ADVERTISEMENT

‘ನೀರಿನ ಯೋಜನೆಗೆ ₹1 ಕೋಟಿ ಅನುದಾನ’

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2017, 10:13 IST
Last Updated 15 ಏಪ್ರಿಲ್ 2017, 10:13 IST

ಜೇವರ್ಗಿ: ‘ತಾಲ್ಲೂಕಿನ ಇಜೇರಿ ಗ್ರಾಮಕ್ಕೆ ಶಾಶ್ವತ ಕುಡಿಯುವ ನೀರು ಪೂರೈಸುವ ಯೋಜನೆಗೆ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಸರಬುರಾಜು ಇಲಾಖೆಯಿಂದ ₹1ಕೋಟಿ ಅನುದಾನ ಬಿಡುಗಡೆ ಗೊಳಿಸಲಾಗುವುದು’ ಎಂದು ಶಾಸಕ ಡಾ.ಅಜಯಸಿಂಗ್ ಹೇಳಿದರು.

ಶುಕ್ರವಾರ ತಾಲ್ಲೂಕಿನ ಇಜೇರಿ ಗ್ರಾಮದಲ್ಲಿ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯಿಂದ ನಿರ್ಮಿಸುತ್ತಿರುವ ಸಿಸಿ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಕೇಂದ್ರ ಸ್ಥಾನವಾದ ಇಜೇರಿಯಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಿಸಲು ಹೈದರಾಬಾದ್–ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ₹66ಲಕ್ಷ ಅನುದಾನ ಬಿಡುಗಡೆಗೊಳಿಸಲಾಗಿದೆ. 3ತಿಂಗಳ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು. ಈ ಮೊದಲು ಇಜೇರಿಯಲ್ಲಿ ₹50ಲಕ್ಷ ವೆಚ್ಚದ ಸಿಸಿ ರಸ್ತೆ ಕಾಮಗಾರಿ ಪೂರ್ಣಗೊಳಿಸಲಾಗಿದೆ. ತಾಲ್ಲೂಕಿನ ಆಂದೋಲಾ, ಇಜೇರಿ ಹಾಗೂ ನೆಲೋಗಿಯಲ್ಲಿ ತಲಾ ₹50ಲಕ್ಷ ವೆಚ್ಚದಲ್ಲಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಭವನ ನಿರ್ಮಿಸಲಾಗುವುದು. ಇಜೇರಿಯಲ್ಲಿ ₹32ಲಕ್ಷ ಅಂದಾಜು ವೆಚ್ಚದಲ್ಲಿ ರೈತ ಸಂಪರ್ಕ ಕೇಂದ್ರ ಕಚೇರಿ ನಿರ್ಮಿಸಲಾಗುವುದು.

ADVERTISEMENT

ಇಜೇರಿಯಲ್ಲಿ ಪದವಿ ಪೂರ್ವ ಕಾಲೇಜು ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ಮಂಜೂರಾತಿಗೆ ಕ್ರಮ ಕೈಗೊಳ್ಳಲಾಗುವುದು. ಬೇಸಿಗೆಯಲ್ಲಿ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಇಜೇರಿ ಜಿಲ್ಲಾ ಪಂಚಾಯಿತಿ ಸದಸ್ಯ ಶಾಂತಪ್ಪ ಕೂಡಲಗಿ, ತಾಲ್ಲೂಕು ಪಂಚಾಯಿತಿ ಸದಸ್ಯೆ ಲಕ್ಷ್ಮಿ ಸಾಬಣ್ಣ ಗುತ್ತೇದಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಗುಂಡಪ್ಪ ಗೌಡಗೇರಿ, ಪೀಕಾರ್ಡ್ ಬ್ಯಾಂಕ್ ಅಧ್ಯಕ್ಷ ಅಬ್ದುಲ್ ರಜಾಕ್ ಮಣಿಯಾರ್,ಚಂದ್ರಶೇಖರ ಹರನಾಳ, ಕಾಸಿಂಪಟೇಲ್ ಮುದವಾಳ, ರುಕುಂಪಟೇಲ್ ಪೊಲೀಸ್ಪಾಟೀಲ, ಶೌಕತ್ ಅಲಿ ಆಲೂರ, ಲಾಲಯ್ಯ ಗುತ್ತೇದಾರ್, ಅಮೀರ್ ಹಮ್ಜಾ ಇಜೇರಿ, ಚಂದ್ರಕಾಂತ ಯಂಕಂಚಿ, ಇಮಾಮಸಾಬ್       ಮಡಕಿ, ಮಲ್ಲಣ್ಣಗೌಡ ಲಕಣಾಪುರ, ಮುನ್ನಾ ಪಟೇಲ್ ಮಾಲಿಬಿರಾದಾರ್, ಸೈದಪ್ಪ ಕಟ್ಟಿಮನಿ, ಮರೆಪ್ಪ ಸರಡಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.