ADVERTISEMENT

ನೀಲಕಂಠ ಕಾಳೇಶ್ವರ ಜಾತ್ರೆಗೆ ಜನಸಾಗರ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2017, 5:43 IST
Last Updated 20 ಏಪ್ರಿಲ್ 2017, 5:43 IST

ಕಾಳಗಿ:ಇಲ್ಲಿನ ನೀಲಕಂಠ ಕಾಳೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ದೇವಸ್ಥಾನದ ಆವರಣದಲ್ಲಿ ಭಕ್ತ ಸಮೂಹದ ಜಯಘೋಷಗಳ ನಡುವೆ ನೀಲಕಂಠ ಕಾಳೇಶ್ವರ ಹೂಹಾರಗಳ ಅಲಂಕೃತ ರಥೋತ್ಸವ ಬುಧವಾರ ರಾತ್ರಿ ಅದ್ಧೂರಿಯಾಗಿ ಜರುಗಿತು.ಸ್ಥಳೀಯ ಹಿರೇಮಠದ ಪೀಠಾಧಿಪತಿ ಶಿವಬಸವ ಶಿವಾಚಾರ್ಯರು, ಭರತನೂರ ಮಠದ ಪೀಠಾಧಿಪತಿ ಚಿಕ್ಕಗುರುನಂಜೇಶ್ವರ ಸ್ವಾಮೀಜಿ, ಡೊಣ್ಣೂರಿನ ವೀರಭದ್ರಪ್ಪ ಅಜ್ಜ ಹಾಗೂ ಚಂದ್ರಮೌಳಿ ಸ್ವಾಮೀಜಿ ನೇತೃತ್ವದಲ್ಲಿ ವಿಧಿ-ವಿಧಾನಗಳೊಂದಿಗೆ ರಥಕ್ಕೆ ಪೂಜೆ ಸಲ್ಲಿಸಿ ಪುರವಂತರ ಕುಣಿತ ಮುಗಿಯುತ್ತಿದ್ದಂತೆ ಭಕ್ತರು ತೇರು ಎಳೆಯಲು ಆರಂಭಿಸಿದರು.

ಕಿಕ್ಕಿರಿದು ಸೇರಿದ್ದ ಭಕ್ತಸ್ತೋಮ ಶ್ರೀ ನೀಲಕಂಠ ಕಾಳೇಶ್ವರ ಮಹಾರಾಜ್ ಕಿ ಜೈ ಎಂದು ಘೋಷಣೆ ಕೂಗಿ ಬಾಳೆಹಣ್ಣು, ಉತ್ತತ್ತಿ, ನಾಣ್ಯ ತೇರಿನ ಮೇಲೆ ಎಸೆದು ಹರಕೆ ಸಲ್ಲಿಸಿ ಕೈಮುಗಿದು ನಮಿಸಿದರು.ಮಹಿಳೆಯರು, ಚಿಕ್ಕಮಕ್ಕಳು ಸೂರ್ಯನಾರಾಯಣ ದೇಗುಲ, ಸಾಧು ಮುತ್ಯಾನ ಕಟ್ಟೆಯ ಮೇಲೆ ನಿಂತು ರಥೋತ್ಸವ ವೀಕ್ಷಿಸಿದರೆ, ಯುವಕರು, ಹಿರಿಯರು ದೇವಸ್ಥಾನ ಮೈದಾನದ ಮತ್ತು ಎದುರಿನ ಹೊಲದಲ್ಲಿ ನಿಂತು ರಥೋತ್ಸವ ನೋಡಿದರು. ಇದಕ್ಕೂ ಮುನ್ನ ನಾಗಮೂರ್ತಿ ಪಂಚಾಳ ಮನೆಯಿಂದ ಕಳಶ, ಶರಣಗೌಡ ಪಾಟೀಲ, ಜೈಶಂಕರ ಪಾಟೀಲ ಮನೆಯಿಂದ ಕುಂಭ ಹಾಗೂ ಶಿವಲಿಂಗಯ್ಯ ಮಠಪತಿ ಮನೆಯಿಂದ ನಂದಿಕೋಲಿನ ಮೆರವಣಿಗೆಯು ಮಂಗಳ ವಾದ್ಯಗಳೊಂದಿಗೆ ದೇವಸ್ಥಾನಕ್ಕೆ ಆಗಮಿಸಿ ರಥಕ್ಕೆ ಪ್ರದಕ್ಷಿಣೆ ಹಾಕಿತು.

ಬೆಳಗಿನಜಾವ ಪುರವಂತರೊಂದಿಗೆ ಬಸಯ್ಯ ಪ್ಯಾಟಿಮಠ ಮನೆಯಿಂದ ಆಗಮಿಸಿದ ಉಚಾಯಿ ಮೆರವಣಿಗೆಯು ವೀರಭಧ್ರೇಶ್ವರ ದೇವಸ್ಥಾನಕ್ಕೆ ತಲುಪಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಅಗ್ನಿಕುಂಡಕ್ಕೆ ಬಂದು ಪುರವಂತರು ಶಸ್ತ್ರ ಚುಚ್ಚಿಕೊಳ್ಳುವ ಸೇವೆಯ ಜತೆಗೆ ಅಪಾರ ಭಕ್ತರು ಐದು ಸುತ್ತು ಅಗ್ನಿಪ್ರವೇಶ ಮಾಡಿ ಕೊನೆಯಲ್ಲಿ ಪಲ್ಲಕ್ಕಿಯೊಂದಿಗೆ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿದರು.

ADVERTISEMENT

ಚಿಂಚೋಳಿ ಶಾಸಕ ಡಾ.ಉಮೇಶ ಜಾಧವ್, ದೇವಸ್ಥಾನ ಸಮಿತಿ ಗೌರವಾಧ್ಯಕ್ಷ ಜಗದೇವ ಗುತ್ತೇದಾರ, ಅಧ್ಯಕ್ಷ ಶರಣಗೌಡ ಪಾಟೀಲ, ಕಾರ್ಯದರ್ಶಿ ಶಿವಶರಣಪ್ಪ ಕಮಲಾ ಪುರ, ಮುಖಂಡ ನಿಂಬೆಣ್ಣಪ್ಪ ಕೋರವಾರ, ಪ್ರಭು ಬಾವಿ, ಮನೋಹರರಾವ ಪತಂಗೆ, ಡಾ.ವಿಜಯ ಕುಮಾರ ಪರುತೆ, ಡಾ.ಶಿವಶರಣಪ್ಪ ಧಾಬಾ, ಚಂದ್ರಕಾಂತ ಜಾಧವ್, ತಾ.ಪಂ ಸದಸ್ಯೆ ರತ್ನಮ್ಮ ಗುತ್ತೇದಾರ, ಗ್ರಾ.ಪಂ ಅಧ್ಯಕ್ಷೆ ಶಿವಲೀಲಾ ಸಲಗೂರ, ನಿವೃತ್ತ ಆಯುಕ್ತ ಸುಭಾಷ ವಾಲಿ ಸೇರಿದಂತೆ ಸುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಜಾತ್ರಾ ನಿಮಿತ್ತ ತೆಂಗಿನಕಾಯಿ, ವಿಭೂತಿ ಕುಂಕುಮ, ಪೂಜಾ ಸಾಮಾಗ್ರಿಗಳು, ಮಕ್ಕಳ ಆಟಿಕೆ ಸಾಮಾನು ಖರೀದಿ ಜೋರಾಗಿತ್ತು. ಮಕ್ಕಳು, ಮಹಿಳೆಯರು ತೊಟ್ಟಿಲು ಒಳಗೆ ಕುಳಿತುಕೊಳ್ಳಲು ಮುಗಿಬಿದ್ದಿದರು. ಹೋಟೆಲ್, ಸಿಹಿತಿಂಡಿ ಪದಾರ್ಥಗಳ ಅಂಗಡಿಗಳು ಜನರಿಂದ ತುಂಬಿ ತುಳಿಕಿದವು. ಸಿಪಿಐ ಡಿ.ಬಿ.ಕಟ್ಟಿಮನಿ, ಪಿಎಸ್ಐ ಚಂದ್ರಕಾಂತ ಮೇಕಾಲೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.