ADVERTISEMENT

ಭಾವೈಕ್ಯದ ಮಲ್ಲಿಕಾರ್ಜುನ ದೇವರ ಜಾತ್ರೆ

ಮದುವೆ ಮಾದರಿಯಲ್ಲಿ ಉತ್ಸವ l ಪಲ್ಲಕ್ಕಿ ಮೆರವಣಿಗೆಯಲ್ಲಿ ಸುತ್ತಮುತ್ತಲ ಗ್ರಾಮಗಳ ಸಾವಿರಾರು ಮಂದಿ ಭಾಗಿ

​ಪ್ರಜಾವಾಣಿ ವಾರ್ತೆ
Published 16 ಜನವರಿ 2017, 7:08 IST
Last Updated 16 ಜನವರಿ 2017, 7:08 IST
ಭಾವೈಕ್ಯದ ಮಲ್ಲಿಕಾರ್ಜುನ ದೇವರ ಜಾತ್ರೆ
ಭಾವೈಕ್ಯದ ಮಲ್ಲಿಕಾರ್ಜುನ ದೇವರ ಜಾತ್ರೆ   

ಚಿಂಚೋಳಿ: ತಾಲ್ಲೂಕಿನ ಕುಪನೂರು ಗ್ರಾಮದ ಆರಾಧ್ಯ ದೇವ ಮಲ್ಲಿಕಾರ್ಜುನ ದೇವರ ಜಾತ್ರಾ ಮಹೋತ್ಸವ ಭಾನುವಾರ ಶ್ರದ್ಧಾ ಭಕ್ತಿಯಿಂದ ಜರುಗಿತು.
ಉದ್ಭವ ಲಿಂಗ ಹಾಗೂ ಪವಾಡಗಳಿಂದ ಖ್ಯಾತಿ ಪಡೆದ ಮಲ್ಲಿಕಾರ್ಜುನ ದೇವರ ಜಾತ್ರೆ ಎಂದರೆ ಒಕ್ಕಲು ಮಕ್ಕಳ ಉತ್ಸವ ಎಂಬ ಪ್ರಸಿದ್ಧಿ ಇದೆ.

ಮದುವೆ ಮಾದರಿಯಲ್ಲಿ ನಡೆಯುವ ಮಲ್ಲಿಕಾರ್ಜುನ ದೇವರ ಜಾತ್ರೆ ಮೂರು ದಿನಗಳ ಕಾಲ ನಡೆಯುತ್ತದೆ. ಜಾತ್ರೆಯ ಪ್ರಮುಖ ಆಕರ್ಷ ಣೆಯಾದ ನಂದಿಕೋಲು ಹಾಗೂ ಪಲ್ಲಕ್ಕಿ ಮೆರವಣಿಗೆಯಲ್ಲಿ ಸುತ್ತಮುತ್ತಲ ಹಳ್ಳಿಗಳ ಸಾವಿರಾರು ಮಂದಿ ಪಾಲ್ಗೊಂಡಿದ್ದರು.

ಕೃಷಿಕರು ಜಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವುದು ವಿಶೇಷ. ಅಂತೆಯೇ ಕೃಷಿಕರು ತಮ್ಮ ಹೊಲದಲ್ಲಿ ಬೆಳೆದ ಜೋಳದ ತೆನೆಯನ್ನೇ ಅಕ್ಷತೆ ಮಾದರಿಯಲ್ಲಿ ಪಲ್ಲಕ್ಕಿ ಮೇಲೆ ಎಸೆದು ಭಕ್ತರು ಕೃತಾರ್ಥರಾದರು.

ಹೊಸ ವರ್ಷ ಹಾಗೂ ಸಂಕ್ರಮಣದ ಮೊದಲನೇ ಜಾತ್ರೆ ಎನಿಸಿದ ಮಲ್ಲಿಕಾರ್ಜುನ ದೇವರ ಉತ್ಸವದ ಅಂಗವಾಗಿ ಸಮೀಪದ ಪಟ್ಟಣ ಸುಲೇಪೇಟದಲ್ಲಿ ವರ್ತಕರು ತಮ್ಮ ಅಂಗಡಿ ಮುಂಗಟ್ಟು ಮುಚ್ಚಿ ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಎತ್ತಿನ ಗಾಡಿ, ಜೀಪು, ಕಾರು, ಬೈಕ್‌ ಸೇರಿದಂತೆ ವಿವಿಧ ವಾಹನಗಳಲ್ಲಿ ಕುಪನೂರಿಗೆ ಬಂದ ಭಕ್ತರಿಗೆ ದೇವಾಲಯದ ಎದುರುಗಡೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಶನಿವಾರ ಜಾತ್ರೆ ಆರಂಭವಾಗಿದ್ದು ಅಂದು ದೇವರಿಗೆ ಎಣ್ಣೆ ಹಚ್ಚುವ ಕಾರ್ಯಕ್ರಮ ಪರಂಪರೆಯಂತೆ ನಡೆಸಿದರು.

ಭಾನುವಾರ ಗ್ರಾಮದ ದೇವರ ಗದ್ದುಗೆಯಿಂದ ದೇವರ(ಮದು ಮಗ) ನ್ನು ವಾದ್ಯಮೇಳ, ಡೊಳ್ಳು, ಭಜನೆ ಹಾಗೂ ಆರತಿ ಮತ್ತು ಜಾಗಟೆಯೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಭಾರಿ ಎತ್ತರದ ನಂದಿ ಕೋಲು ಪಲ್ಲಕ್ಕಿಯೊಂದಿಗೆ ಛತ್ರಿ ಮತ್ತು ಚಾಮರದ ಮೆರವಣಿಗೆಯೊಂದಿಗೆ ದೇವಾಲಯಕ್ಕೆ ಆಗಮಿಸಿತು.

ದೇವಾಲಯದ ಬಳಿ ಬರುತ್ತಿದ್ದಂತೆ ಎತ್ತರದ ಸ್ಥಿತಿಯಲ್ಲಿದ್ದ ನಂದಿಕೋಲು ಬಾಗಿಸಿ ಭಕ್ತರು ಭುಜದ ಮೇಲೆ ಹೊತ್ತುಕೊಂಡು ದೇವಾಲಯಕ್ಕೆ ಆಗಮಿಸುತ್ತಿದ್ದಂತೆ ತಮ್ಮ ಹೊಲದಲ್ಲಿ ಬೆಳೆದ ಜೋಳದ ತೆನೆಯನ್ನು ಅಕ್ಷತೆ ಮಾದರಿಯಲ್ಲಿ ಎಸೆದು ಹರಕೆ ತೀರಿಸಿದರು.

ಈ ಜಾತ್ರೆ ಮುಗಿಯುವವರೆಗೆ ರೈತರು ತಮ್ಮ ಹೊಲದಲ್ಲಿ ಜೋಳದ ಶಿತನಿ ಸುಡುವುದಿಲ್ಲ. ಮೊದಲು ದೇವ ರಿಗೆ ಅರ್ಪಿಸಿದ ನಂತರೇ ಶಿತನಿ ಕಾಳು ಬಾಯಿ ಹಾಕಿಕೊಳ್ಳುವ ವಾಡಿಕೆ ನಡೆ ದುಕೊಂಡು ಬಂದಿದೆ.

ಜಾತ್ರಾ ಮಹೋತ್ಸವದಲ್ಲಿ ಶಿವ ಶಂಕ್ರಯ್ಯ ಕುಪನೂರು, ರುದ್ರಶೆಟ್ಟಿ ಪಡಶೆಟ್ಟಿ, ಜಗನ್ನಾಥ ಇದಲಾಯಿ, ವೀಣಾ ವಿಜಯಕುಮಾರ ಮಾನಕಾರ, ಅಂಜ ನಾದೇವಿ ಜಗನ್ನಾಥ ಮಾಳಗೆ, ಮಲ್ಲಿಕಾರ್ಜುನ ಮಾಳಗೆ, ಸುರೇಶ ವೈದ್ಯರಾಜ, ಜಗದೇವಯ್ಯ ಸ್ವಾಮಿ ಕುಪನೂರು, ಖಾಜಾ ಪಟೇಲ್‌, ನರಸಪ್ಪ ಪೂಜಾರಿ ಸೇರಿದಂತೆ ಅಪಾರ ಭಕ್ತರು ಪಾಲ್ಗೊಂಡಿದ್ದರು.

ಜಾತ್ರೆಯ ಅಂಗವಾಗಿ ಚಂದ್ರಗುಪ್ತ ದೊಡ್ಡಾಟ ಹಾಗೂ ಕೆರಳಿದ ಅವಳಿ ಸರ್ಪಗಳು ಅರ್ಥಾರ್ತ ಸೋದರರ ಸವಾಲ್‌ ಸಾಮಾಜಿಕ ನಾಟಕ ಅಭಿನಯ ಏರ್ಪಡಿಸಲಾಗಿದೆ. ಸೋಮವಾರ ದೇವರನ್ನು ಮರಳಿ ಕರೆದೊಯ್ಯುವ ಉತ್ಸವ ಸಂಪ್ರದಾಯದಂತೆ ನಡೆಯಲಿದೆ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.