ADVERTISEMENT

ನೀರಿನ ರಭಸಕ್ಕೆ ಕೊಚ್ಚಿಹೋದ ಸೇತುವೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2017, 7:26 IST
Last Updated 18 ಸೆಪ್ಟೆಂಬರ್ 2017, 7:26 IST
ಜೇವರ್ಗಿ ತಾಲ್ಲೂಕಿನ ಕಲ್ಲೂರ್(ಬಿ) ಚಿನಮಳ್ಳಿ ಮಧ್ಯೆ ಭೀಮಾ ನದಿಗೆ ಅಡ್ಡಲಾಗಿ ನಿರ್ಮಿಸಿದ ಬ್ರಿಜ್ ಕಂ ಬ್ಯಾರೇಜ್‌ಗೆ ಹೆಚ್ಚಿನ ನೀರು ಬಂದಿದ್ದರಿಂದ ಸೇತುವೆ ಕೊಚ್ಚಿಹೋಗಿದೆ. (ಎಡಚಿತ್ರ). ಅಫಜಲಪುರ ತಾಲ್ಲೂಕಿನ ಘತ್ತರಗಿ ಗ್ರಾಮದ ಹತ್ತಿರ ಭೀಮಾನದಿಗೆ ನಿರ್ಮಸಿರುವ ಸೇತುವೆ ಮೇಲೆ ನೀರು ಬಂದಿರುವುದರಿಂದ ಸಿಂದಗಿ, ಜೇವರ್ಗಿ ತಾಲ್ಲೂಕಿನ ಸಂಪರ್ಕ ಸ್ಥಗಿತವಾಗಿರುವುದು
ಜೇವರ್ಗಿ ತಾಲ್ಲೂಕಿನ ಕಲ್ಲೂರ್(ಬಿ) ಚಿನಮಳ್ಳಿ ಮಧ್ಯೆ ಭೀಮಾ ನದಿಗೆ ಅಡ್ಡಲಾಗಿ ನಿರ್ಮಿಸಿದ ಬ್ರಿಜ್ ಕಂ ಬ್ಯಾರೇಜ್‌ಗೆ ಹೆಚ್ಚಿನ ನೀರು ಬಂದಿದ್ದರಿಂದ ಸೇತುವೆ ಕೊಚ್ಚಿಹೋಗಿದೆ. (ಎಡಚಿತ್ರ). ಅಫಜಲಪುರ ತಾಲ್ಲೂಕಿನ ಘತ್ತರಗಿ ಗ್ರಾಮದ ಹತ್ತಿರ ಭೀಮಾನದಿಗೆ ನಿರ್ಮಸಿರುವ ಸೇತುವೆ ಮೇಲೆ ನೀರು ಬಂದಿರುವುದರಿಂದ ಸಿಂದಗಿ, ಜೇವರ್ಗಿ ತಾಲ್ಲೂಕಿನ ಸಂಪರ್ಕ ಸ್ಥಗಿತವಾಗಿರುವುದು   

ಜೇವರ್ಗಿ/ಅಫಜಲಪುರ: ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಭೀಮಾ ನದಿಗೆ ಅಧಿಕ ಪ್ರಮಾಣದಲ್ಲಿ ನೀರು ಹರಿಸಿದ್ದರಿಂದ ಜೇವರ್ಗಿ ತಾಲ್ಲೂಕಿನ ಕಲ್ಲೂರ್ (ಬಿ) ಮತ್ತು ಅಫಜಲಪುರ್ ತಾಲ್ಲೂಕಿನ ಚಿನಮಳ್ಳಿ ಮಧ್ಯೆ ಭೀಮಾ ನದಿಗೆ ಅಡ್ಡಲಾಗಿ ನಿರ್ಮಿಸಿದ ಬ್ರಿಜ್ ಕಂ ಬ್ಯಾರೇಜ್ ಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದಿದೆ. ಇದರಿಂದ ಕಲ್ಲೂರ್ (ಬಿ) ಗ್ರಾಮದ ಸೇತುವೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ.

ಜೇವರ್ಗಿ ವರದಿ: ಸೇತುವೆ ಕೊಚ್ಚಿಕೊಂಡು ಹೋಗಿದ್ದರಿಂದ ತಾಲ್ಲೂಕಿನ ನೂರಾರು ಎಕರೆ ಜಮೀನಿನಲ್ಲಿ ಬಿತ್ತನೆ ಮಾಡಿದ ಬೆಳೆ ಹಾನಿಯಾಗಿದೆ ಎಂದು ತಹಶೀಲ್ದಾರ್ ಯಲ್ಲಪ್ಪ ಸುಬೇದಾರ್ ಮಾಹಿತಿ ನೀಡಿದ್ದಾರೆ.

ಉಜನಿ ಜಲಾಶಯದಿಂದ ಶನಿವಾರ 58 ಸಾವಿರ ಕ್ಯೂಸೆಕ್‌, ಭಾನುವಾರ 1.43 ಲಕ್ಷ ಕ್ಯೂಸೆಕ್‌ ನೀರು ಬೀಡಲಾಗಿದೆ. ಇದರಿಂದ ಭೀಮಾ ನದಿ ಪ್ರವಾಹ ಉಂಟಾಗಿದೆ. ಭೀಮಾ ನದಿ ಪಾತ್ರದ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ.

ADVERTISEMENT

ಜಿಲ್ಲಾಧಿಕಾರಿ ಭೇಟಿ: ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್ ಕಲ್ಲೂರ್ (ಬಿ) ಬ್ಯಾರೇಜ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಭೀಮಾ ನದಿ ಪಾತ್ರದ ಗ್ರಾಮಸ್ಥರಿಗೆ ಯಾವುದೇ ತೊಂದರೆ ಉಂಟಾಗದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್ ಯಲ್ಲಪ್ಪ ಸುಬೇದಾರ್ ಅವರಿಗೆ ಸೂಚನೆ ನೀಡಿದ್ದಾರೆ. ಪ್ರವಾಹ ಪರಿಸ್ಥಿತಿ ಎದುರಿಸಲು ತಾಲ್ಲೂಕು ಆಡಳಿತ ಸನ್ನಧ್ಧರಾಗಬೇಕು ಎಂದು ಅವರು ತಿಳಿಸಿದ್ದಾರೆ.

ಜೇವರ್ಗಿ ತಾಲ್ಲೂಕಿನ ನೆಲೋಗಿ, ಬಳ್ಳುಂಡಗಿ, ಯಂಕಂಚಿ, ಮಾಹೂರ ಸೇರಿದಂತೆ ಭೀಮಾ ನದಿ ಪಾತ್ರದ ಹತ್ತಾರು ಹಳ್ಳಿಗಳ ಜಮೀನಿನಲ್ಲಿ ಬಿತ್ತನೆ ಮಾಡಿದ ಬೆಳೆಗಳು ಹಾನಿಗೀಡಾಗಿವೆ. ಕೂಡಲೇ ಬೆಳೆ ಹಾನಿ ಕುರಿತು ಸಮೀಕ್ಷೆ ನಡೆಸಿ ಸಮಗ್ರ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ತಹಶೀಲ್ದಾರ್‌ಗೆ ಸೂಚನೆ ನೀಡಿದ್ದಾರೆ.

ಮಾಜಿ ಶಾಸಕ ಅಲ್ಲಮಪ್ರಭು ಪಾಟೀಲ, ಉಪ ವಿಭಾಗಾಧಿಕಾರಿ ಎಂ.ರಾಚಪ್ಪ, ತಹಶೀಲ್ದಾರ್ ಯಲ್ಲಪ್ಪ ಸುಬೇದಾರ್, ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ದೇವಕ್ಕೆಮ್ಮ ಚನಮಲ್ಲಯ್ಯ ಹಿರೇಮಠ, ಕಲ್ಲೂರ್ (ಕೆ) ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸವಿತಾ ರಮೇಶ ಕಲಶೆಟ್ಟಿ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಇದ್ದರು.

ಅಫಜಲಪುರ ವರದಿ: ಅಫಜಲಪುರದ ಸೊನ್ನ ಭೀಮಾ ಜಲಾಶಯದಿಂದ 17 ಗೇಟ್‌ಗಳ ಮುಖಾಂತರ ಭೀಮಾನದಿಗೆ ಬಿಡಲಾಗುತ್ತಿದೆ ಎಂದು ಕರ್ನಾಟಕ ನೀರಾವರಿ ನಿಗಮದ ಅಫಜಲಪುರ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಲಕ್ಷ್ಮೀಕಾಂತ ಅಗ್ನಿಹೋತ್ರಿ ಹಾಗೂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಬಿ.ಎಸ್‌.ಐನಾಪೂರ ತಿಳಿಸಿದರು.

ಈ ಕುರಿತು ಭಾನುವಾರ ಮಾಹಿತಿ ನೀಡಿದ ಅವರು, ಭೀಮಾ ಬ್ಯಾರೇಜ್‌ನಲ್ಲಿ ಸದ್ಯ 405.8 ಮೀ ನೀರು ಸಂಗ್ರಹವಾಗಿದೆ. ವಿದ್ಯುತ್‌ ಉತ್ಪಾದನೆ ಘಟಕದಿಂದಲೂ ನೀರು ಭೀಮಾನದಿಗೆ ಬಿಡಲಾಗುತ್ತಿದೆ. ಅದಕ್ಕಾಗಿ ರೈತರು ಭೀಮಾನದಿ ದಡಕ್ಕೆ ಹೋಗಕೂಡದು ಮತ್ತು ಜಾನುವಾರುಗಳನ್ನು ಬಿಡಕೂಡದು. ಇನ್ನೂ ನೀರಿನ ಹರಿಯುವಿಕೆ ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ತಿಳಿಸಿದರು.

ಸಂಚಾರ ಸ್ಥಗಿತ: ಅಫಜಲಪುರ ತಾಲ್ಲೂಕಿನ ಘತ್ತರಗಿ ಗ್ರಾಮದ ಹತ್ತಿರ ಭೀಮಾನದಿಗೆ ಅಡ್ಡಲಾಗಿ ನಿರ್ಮಸಿರುವ ಸೇತುವೆ ಮೇಲೆ ನೀರು ಬಂದಿರುವದರಿಂದ ಘತ್ತರಗಿಯಿಂದ ಜೇವರ್ಗಿ ಮತ್ತು ಸಿಂದಗಿ ತಾಲ್ಲೂಕಿನ ಗ್ರಾಮಗಳಿಗೆ ಸಂಚಾರ ಸ್ಥಗಿತವಾಗಿದೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.