನಃಶ್ಚೇತನಕ್ಕೆ ಆಯಾ ವಾರ್ಡ್‌ ನಿವಾಸಿಗಳು ಹಲವು ಬಾರಿ ಮನವಿ ಸಲ್ಲಿಸಿದ್ದಾರೆ. ಬೇಡಿಕೆಗೆ ಸ್ಪಂದಿಸುವ ಕುರಿತು ಪಾಲಿಕೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಂದ ಭರವಸೆ ಸಿಕ್ಕಿದೆಯಾದರೂ ಇನ್ನೂ ಪೂರ್ಣಪ್ರಮಾಣದಲ್ಲಿ ಅನುಷ್ಠಾನಕ್ಕೆ ಬಂದಿಲ್ಲ’ ಎಂದು ನಿವಾಸಿಗಳು ಹೇಳುತ್ತಾರೆ.

ADVERTISEMENT

‘ಆನಂದನಗರದ ಕೋರ್ಟ್‌–ಟೆಂಪಲ್‌ ಮುಖ್ಯರಸ್ತೆ ಸಮೀಪದ ಉದ್ಯಾನದ ನಿರ್ವಹಣೆ ಸಮರ್ಪಕವಾಗಿಲ್ಲ. ಇದರ ಪರಿಣಾಮ ಆವರಣದಲ್ಲಿ ತ್ಯಾಜ್ಯ ಶೇಖರಣೆಯಾಗುತ್ತಿದೆ. ಸಾರ್ವಜನಿಕರು ಕೂರುವ ಆಸನ ವ್ಯವಸ್ಥೆಯು ಹದಗೆಟ್ಟಿದ್ದು, ಅದರ ಬದಿಯಲ್ಲೇ ಗಿಡಗಂಟಿಗಳು ಬೆಳೆದಿವೆ. ಹುಳುಹುಪ್ಪಡಿಗಳ ಕಾಟ ಹೆಚ್ಚಿದೆ’ ಎಂದು ಸ್ಥಳೀಯ ನಿವಾಸಿ ಚಂದ್ರಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘ಉದ್ಯಾನ ಪ್ರದೇಶದಲ್ಲಿ ಅಕ್ರಮ ಪ್ರವೇಶ ನಿಷೇಧಿಸಲಾಗಿರುವ ಹಳೆಯ ಫಲಕವೊಂದನ್ನು ಅಳವಡಿಸಲಾಗಿದೆ. ಸೌಕರ್ಯ ಕೊರತೆ ಮಧ್ಯೆಯೂ ಇಲ್ಲಿ ಮಕ್ಕಳು ಆಟವಾಡುತ್ತಾರೆ. ಜನರು ಆಗಾಗ್ಗೆ ವಾಯುವಿಹಾರಕ್ಕೂ ಬರುತ್ತಾರೆ. ಸೌಕರ್ಯ ಒದಗಿಸಿ ಇಡೀ ಉದ್ಯಾನ ಸಮಗ್ರವಾಗಿ ಅಭಿವೃದ್ಧಿಪಡಿಸಿದರೆ ಹೆಚ್ಚು ಅನುಕೂಲವಾಗುತ್ತದೆ’ ಎಂದು ಅವರು ತಿಳಿಸಿದರು.

‘ಕೈಲಾಸನಗರದಲ್ಲಿರುವ ಎರಡು ಉದ್ಯಾನಗಳಲ್ಲೂ ಅವ್ಯವಸ್ಥೆ ಹೆಚ್ಚಿದೆ. ಒಂದು ಉದ್ಯಾನದಲ್ಲಿ ತಂತಿ ಬೇಲಿ ಕಿತ್ತಿದ್ದರೆ, ಮತ್ತೊಂದು ಉದ್ಯಾನದಲ್ಲಿ ಗಿಡಗಂಟಿಗಳು ಬೆಳೆದಿವೆ. ಉದ್ಯಾನದೊಳಗೆ ಪ್ರವೇಶಿಸುವುದೇ ಕಷ್ಟ ಎಂಬ ಸ್ಥಿತಿಯಿದೆ. ಈ ಎಲ್ಲ ಉದ್ಯಾನಗಳನ್ನು ಅಭಿವೃದ್ಧಿಪಡಿಸಬೇಕು’ ಎಂಬುದು ಸ್ಥಳೀಯರ ಒತ್ತಾಯ.

ಹಂತಹಂತವಾಗಿ ಅಭಿವೃದ್ಧಿ: ಆರ್‌.ಪಿ.ಜಾಧವ್‌

‘ವಿವಿಧ ಹಣಕಾಸು ಯೋಜನೆಯಡಿ ಬಹುತೇಕ ಉದ್ಯಾನಗಳನ್ನು ಹಂತಹಂತವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಕೆಲ ಉದ್ಯಾನಗಳು ಖಾಸಗಿ ಲೇಔಟ್‌ ಮಾಲೀಕರ ಸುಪರ್ದಿಯಲ್ಲಿವೆ. ಅಲ್ಲಿ ನಡಿಗೆ ಮಾರ್ಗ, ಕಾಂಪೌಂಡ್ ನಿರ್ಮಾಣ ಕಾರ್ಯ ಆಗಬೇಕಿದೆ’ ಎಂದು ಪಾಲಿಕೆ ಕಾರ್ಯನಿರ್ವಾಹಕ ಎಂಜಿನಿಯರ್ ಆರ್‌.ಪಿ.ಜಾಧವ್ ‘ಪ್ರಜಾವಾಣಿ’ಗೆ ತಿಳಿಸಿದರು.

‘2013–14, 2014–15 ಮತ್ತು 2016–17ನೇ ಹಣಕಾಸಿನ ಯೋಜನೆಯಡಿ ಅಭಿವೃದ್ಧಿ ಕಾಮಗಾರಿಗೆ ಸಂಬಂಧಿಸಿದಂತೆ ಕೆಲ ಉದ್ಯಾನಗಳನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಅವುಗಳಿಗೆ ಮೂಲಸೌಕರ್ಯ ಕಲ್ಪಿಸುವುದರ ಜೊತೆಗೆ ಸಮರ್ಪಕ ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು’ ಎಂದು ಅವರು ತಿಳಿಸಿದರು.

ಮೊದಲಿನ ಹಂತದ ರೂಪದಲ್ಲಿ ಕೆಲ ಉದ್ಯಾನಗಳಲ್ಲಿ ನಡಿಗೆ ಮಾರ್ಗ ನಿರ್ಮಾಣಕ್ಕೆ ಆದ್ಯತೆ ನೀಡಿರುವ ಪಾಲಿಕೆ ಅಧಿಕಾರಿಗಳು ಮುಂದಿನ ದಿನಗಳಲ್ಲಿ ಅವುಗಳ ಹಸಿರೀಕರಣಕ್ಕೆ ಯೋಜನೆ ರೂಪಿಸಿದ್ದಾರೆ. ಉದ್ಯಾನಗಳ ನಿರ್ವಹಣೆ ಮತ್ತು ನಿಗಾ ವಹಿಸುವಿಕೆಗೆ ಸಿಬ್ಬಂದಿ ನಿಯೋಜಿಸಲು ಉದ್ದೇಶಿಸಿದ್ದಾರೆ.

ಉದ್ಯಾನಗಳ ಸ್ಥಿತಿಗತಿ

245 ನಗರದಲ್ಲಿರುವ ಒಟ್ಟು ಉದ್ಯಾನಗಳು

188 ಕಾಂಪೌಂಡ್‌ ಹೊಂದಿರುವ ಉದ್ಯಾನ

53 ನಡಿಗೆ ಮಾರ್ಗ ಇರುವ ಉದ್ಯಾನ

14 ಮಕ್ಕಳ ಆಟಿಕೆ ಸಾಧನ ಇರುವವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.