ADVERTISEMENT

ಬೆಂಬಲ ಬೆಲೆಗೆ ಆಗ್ರಹ: ರೈತರಿಂದ ಪ್ರತಿಭಟನೆ

ಜಗತ್ ವೃತ್ತದಲ್ಲಿ ಅರ್ಧ ಗಂಟೆ ಸಂಚಾರ ವ್ಯತ್ಯಯ

​ಪ್ರಜಾವಾಣಿ ವಾರ್ತೆ
Published 2 ಜುಲೈ 2018, 12:52 IST
Last Updated 2 ಜುಲೈ 2018, 12:52 IST

ಕಲಬುರ್ಗಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ ವಿರೋಧಿ ನೀತಿ ಅನುಸರಿಸುತ್ತವೆ ಎಂದು ಆರೋಪಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತಪರ ಸಂಘಟನೆಗಳವರು ನಗರದ ಜಗತ್ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ನೆಹರೂ ಗಂಜ್ ಪ್ರದೇಶದ ಹನು­ಮಾನ ಮಂದಿರದಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು ಮಧ್ಯಾಹ್ನ 1 ಗಂಟೆಗೆ ಜಗತ್ ವೃತ್ತ ತಲುಪಿದರು. ಬಳಿಕ ಮಾನವ ಸರಪಳಿ ನಿರ್ಮಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಅರ್ಧ ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿದ್ದರಿಂದ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು.
ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾ­ಧಿಕಾರಿ ಅಮಿತ್ ಸಿಂಗ್, ಹೆಚ್ಚುವರಿ ಪೊಲೀಸ್ ವರಿಷ್ಠಾ­ಧಿಕಾರಿ ಬಿ.ಮಹಾಂ­ತೇಶ, ಡಿಎಸ್ಪಿಗಳಾದ ಎಂ.ಬಿ. ನಂದ­ಗಾಂವ, ಬೇವಿನಮರದ, ಸಿಪಿಐ ಕೆ.ಎಂ.ಸತೀಶ ಅವರು ರಸ್ತೆ ತಡೆ ತೆರವು­ಗಳಿಸುವಂತೆ ಪ್ರತಿಭಟನಾ­ಕಾರರಲ್ಲಿ ಮನವಿ ಮಾಡಿದರು.

ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನಿಡಿದ ಜಿಲ್ಲಾಧಿಕಾರಿ ವಿಪುಲ್ ಬನ್ಸಲ್, ರೈತ ಮುಖಂಡರ ಜತೆ ಮಾತುಕತೆ ನಡೆಸಿ, ಸಮಸ್ಯೆ ಪರಿಹಾರದ ಬಗ್ಗೆ ರಾಜ್ಯ ಸರ್ಕಾರ­ದೊಂದಿಗೆ ಚರ್ಚಿಸಲಾಗು­ವುದು ಎಂದು ಭರವಸೆ ನೀಡಿದರು. ಬಳಿಕ ಪ್ರತಿಭಟನೆ ಹಿಂಪಡೆ­ಯಲಾಯಿತು.

ಕರ್ನಾಟಕ ಪ್ರಾಂತ ರೈತ ಸಂಘ, ಕರ್ನಾಟಕ ರಾಜ್ಯ ರೈತ ಸಂಘ, ಹೈದರಾಬಾದ್ ಕರ್ನಾಟಕ ರೈತ ಸಂಘ, ಜಿಲ್ಲಾ ಕೃಷಿಕ ಸಮಾಜ, ಭಾರತೀಯ ಕಿಸಾನ ಸಂಘ, ಕರ್ನಾಟಕ ರಾಜ್ಯ ತೊಗರಿ ಬೆಳೆಗಾರರ ಸಂಘ, ಅಖಿಲ ಭಾರತ ಕಿಸಾನ ಸಭಾ, ಜೆಡಿಎಸ್ ರೈತ ಘಟಕ ಹಾಗೂ ಜಿಲ್ಲಾ ರೈತ ಹೋರಾಟ ಸಮಿತಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದವು.

‘ರೈತರಿಗೆ ತೀವ್ರ ಅನ್ಯಾಯ’
ಟನ್ ಕಬ್ಬಿಗೆ ₨ 3 ಸಾವಿರ ಕೊಡಬೇಕಾದ ಕಾರ್ಖಾನೆ ಆಡಳಿತ ಮಂಡಳಿ ಕೇವಲ ₨ 1,800 ರಿಂದ ₨2,000 ಕೊಟ್ಟು ರೈತರಿಗೆ ತೀವ್ರ ಅನ್ಯಾಯ ಮಾಡುತ್ತಿದೆ. ಮಾರುಕಟ್ಟೆಯಲ್ಲಿ ಕೆ.ಜಿ. ಸಕ್ಕರೆ ದರ ₨ 35 ತಲುಪಿದೆ. ಟನ್ ಕಬ್ಬಿಗೆ ₨ 2 ಸಾವಿರ ಪಡೆಯುವ ರೈತ ₨ 35ಗೆ ಕೆ.ಜಿ. ಸಕ್ಕರೆ ಖರೀದಿಸುವಂತಾಗಿದೆ. ಆದ್ದರಿಂದ, ಕೂಡಲೇ ಕಬ್ಬಿಗೆ ₨ 3 ಸಾವಿರ ದರ ನಿಗದಿಪಡಿಸಬೇಕು.
–ಎಸ್.ಕೆ.ಕಾಂತಾ, ಮಾಜಿ ಸಚಿವ 

‘ಆಲಿಕಲ್ಲು ಮಳೆಯಿಂದ ನಷ್ಟ’
ಫೆಬ್ರುವರಿ ತಿಂಗಳಲ್ಲಿ ಜಿಲ್ಲೆಯಾದ್ಯಂತ ಸುರಿದ ಆಲಿಕಲ್ಲು ಮಳೆಯಿಂದ ರೈತರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಅದರಲ್ಲೂ, ಆಳಂದ ತಾಲ್ಲೂಕಿನ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ರಾಜ್ಯ ಸರ್ಕಾರ ಪರಿಹಾರ ವಿತರಿಸಿದೆ­ಯಾದರೂ ತಾರತಮ್ಯ ಎಸಗಿದೆ. ಆದ್ದರಿಂದ ಕೂಡಲೇ ಎಲ್ಲ ರೈತರಿಗೂ ಪರಿಹಾರ ನೀಡಬೇಕು. –ಬಿ.ಆರ್.ಪಾಟೀಲ, ಶಾಸಕ

‘ತೊಗರಿಗೆ ₨ 6 ಸಾವಿರ ಬೆಲೆ ನೀಡಿ’
ಸ್ವಾಮಿನಾಥನ್‌ ವರದಿ ಅನುಷ್ಠಾನಗೊಳಿಸಬೇಕು. ತೊಗರಿ, ಕಡಲೆ, ಹೆಸರು ಹಾಗೂ ಉದ್ದಿಗೆ ಕ್ಟಿಂಟಲ್‌ಗೆ ಕ್ರಮವಾಗಿ ₨ 6 ಸಾವಿರ, ₨ 4 ಸಾವಿರ, ₨ 5 ಸಾವಿರ ದರ ನಿಗದಿ ಮಾಡಬೇಕು. ಕ್ವಿಂಟಲ್ ಬಿಳಿ ಜೋಳಕ್ಕೆ ₨ 3,500 ದರ ನಿಗದಿಪಡಿಸಬೇಕು. ಬೆಂಬಲ ಬೆಲೆಯಲ್ಲಿ ಸರ್ಕಾರವೇ ಖರೀದಿ ಕೇಂದ್ರ ಆರಂಭಿಸಬೇಕು. –ಮಾರುತಿ ಮಾನ್ಪಡೆ, ಕರ್ನಾಟಕ ಪ್ರಾಂತ ರೈತ ಸಂಘ

ರೈತರ ಬೇಡಿಕೆಗಳೇನು?
* ರಾಜ್ಯದಲ್ಲಿ ಕೃಷಿ ಉತ್ಪಾದನೆಗಳ ಖರೀದಿಗಾಗಿ ₨ 10 ಸಾವಿರ ಕೋಟಿ ಆವರ್ತ ನಿಧಿಯೊಂದಿಗೆ ಮಂಡಳಿ ರಚಿಸಬೇಕು.
* ತೊಗರಿ ಅಭಿವೃದ್ಧಿ ಮಂಡಳಿಯನ್ನು ಬೇಳೆ ಕಾಳು ಅಭಿವೃದ್ಧಿ ಮಂಡಳಿ ಎಂದು ಪುನರ್‌ರಚನೆ ಮಾಡಿ, ಕೆಎಂಎಫ್ ಅಥವಾ ಸಹಕಾರ ಸಂಘಗಳ ಮಾದರಿಯಲ್ಲಿ ರೈತರ ಸಹಭಾಗಿತ್ವದೊಂದಿಗೆ ಕಾರ್ಯ ನಿರ್ವಹಿಸುವಂತೆ ಮಾಡಬೇಕು.
* ಬೇಳೆ ಕಾಳು ಆಮದಿನ ಮೇಲೆ ಕನಿಷ್ಠ ₨ 30ರಷ್ಟು ಆಮದು ಸುಂಕ ವಿಧಿಸಬೇಕು.
* ರೈತರ ಸಮಕ್ಷಮ ಬೆಳೆ ಕಟಾವು ಪರೀಕ್ಷೆ ನಡೆಸುವ ಮೂಲಕ ಬೆಳೆ ವಿಮೆ ಪರಿಹಾರವನ್ನು ಪಾರದರ್ಶಕ ವಾಗಿ ವಿತರಿಸಬೇಕು.
* ಬರ, ಅಕಾಲಿಕ ಮಳೆ ಹಾಗೂ ಹವಾಮಾನ ವೈಪರೀತ್ಯದಿಂದ ಕೃಷಿ ಉತ್ಪಾದನೆ ಕಡಿಮೆಯಾಗಿದೆ. ಆದ್ದ ರಿಂದ, ಬೆಳೆ ವಿಮೆಯೊಂದಿಗೆ ಎಕರೆಗೆ ₨ 15 ಸಾವಿರ ಪರಿಹಾರ ಕೊಡಬೇಕು.
* ಪೌಷ್ಟಿಕಾಂಶ ನಿವಾರಿಸಲು ಪಡಿತರ ಕಾರ್ಡುದಾರರಿಗೆ ಪ್ರತಿ ತಿಂಗಳು 2 ಕೆ.ಜಿ. ತೊಗರಿ ಬೇಳೆ, ಒಂದು ಕೆ.ಜಿ. ಕಡಲೆ ಬೇಳೆ ವಿತರಿಸುವ ವ್ಯವಸ್ಥೆ ಜಾರಿಗೆ ತರಬೇಕು.
* ಅತಿವೃಷ್ಟಿಯಿಂದ ಉಂಟಾದ ಪ್ರವಾಹದಲ್ಲಿ ರೈತರ ಹೊಲದಲ್ಲಿನ ಮೇಲ್ಭಾಗದ ಮಣ್ಣು ಕೊಚ್ಚಿ ಹೋಗಿದ್ದು, ಅದನ್ನು ಸರಿಪಡಿಸಲು ಎಕರೆಗೆ ₨ 50 ಸಾವಿರ ಪರಿಹಾರ ವಿತರಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT