ADVERTISEMENT

ಬಾಲಕಾರ್ಮಿಕರಿಗೆ ಪುನರ್ವಸತಿ ಕಲ್ಪಿಸಿ

​ಪ್ರಜಾವಾಣಿ ವಾರ್ತೆ
Published 14 ಜುಲೈ 2017, 6:39 IST
Last Updated 14 ಜುಲೈ 2017, 6:39 IST

ಕಲಬುರ್ಗಿ: ಜಿಲ್ಲೆಯಲ್ಲಿ 2016- 17ನೇ ಸಾಲಿನಲ್ಲಿ ಕೈಗೊಂಡ ಬಾಲಕಾರ್ಮಿಕ ಸಮೀಕ್ಷೆಯಲ್ಲಿ ಒಟ್ಟು 9,615 ಸಂಸ್ಥೆಗಳ ತಪಾಸಣೆ ನಡೆಸಲಾಗಿದೆ. 48 ಬಾಲಕಾರ್ಮಿಕರನ್ನು ಪತ್ತೆ ಹಚ್ಚಿ, 30 ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಉಜ್ವಲಕುಮಾರ್‌ ಘೋಷ್ ಹೇಳಿದರು. ಅವರು ಗುರುವಾರ ಇಲ್ಲಿ ರಾಷ್ಟ್ರೀಯ ಬಾಲಕಾರ್ಮಿಕ ನಿರ್ಮೂಲನಾ ಹಾಗೂ ಪುನರ್ವಸತಿ ಸಂಘದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಬಾಲಕಾರ್ಮಿಕ ಸಮೀಕ್ಷೆಯಲ್ಲಿರುವ ಲೋಪದೋಷ ಸರಿಪಡಿಸಿಕೊಂಡು ಬಾಲಕಾರ್ಮಿಕ ನಿರ್ಮೂಲನೆ ಯೋಜನೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು.ಆಳಂದ ತಾಲ್ಲೂಕಿನಲ್ಲಿ ಬಾಲಕಾರ್ಮಿಕರ ಸಮೀಕ್ಷೆಯನ್ನು ಮತ್ತೊಮ್ಮೆ ಕೈಗೊಳ್ಳಬೇಕು. ಪ್ರತಿ ತಿಂಗಳಲ್ಲಿ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ನಿರಂತರ ದಾಳಿ ಹಾಗೂ ತಪಾಸಣಾ ಕಾರ್ಯವನ್ನು ಹೆಚ್ಚು ಚುರುಕಾಗಿ ನಡೆಸಬೇಕು’ ಎಂದು ಸೂಚಿಸಿದರು.

‘ಬಾಲಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿ ಮಾಡುವ ನಿಟ್ಟಿನಲ್ಲಿ  ಎಲ್ಲ 264 ಗ್ರಾಮ ಪಂಚಾಯಿತಿ, ನಗರ ಪ್ರದೇಶಗಳ 148 ವಾರ್ಡ್‌ ಹಾಗೂ ಕಲಬುರ್ಗಿ ನಗರದ 55 ವಾರ್ಡ್‌ಗಳ ವ್ಯಾಪ್ತಿಯಲ್ಲಿ ವಿವಿಧ ಸಂಘ– ಸಂಸ್ಥೆಗಳ ಸಹಯೋಗದೊಂದಿಗೆ ಜನರಲ್ಲಿ ಜಾಗೃತಿ ಮೂಡಿಸಲು ಜಾಥಾ, ಬೀದಿ ನಾಟಕ ಮುಂತಾದ ಅರ್ಥಪೂರ್ಣ ಚಟುವಟಿಕೆಗಳನ್ನು ಆಯೋಜಿಸಬೇಕು. ಸರ್ಕಾರಿ ಜಮೀನಿನಲ್ಲಿ ಬಾಲ ಕಾರ್ಮಿಕ ಹಾಗೂ ಕಿಶೋರ ಕಾರ್ಮಿಕರಿಗಾಗಿ ಮಾದರಿ ವಿಶೇಷ ತರಬೇತಿ ಕೇಂದ್ರ ಕಟ್ಟಡದ ಪ್ರಸ್ತಾವ ತಯಾರಿಸಬೇಕು’ ಎಂದು ನಿರ್ದೇಶನ ನೀಡಿದರು.

ADVERTISEMENT

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ಮಾತನಾಡಿ, ‘ಗ್ರಾಮೀಣ ಪ್ರದೇಶದಲ್ಲಿ ಆಯಾ ಗ್ರಾಮ ಪಂಚಾಯಿತಿಗಳು ಬಾಲಕಾರ್ಮಿಕರ ಮಾಹಿತಿ ಒದಗಿಸುವುದನ್ನು ಕಡ್ಡಾಯ ಗೊಳಿಸಲಾಗುವುದು. ಇದಲ್ಲದೆ ಶಾಲೆಗೆ ಸೇರ್ಪಡೆಯಾದ ಬಾಲಕಾರ್ಮಿಕರನ್ನು ಹಾಗೂ ಶಾಲಾ ಮುಖ್ಯೋಪಾಧ್ಯಾಯರನ್ನು ಊಟಕ್ಕೆ ಆಹ್ವಾನಿಸಲಾಗುವುದು’ ಎಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ  ಹಣಮಂತರಾಯ ಮಲಾಜಿ, ಸಹಾಯಕ ಕಾರ್ಮಿಕ ಆಯುಕ್ತ ವೆಂಕಟೇಶ ಶಿಂದಿಹಟ್ಟಿ, ಉಪ ಕಾರ್ಮಿಕ ಆಯುಕ್ತ ಎಂ. ಚಿದಾನಂದ, ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀಹರಿ ದೇಶಪಾಂಡೆ, ಎಸ್.ಸಿ.ಎಲ್.ಪಿ. ಯೋಜನಾ ನಿರ್ದೇಶಕ ಸಂತೋಷ ಕುಲಕರ್ಣಿ, ಎಚ್‌ಆರ್‌ಡಿ ಸಂಸ್ಥೆಯ ಸದಸ್ಯ ಸುರೇಶ ಬಡಿಗೇರ ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.