ADVERTISEMENT

ಬೆಳಕಿಗಾಗಿ ಕಾಯುತ್ತಿರುವ ‘ಸವಿತಾ’ ಭವನ

ಚಾಮರಾಜನಗರ ನಗರಸಭೆಯಿಂದ ಎನ್‌ಓಸಿ ವಿಳಂಬ, ವಿದ್ಯುತ್‌ ಸಂಪರ್ಕಕ್ಕೆ ಅಡ್ಡಿ; ಸಾರ್ವಜನಿಕರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2018, 6:32 IST
Last Updated 12 ಏಪ್ರಿಲ್ 2018, 6:32 IST

ಚಾಮರಾಜನಗರ: 4 ತಿಂಗಳ ಹಿಂದೆಯೇ ಉದ್ಘಾಟನೆಗೊಂಡ ಈ ಕಟ್ಟಡಕ್ಕೆ ಇಂದಿಗೂ ವಿದ್ಯುತ್ ಸೌಲಭ್ಯವಿಲ್ಲ. ಕತ್ತಲೆ ತುಂಬಿದ ಕಟ್ಟಡದ ಒಳಗೆ ಯಾವುದೇ ಸಭೆ, ಸಮಾರಂಭ ನಡೆಸಲು ಸಾಧ್ಯವಾಗುತ್ತಿಲ್ಲ. ನೋಡಲು ಚೆನ್ನಾಗಿದ್ದರೂ ಬಳಕೆಗೆ ಬಾರದಂತೆ ಆಗಿದೆ ಸವಿತಾ ಸಮಾಜದ ಸಮುದಾಯ ಭವನ.

ನಗರದ ಜಾಮೀಯ ಮಸೀದಿ ರಸ್ತೆಯಲ್ಲಿ ಸವಿತಾ ಸಮಾಜಕ್ಕೆ ಸೇರಿದ ಚಿಕ್ಕಮ್ಮತಾಯಿ ದೇವಸ್ಥಾನವನ್ನು ತೆರವುಗೊಳಿಸಿದ ಬಳಿಕ, ನಾಲ್ಕೈದು ವರ್ಷಗಳ ಹಿಂದೆಯೇ ಸರ್ಕಾರದಿಂದ ಸಮುದಾಯ ಭವನ ನಿರ್ಮಾಣ ಕಾಮಗಾರಿ ಪ್ರಾರಂಭಿಸಲಾಯಿತು. ಸಂಸದರ ನಿಧಿಯಿಂದ ₹ 5 ಲಕ್ಷ, ಶಾಸಕರ ನಿಧಿಯಿಂದ ₹ 6 ಲಕ್ಷ ಹಾಗೂ ನಗರಸಭೆ ಸದಸ್ಯರ ನಿಧಿಯಿಂದ ₹ 2 ಲಕ್ಷ ಅನುದಾನದಡಿ ನಿರ್ಮಿತಿ ಕೇಂದ್ರದಿಂದ ಭವನ ಕಟ್ಟಡ ಕಾಮಗಾರಿ ಪೂರ್ಣಗೊಂಡಿದೆ.

2017ರ ನವೆಂಬರ್‌ 10ರಂದು ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಎಂ.ಸಿ.ಮೋಹನಕುಮಾರಿ ಅವರ ನೇತೃತ್ವದಲ್ಲಿ ಸಂಸದರು, ಶಾಸಕರು ಸೇರಿದಂತೆ ಜನಪ್ರತಿನಿಧಿಗಳು ಬಂದು ಭವನ ಉದ್ಘಾಟನೆ ಮಾಡಿದ್ದಾರೆ. ಆದರೆ, ಭವನ ಯಾವುದಕ್ಕೂ ಉಪಯೋಗಕ್ಕೆ ಬರುತ್ತಿಲ್ಲ.

ADVERTISEMENT

‘ಸಮುದಾಯ ಭವನ ಕಟ್ಟಡ ನಿರ್ಮಾಣವಾಗಿ ಸುಮಾರು ಆರೇಳು ತಿಂಗಳು ಕಳೆದಿವೆ. ಉದ್ಘಾಟನೆಯಾಗಿ 4 ತಿಂಗಳಾಗಿವೆ. ಆದರೆ, ಭವನಕ್ಕೆ ವಿದ್ಯುತ್‌ ಸಂಪರ್ಕ ಮಾತ್ರ ಕಲ್ಪಿಸಿಲ್ಲ. ಇದರಿಂದ ಸಮುದಾಯ ಭವನ ಇದ್ದರೂ ಬಳಕೆಯಾಗುತ್ತಿಲ್ಲ’ ಎನ್ನುವುದು ಸಮುದಾಯದ ಜನರ ದೂರು.

‘ಸಮುದಾಯ ಭವನಗಳು ಸದಾ ಚಟುವಟಿಕೆಯ ಕೇಂದ್ರವಾಗಿರಬೇಕು. ಸಮುದಾಯದ ಸಮಸ್ಯೆಗಳು ಹಾಗೂ ಅಭಿವೃದ್ಧಿಯ ಕುರಿತು ಚರ್ಚೆಯಾಗಬೇಕು. ಆರೋಗ್ಯಕರ ವಾತಾವರಣ ನಿರ್ಮಾಣವಾಗಬೇಕು ಎಂದೆಲ್ಲ ಸರ್ಕಾರದ ಆಶಯದಿಂದ ಭವನ ನಿರ್ಮಿಸಲಾಗುತ್ತದೆ. ಆದರೆ, ಭವನಕ್ಕೆ ಮೂಲ ಸೌಲಭ್ಯವನ್ನು ಕಲ್ಪಿಸದಿ ದ್ದರೇ ಅವುಗಳು ಹೇಗೆ ಈಡೇರಲು ಸಾಧ್ಯ’ ಎನ್ನುವುದು ಅವರ ಪ್ರಶ್ನೆ.

ಎನ್‌ಓಸಿ ವಿಳಂಬ: ಸಮುದಾಯ ಭವನಕ್ಕೆ ವಿದ್ಯುತ್‌ ಸಂಪರ್ಕ ಕಲ್ಪಿಸುವ ಸಂಬಂಧ ನಗರಸಭೆಗೆ ನಿರಪೇಕ್ಷಣ ಪತ್ರ (ಎನ್‌ಓಸಿ) ಪಡೆಯಲು ಎರಡು ತಿಂಗಳ ಹಿಂದೆಯೇ ಅರ್ಜಿ ಸಲ್ಲಿಸಿ, ಅರ್ಜಿ ಶುಲ್ಕ ಪಾವತಿಸಲಾಗಿದೆ. ಆದರೆ, ನಗರಸಭೆ ಅಧಿಕಾರಿಗಳು ಎನ್‌ಓಸಿ ನೀಡುತ್ತಿಲ್ಲ. ಹಲವು ಬಾರಿ ನಗರಸಭೆಗೆ ಭೇಟಿ ನೀಡಿ ಸಮಸ್ಯೆಯನ್ನು ಅಧಿಕಾರಿಗಳ ಗಮನಕ್ಕೆ ತಂದು ಶೀಘ್ರವೇ ಎನ್‌ಓಸಿ ನೀಡಿ ಎಂದು ಮನವಿ ಮಾಡಿದ್ದೇನೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ’ ಎಂದು ಭವನ ನಿರ್ಮಾಣದ ಗುತ್ತಿಗೆದಾರ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ನಗರಸಭೆಯಿಂದ ಎನ್‌ಓಸಿ ಪಡೆದು ಅದನ್ನು ಸೆಸ್ಕ್‌ ಇಲಾಖೆಗೆ ಸಲ್ಲಿಸಬೇಕು. ಆಗ ಮಾತ್ರ ವಿದ್ಯುತ್‌ ಸಂಪರ್ಕ ಕಲ್ಪಿಸಲು ಸಾಧ್ಯ. ಇದಕ್ಕೆ ನಗರಸಭೆಯ ಅಧಿಕಾರಿಗಳು ಸಹಕರಿಸಬೇಕು ಎಂದು ತಿಳಿಸಿದರು.

ದೇವಸ್ಥಾನಕ್ಕೆ ಬಾರದ ಚಿಕ್ಕಮ್ಮತಾಯಿ

ಸಮುದಾಯ ಭವನ ನಿರ್ಮಾಣಕ್ಕಾಗಿ ಚಿಕ್ಕಮ್ಮತಾಯಿ ದೇವಸ್ಥಾನದ ಹಳೇ ಕಟ್ಟಡವನ್ನು ತೆರವುಗೊಳಿಸಿ ಚಿಕ್ಕಮ್ಮತಾಯಿ ದೇವರನ್ನು ಪಕ್ಕದ ಉರುಕಾತಮ್ಮ ದೇವಸ್ಥಾನದಲ್ಲಿ ಇಡಲಾಗಿದೆ. ಸದ್ಯ, ಭವನದ ಕಟ್ಟಡ ಕಾಮಗಾರಿ ಪೂರ್ಣವಾಗಿದೆ. ಭವನದೊಳಗೆ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಆದರೆ, ಭವನಕ್ಕೆ ಮೂಲ ಸೌಲಭ್ಯಗಳನ್ನು ಕಲ್ಪಿಸಿಲ್ಲ. ಇದು ದೇವರನ್ನು ಮತ್ತೇ ಮೂಲ ಸ್ಥಾನಕ್ಕೆ ತಂದು ಪ್ರತಿಷ್ಠಾಪಿಸಲು ಅಡ್ಡಿಯಾಗುತ್ತಿದ್ದು, ಚಿಕ್ಕಮ್ಮತಾಯಿ ಪ್ರತಿಷ್ಠಾಪನೆಯ ದಿನಾಂಕವನ್ನು ಮುಂದೂಡಲಾಗುತ್ತಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಶೀಘ್ರವೇ ಭವನಕ್ಕೆ ವಿದ್ಯುತ್‌ ಸಂಪರ್ಕ ಸೇರಿದಂತೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಿ ಜನರ ಬಳಕೆ ಅನುವು ಮಾಡಿಕೊಡಬೇಕು ಎಂದು ಸಮುದಾಯ ಮುಖಂಡರು ಒತ್ತಾಯಿಸಿದ್ದಾರೆ.

**

ಎನ್‌ಒಸಿ ಇಲ್ಲದೆ ವಿದ್ಯುತ್‌ ಸಂಪರ್ಕ ಕಲ್ಪಿಸಲು ಸಾಧ್ಯವಿಲ್ಲ. ನಗರಸಭೆ ಅಧಿಕಾರಿಗಳು ಚುನಾವಣಾ ಮುಗಿಯುವವರೆಗೂ ಎನ್‌ಒಸಿ ನೀಡಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ – ವೃಷಭೇಂದ್ರ, ಎಂಜಿನಿಯರ್, ನಿರ್ಮಿತಿಕೇಂದ್ರ.

**

ಎಸ್.ಪ್ರತಾಪ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.