ADVERTISEMENT

ನ.19ರಂದು ಕೂಡಲಸಂಗಮ ಚಲೋ’

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2017, 7:36 IST
Last Updated 9 ನವೆಂಬರ್ 2017, 7:36 IST
ಕಲಬುರ್ಗಿಯಲ್ಲಿ ಬುಧವಾರ ‘ಕೂಡಲ ಸಂಗಮ ಚಲೋ ಸಮಿತಿ’ಯಿಂದ ಏರ್ಪಡಿಸಿದ್ದ ಪೂರ್ವಭಾವಿ ಸಭೆಯನ್ನು ಶ್ರೀನಿವಾಸ ಸರಡಗಿಯ ರೇವಣಸಿದ್ದ ಶಿವಾಚಾರ್ಯರು ಉದ್ಘಾಟಿಸಿದರು
ಕಲಬುರ್ಗಿಯಲ್ಲಿ ಬುಧವಾರ ‘ಕೂಡಲ ಸಂಗಮ ಚಲೋ ಸಮಿತಿ’ಯಿಂದ ಏರ್ಪಡಿಸಿದ್ದ ಪೂರ್ವಭಾವಿ ಸಭೆಯನ್ನು ಶ್ರೀನಿವಾಸ ಸರಡಗಿಯ ರೇವಣಸಿದ್ದ ಶಿವಾಚಾರ್ಯರು ಉದ್ಘಾಟಿಸಿದರು   

ಕಲಬುರ್ಗಿ:‘ವೀರಶೈವ– ಲಿಂಗಾಯತ ಎರಡೂ ಒಂದೆ. ಕೆಲ ಮಠಾಧೀಶರು ಮತ್ತು ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕಾಗಿ ಸಮಾಜದಲ್ಲಿ ಗೊಂದಲ ಮೂಡಿಸುತ್ತಿರುವುದು ಸರಿಯಲ್ಲ’ ಎಂದು ಶ್ರೀನಿವಾಸ ಸರಡಗಿಯ ರೇವಣಸಿದ್ದ ಶಿವಾಚಾರ್ಯರು ಹೇಳಿದರು.

ಇಲ್ಲಿಯ ಕನ್ನಡ ಭವನದಲ್ಲಿ ‘ಕೂಡಲ ಸಂಗಮ ಚಲೋ ಸಮಿತಿ’ಯಿಂದ ಬುಧವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ‘ಕೆಲವರು ವೀರಶೈವ ಲಿಂಗಾಯತ ಧರ್ಮದ ಭವ್ಯ ಪರಂಪರೆಯನ್ನು ಮರೆತು ತಮ್ಮ ಸ್ಥಾನಮಾನ ಲೆಕ್ಕಿಸದೆ ಬಾಯಿಗೆ ಬಂದಂತೆ ಮಾತನಾಡುವುದು, ಟೀಕಿಸುವುದು ಒಳ್ಳೆಯ ಸಂಪ್ರದಾಯವಲ್ಲ’ ಎಂದು ಅವರು ತಿಳಿಸಿದರು.

ಹುಬ್ಬಳಿಯಲ್ಲಿ ಜರುಗಿದ ಲಿಂಗಾಯತ ಸಮಾವೇಶದಲ್ಲಿ ಕೂಡಲ ಸಂಗಮದ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಅವರು ನೀಡಿರುವ ಹೇಳಿಕೆ ವಿರೋಧಿಸಿ ನ.19ರಂದು ಕೂಡಲಸಂಗಮ ಚಲೋ ಹಮ್ಮಿಕೊಂಡಿರುವ ಕಾರ್ಯಕ್ರಮಕ್ಕೆ ತಮ್ಮ ಸಹಕಾರ ಸದಾ ಇದೆ ಎಂದು ಹೇಳಿದರು.

ADVERTISEMENT

ಜಯಮೃತ್ಯುಂಜಯ ಸ್ವಾಮೀಜಿ ಅವರ ಹೇಳಿಕೆ ವಿರೋಧಿಸಿ ಜಿಲ್ಲೆಯಿಂದ ಸಾವಿರಾರು ಜನರು ನ.19ಕ್ಕೆ ಕೂಡಲ ಸಂಗಮಕ್ಕೆ ತೆರಳಿ, ಸ್ವಾಮೀಜಿ ಅವರು ಕೂಡಲೇ ಪೀಠದಿಂದ ಕೆಳಗಿಳಿಯುವಂತೆ ಒತ್ತಾಯಿಸಿ ನ.20ರಂದು ಮೌನ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಯಿತು.

ವೀರಶೈವ ಲಿಂಗಾಯತ ಸಮಾಜದ ಮುಖಂಡರಾದ ಧರ್ಮಪ್ರಕಾಶ ಪಾಟೀಲ, ಶರಣಬಸಪ್ಪ ಭೂಸನೂರ, ನಿಜಲಿಂಗಪ್ಪ ಕೋರಳ್ಳಿ, ಸಿದ್ದರಾಮ ಪಾಟೀಲ ಡೊಣ್ಣೂರ, ಭೀಮಾಶಂಕರ ಹಳಿಮನಿ, ಅಂಬಿಕಾ ದುರ್ಗಿ, ಮಹೇಶ್ವರ ಶಾಸ್ತ್ರಿ ಮುಂತಾದವರು ಕಾರ್ಯಕ್ರಮದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.