ADVERTISEMENT

ಬೆಣ್ಣೆತೊರಾ ಆಧುನೀಕರಣ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 23 ಮೇ 2017, 6:55 IST
Last Updated 23 ಮೇ 2017, 6:55 IST
ಕಲಬುರ್ಗಿಯಲ್ಲಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರು ಬೆಣ್ಣೆತೊರಾ ಯೋಜನೆ ಆಧುನೀಕರಣ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿದರು. ಮುಖ್ಯ ಎಂಜಿನಿಯರ್‌ ಜಗನ್ನಾಥ ಹಾಲಿಂಗೆ ಇದ್ದರು
ಕಲಬುರ್ಗಿಯಲ್ಲಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರು ಬೆಣ್ಣೆತೊರಾ ಯೋಜನೆ ಆಧುನೀಕರಣ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿದರು. ಮುಖ್ಯ ಎಂಜಿನಿಯರ್‌ ಜಗನ್ನಾಥ ಹಾಲಿಂಗೆ ಇದ್ದರು   

ಕಲಬುರ್ಗಿ: ಬೆಣ್ಣೆತೊರಾ ಯೋಜನೆಯ ಆಧುನೀಕರಣ ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊ­ಳಿಸಬೇಕು ಹಾಗೂ ಕಾಮಗಾರಿಯ ಗುಣಮಟ್ಟ ಕಾಪಾಡಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸೋಮವಾರ ಅವರು ನಗರದಲ್ಲಿ­ರುವ ಕರ್ನಾಟಕ ನೀರಾವರಿ ನಿಗಮದ ನೀರಾವರಿ ಯೋಜನೆಗಳ ವಲಯ ಕಚೇರಿಯಲ್ಲಿ, ಬೆಣ್ಣೆತೊರಾ ಯೋಜನೆ ಅಡಿಯಲ್ಲಿ ಅನುಷ್ಠಾನದಲ್ಲಿರುವ ನೀರು ಬಳಕೆದಾರರ ಸಂಘಗಳ ಅಧ್ಯಕ್ಷರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾ­ಡಿದರು.

ಈ ನೀರಾವರಿ ಯೋಜನೆಯ ಬಲದಂಡೆ ಮತ್ತು ಎಡದಂಡೆ ಕಾಲುವೆಗಳ ವ್ಯಾಪ್ತಿಯ ಹೊಲಗಾಲುವೆ­ಗಳನ್ನು ಹಂತಹಂತವಾಗಿ ನಿರ್ಮಿಸು­ವಂತೆ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ  ಮಂಡಳಿ (ಕಾಡಾ) ಆಡಳಿತಾಧಿಕಾರಿಗೆ ಸೂಚಿಸಿದರು.

ADVERTISEMENT

ನೀರು ಬಳಕೆದಾರರ ಸಂಘಗಳ ಅಧ್ಯಕ್ಷರು ಆಧುನೀಕರಣ ಕಾಮಗಾರಿಗೆ ಸಹಕಾರ ನೀಡಬೇಕು. ಅಚ್ಚುಕಟ್ಟು ಪ್ರದೇ­­ಶದ ಎಲ್ಲ ರೈತರು ನೀರನ್ನು ಸದು­ಪಯೋಗ ಪಡಿಸಿಕೊಳ್ಳಬೇಕು ಎಂದರು.

ಕಾಡಾ ಅಧ್ಯಕ್ಷ ಮಹಾಂತಪ್ಪ ಸಂಗಾವಿ ಅವರು, ಹೊಲಗಾಲುವೆಗಳ ಪುನರ್ ನಿರ್ಮಾಣ ಮಾಡಲು ಸಚಿವರಿಗೆ ಮನವಿ ಮಾಡಿದರು. ಮುಖ್ಯ ಎಂಜಿನಿ­ಯರ್ ಜಗನ್ನಾಥ ಹಲಿಂಗೆ ಬೆಣ್ಣೆತೊರಾ ಯೋಜನೆಯ ಬಲಹಾಗೂ ಎಡದಂಡೆ ಕಾಲುವೆಗಳ ಪ್ರಗತಿ ವಿವರಿಸಿದರು.

ಈ ಯೋಜನೆಯಿಂದ 2017-18ನೇ ಸಾಲಿನ ಮುಂಗಾರು ಹಂಗಾಮಿಗೆ ಬಲದಂಡೆ ಕಾಲುವೆಯಿಂದ 45 ಕಿ.ಮೀ. ವರೆಗೆ ಒಳಪಡುವ 9,181.69 ಹೆಕ್ಟೇರ್ ಮತ್ತು ಎಡದಂಡೆ ಕಾಲುವೆಯಿಂದ 32 ಕಿ.ಮೀ.ವರೆಗೆ ಒಳಪಡುವ 2,127 ಹೆಕ್ಟೇರ್ ಕ್ಷೇತ್ರಕ್ಕೆ ನೀರು ಬಿಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.

ಈ ಅಚ್ಚುಕಟ್ಟು ಪ್ರದೇಶದಲ್ಲಿ ಮುಂಗಾರು ಹಂಗಾಮಿನಲ್ಲಿ ರೈತರು ತೊಗರಿ: 2,428 ಹೆಕ್ಟೇರ್, ದ್ವಿದಳ ಧಾನ್ಯ: 6,880 ಹೆಕ್ಟೇರ್, ಶೇಂಗಾ: 1,619 ಹೆಕ್ಟೇರ್, ಮೆಕ್ಕೆಜೋಳ :405 ಹೆಕ್ಟೇರ್ ಮತ್ತು ಜೋಳ: 809 ಹೆಕ್ಟೇರ್ ಬೆಳೆಯಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು. 

ಕಾಡಾ ನಿರ್ದೇಶಕ ದಶರಥ ಬಾಬು ಒಂಟಿ,  ಮಕ್ಬೂಲ್ ಪಟೇಲ್,  ಮಾರುತಿ ರಾವ, ಮಸ್ತಾನ ಸಾಬ, ಬೆಣ್ಣೆತೊರಾ ಯೋಜನೆ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಳಿ ಅಧ್ಯಕ್ಷರು ಮತ್ತು ಎಲ್ಲ ನೀರು ಬಳಕೆ­ದಾರರ ಸಹಕಾರ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಉಪಸ್ಥಿತರಿದ್ದರು.\

* * 

ಕಾಡಾ ಅಧಿಕಾರಿಗಳು ಮೊದಲ ಹಂತವಾಗಿ 5,000 ಹೆಕ್ಟೇರ್ ಪ್ರದೇಶಕ್ಕೆ ಹೊಲಗಾಲುವೆಗಳ ಪುನರ್ ನಿರ್ಮಾಣ ಹಾಗೂ ಭೂಮಿ ಸಮತಟ್ಟು ಕಾಮಗಾರಿ ಪ್ರಸ್ತಾವ ಸಿದ್ಧಪಡಿಸಬೇಕು.
ಡಾ.ಶರಣಪ್ರಕಾಶ ಪಾಟೀಲ,
ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.