ADVERTISEMENT

ಮಹಿಳೆಯರಿಂದಲೇ ನಾಗರಪಂಚಮಿ ಆಚರಣೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2017, 6:24 IST
Last Updated 28 ಜುಲೈ 2017, 6:24 IST
ಸೇಡಂ ಪಟ್ಟಣದ ಶಿವಶಂಕರ ಮಠದ ಹಿಂಭಾಗದಲ್ಲಿರುವ ನಾಗರ ಮೂರ್ತಿಗೆ ಮಹಿಳೆಯರು ಗುರುವಾರ ಹಾಲೆರೆದರು
ಸೇಡಂ ಪಟ್ಟಣದ ಶಿವಶಂಕರ ಮಠದ ಹಿಂಭಾಗದಲ್ಲಿರುವ ನಾಗರ ಮೂರ್ತಿಗೆ ಮಹಿಳೆಯರು ಗುರುವಾರ ಹಾಲೆರೆದರು   

ಸೇಡಂ: ‘ಆರೋಗ್ಯಕ್ಕೆ ಉತ್ತಮ ಪೌಷ್ಠಿಕಾಂಶ ನೀಡುವ ಹಾಲನ್ನು ಹುತ್ತಕ್ಕೆ ಎರೆದು ವ್ಯರ್ಥ ಮಾಡುವ ಬದಲು ಮಕ್ಕಳಿಗೆ ನೀಡಿದರೆ ಅನುಕೂಲವಾಗುತ್ತದೆ’ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಶೆಟ್ಟಿ ಬಣ) ತಾಲ್ಲೂಕು ಘಟಕದ ಅಧ್ಯಕ್ಷ ರಾಮಚಂದ್ರ ಗುತ್ತೇದಾರ ಹೇಳಿದರು.

ತಾಲ್ಲೂಕಿನ ಮದರಿನಾಗಸನಪಲ್ಲಿ ಗ್ರಾಮದಲ್ಲಿ ನಾಗರಪಂಚಮಿ ಹಬ್ಬದ ನಿಮಿತ್ತ ಗುರುವಾರ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಶೆಟ್ಟಿ ಬಣ) ಆಯೋಜಿಸಿದ್ದ ಮಕ್ಕಳಿಗೆ ಹಾಲು ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಮೂಢನಂಬಿಕೆಯಿಂದಾಗಿ ಹಲವು ವರ್ಷಗಳಿಂದ ನಾಗರ ಪಂಚಮಿಯ ಹೆಸರಿನಲ್ಲಿ ಹಾಲನ್ನು ಪೋಲು ಮಾಡಲಾಗುತ್ತಿದೆ. ಎರಡು ದಿನದಲ್ಲಿ ಸಾಕಷ್ಟು ಲೀಟರ್ ಹಾಲು ವ್ಯರ್ಥವಾಗುತ್ತದೆ. ಆದ್ದರಿಂದ ಸಾರ್ವಜನಿಕರು ಇಂತಹ ಮೂಢನಂಬಿಕೆಯನ್ನು ಬಿಡಬೇಕು’ ಎಂದರು.

ADVERTISEMENT

ಆಡಕಿ ಗ್ರಾ.ಪಂ ಅಧ್ಯಕ್ಷ ಭೀಮಶೆಪ್ಪ ಹೂಡ್ಯಂ, ವಿದ್ಯಾಸಾಗರ, ದೇವು ನಾಟೀಕಾರ, ಭೀಮಯ್ಯ ಗುತ್ತೇದಾರ, ರಾಜುಗೌಡ ಮದ್ರಿ, ಅಂಗನವಾಡಿ ಕಾರ್ಯಕರ್ತೆ ಲಕ್ಷ್ಮಿ, ನರಸಮ್ಮ ಇದ್ದರು.

ಚಿಂಚೋಳಿ ವರದಿ: ನಾಗ ಪಂಚಮಿ ಎಂದರೆ ಹೆಂಗಳೆಯರ ಹಬ್ಬ. ಸಂಪ್ರದಾಯದಂತೆ ಮಹಿಳೆಯರು ಕಲ್ಲು ನಾಗರಿಗೆ ಹಾಲು ಎರೆಯುವುದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ಆದರೆ, ಇದಕ್ಕೆ ಅಪವಾದ ಎಂಬಂತೆ ಇಲ್ಲಿನ ಚಂದಾಪುರದ ಮಹಿಳೆಯರು ಕಲ್ಲು ನಾಗರಿಗೆ ಹಾಲು ಎರೆದು ವ್ಯರ್ಥ ಮಾಡುವ ಬದಲಾಗಿ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಹಾಲು, ಹಣ್ಣು ವಿತರಿಸಿ ಅರ್ಥಪೂರ್ಣ ಕಾರ್ಯಕ್ರಮ ನಡೆಸಿದರು.

‘ಬಸವೇಶ್ವರರ ಸಂದೇಶದಲ್ಲಿ ಅದ್ಭುತವಾದ ಮಾನವ ಪರಿಕಲ್ಪನೆಯಿದೆ. ಅವರ ಬೋಧನೆ ಜೀವನದಲ್ಲಿ ಅಳವಡಿಸಿಕೊಂಡರೆ ಪೊಲೀಸರ ಕೆಲಸ ಬಹಳಷ್ಟು ಕಡಿಮೆಯಾಗಲಿದೆ’ ಎಂದು ಕಾರ್ಯಕ್ರಮ ಉದ್ಘಾಟಿಸಿದ ಡಿವೈಎಸ್ಪಿ ಯು.ಶರಣಪ್ಪ ತಿಳಿಸಿದರು. ಅವರು ನೀಲಾಂಬಿಕಾ ಬಸವ ತತ್ವ ಸೇವಾ ಟ್ರಸ್ಟ್‌ ಹಾಗೂ ಲಿಂಗವಂತ ಧರ್ಮ ತತ್ವ ಪ್ರಚಾರ ಸಂಸ್ಥೆ ಗುರುವಾರ ಹಮ್ಮಿಕೊಂಡ ಬಸವ ಪಂಚಮಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇದೊಂದು ಅತ್ಯುತ್ತಮ ಕಾರ್ಯಕ್ರಮವಾಗಿದೆ. ಹಾಲು ವ್ಯರ್ಥ ಮಾಡದೇ ಬಡ ರೋಗಿಗಳಿಗೆ ನೀಡುವ ಜೀವಪರವಾದ ಸಂದೇಶವನ್ನು ಈ ಕಾರ್ಯಕ್ರಮ ಪ್ರತಿಪಾದಿಸಿದೆ. ಜಾತಿ ವ್ಯವಸ್ಥೆ ಗಟ್ಟಿಯಾಗಿ ಬೇರೂರಿದೆ. ಮೌಢ್ಯವೂ ನಮ್ಮನ್ನಾಳುತ್ತಿವೆ. ಇವುಗಳನ್ನು ಬುಡಮೇಲು ಮಾಡಲು ಬಸವೇಶ್ವರ ಹೊಸ ಸಮಾಜ ನಿರ್ಮಾಣಕ್ಕೆ ಅಡಿಪಾಯ ಹಾಕಿದರು. ದುರ್ದೈವದ ಸಂಗತಿ ಎಂದರೆ ಅವರು ಕೈಗೊಂಡ ಚಳವಳಿ ಪೂರ್ಣಗೊಳ್ಳಲಿಲ್ಲ ಎಂದು ವಿಷಾದಿಸಿದರು.

ಜಿ.ಪಂ ಸದಸ್ಯ ಗೌತಮ ವೈಜನಾಥ ಪಾಟೀಲ ಮಾತನಾಡಿ, ಭಕ್ತಿಯ ಹೆಸರಲ್ಲಿ ಮೌಢ್ಯತೆ ಹೇರುವುದು ಹಾಗೂ ಇಂತಹ ಆಚರಣೆ ಅರ್ಥಹೀನವಾಗುತ್ತವೆ. ಆದರೆ, ಚಂದಾಪುರದ ಮಹಿಳೆಯರು ತಾವು ಎರಡೂವರೆ ದಶಕಗಳಿಂದ ಕಲ್ಲು ನಾಗರಿಗೆ ಹಾಲು ನೆರೆಯುವುದು ಬಿಟ್ಟು ರೋಗಿಗಳಿಗೆ ಹಾಲನೆರೆಯುತ್ತಿರುವುದು ಮಾದರಿಯಾಗಿದೆ ಎಂದರು.

ಜಿಲ್ಲಾ ಬಂಜಾರಾ ಸಮಾಜದ ಅಧ್ಯಕ್ಷ ರಾಮಚಂದ್ರ ಜಾಧವ್‌, ವೈದ್ಯಾಧಿಕಾರಿ ಡಾ.ಸಂತೋಷ ಪಾಟೀಲ ಮಾತನಾಡಿದರು. ತಾ.ಪಂ ಅಧ್ಯಕ್ಷೆ ರೇಣುಕಾ ಅಶೋಕ ಚವ್ಹಾಣ, ಉಪಾಧ್ಯಕ್ಷ ರುದ್ರಶೆಟ್ಟಿ ಪಡಶೆಟ್ಟಿ, ಪುರಸಭೆ ಅಧ್ಯಕ್ಷೆ ಇಂದುಮತಿ ಮನೋಹರ ದೇಗಲಮಡಿ, ಉಪಾಧ್ಯಕ್ಷೆ ಫರ್ಜಾನಾ ಮಸೂದ್‌ ಸೌದಾಗರ, ಜೆಸ್ಕಾಂ ನಿರ್ದೇಶಕಿ ಉಮಾ ಪಾಟೀಲ, ವೀರಭದ್ರೇಶ್ವರ ಸಹಕಾರ ಬ್ಯಾಂಕಿನ ಅಧ್ಯಕ್ಷ ಬಸವಣ್ಣ ಪಾಟೀಲ, ಎಪಿಎಂಸಿ ಸದಸ್ಯ ಅಜೀತ ಪಾಟೀಲ, ನೀಲಾಂಬಿಕಾ ಟ್ರಸ್ಟ್‌ ಅಧ್ಯಕ್ಷೆ ಜಗದೇವಿ ಹಕ್ಯಾಳ್‌, ಚಿತ್ರಶೇಖರ ಪಾಟೀಲ, ಭೋಗಲಿಂಗಪ್ಪ ಶಾಬಾದಿ, ಶಾಮರಾವ್‌ ಕೋರವಾರ, ಧರ್ಮರಾವ್‌ ಭದ್ರಗೊಂಡ ಇದ್ದರು. ಸಮಾಜದ ಅಧ್ಯಕ್ಷ ವಿಶ್ವನಾಥ ಪಾಟೀಲ ಪೋಲಕಪಳ್ಳಿ ಅಧ್ಯಕ್ಷತೆ ವಹಿಸಿದ್ದರು. ಕಾಶಿನಾಥ ಹುಣಜೆ ಸ್ವಾಗತಿಸಿದರು. ಮಲ್ಲಿಕಾರ್ಜುನ ಪಾಲಾಮೂರು ನಿರೂಪಿಸಿದರು. ನಾಗೇಶ ಭದ್ರಶೆಟ್ಟಿ ವಂದಿಸಿದರು.

ಚಿಂಚೋಳಿ ವರದಿ: ಮಾನವ ಬಂಧುತ್ವ ವೇದಿಕೆಯ ಆಶ್ರಯದಲ್ಲಿ ಯುವ ವಕೀಲ ಕಾಶಿನಾಥ ಸಿಂಧೆ ನೇತೃತ್ವದಲ್ಲಿ ಗುರುವಾರ ಬಸವ ಪಂಚಮಿಯನ್ನು ಇಲ್ಲಿನ ತಾಲ್ಲೂಕು ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಲು ನೀಡಿ ಅರ್ಥಪೂರ್ಣವಾಗಿ ಆಚರಿಸಿದರು.

ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮಲ್ಲಿಕಾರ್ಜುನ ಪಾಲಾಮೂರು, ‘ಕಾಡಾ’ ಸದಸ್ಯ ಕೆ.ಎಂ.ಬಾರಿ, ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸಂತೋಷ ಪಾಟೀಲ, ಪಾಂಡುರಂಗ ಲೊಡ್ಡನೋರ್‌ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ವೈಜನಾಥ ಬಾಜೆಪಳ್ಳಿ, ಬಂಡಪ್ಪ ಯಂಗನೋರ್‌, ರೇವಣಸಿದ್ದ ಎನ್ನೋರ್‌, ಜಗನ್ನಾಥ ರೇವಣೋರ್‌, ಸಂಜೀವಕುಮಾರ ಸಾಸರಗಾಂವ್‌ ಇದ್ದರು.

ವಿವಿಧೆಡೆ ಬಸವ ಪಂಚಮಿ ಆಚರಣೆ: ತಾಲ್ಲೂಕಿನ ನಾಗರಾಳ್‌, ಗುರಂಪಳ್ಳಿ ಹಾಗೂ ಹಸರಗುಂಡಗಿಯಲ್ಲಿ ಬಸವ ಪಂಚಮಿಯನ್ನು ಮಕ್ಕಳಿಗೆ ಹಾಲು ಕುಡಿಸುವ ಮೂಲಕ ವೈಜ್ಞಾನಿಕವಾಗಿ ಆಚರಿಸಲಾಯಿತು ಎಂದು ವೇದಿಕೆಯ ಮುಖಂಡ ಕಾಶಿನಾಥ ಸಿಂಧೆ ತಿಳಿಸಿದರು. ಕಾರ್ಯಕ್ರಮದಲ್ಲಿ ಬಸವಣ್ಣನವರ ಸಂದೇಶ ಹಾಗೂ ಬಸವ ಪಂಚಮಿಯ ವೈಜ್ಞಾನಿಕ ಆಧಾರ ಮತ್ತು ನಾಗ ಪಂಚಮಿ ಮೌಢ್ಯತೆಯ ಪ್ರತೀಕವಾದ ಆಚರಣೆ ಎಂಬುದು ತಿಳಿಸಿ ಕೊಡಲಾಯಿತು.

ಬಾಬುರಾವ್‌ ಮಾಲೆ, ಬಾಬುಮಿಯಾ ಜಮಾದಾರ, ಬಾಬುರಾವ್‌, ರಾಹುಲ್‌ ಕಟ್ಟಿಮನಿ, ರವಿ, ನಿರಂಜನ, ಸುನೀಲ, ಆಕಾಶ, ಪ್ರಕಾಶ, ಬಸವ. ರಮೇಶ ಇದ್ದರು.
ಗುರಂಪಳ್ಳಿಯಲ್ಲಿ ರಾಜು ದೊಡ್ಡಿ, ಆನಂದ ಮೇತ್ರೆ, ಸಂಜುಕುಮಾರ, ರವಿ ಕುರಿದೊಡ್ಡಿ, ಚಾಂದಪಾಷಾ ನಾಯಕೋಡಿ ಪಾಲ್ಗೊಂಡಿದ್ದರು.

ಹಸರಗುಂಡಗಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಮಣ್ಣ ಗೌತಮ, ನಾಗರೆಡ್ಡಿ ಮಗಿ, ಗೌತಮ ಇತಾಪುರ, ಹೃತ್ವಿಕ, ಜಗನ್ನಾಥ ಕಟ್ಟಿಮನಿ, ಜಗನ್ನಾಥ ಖಾಶೆಂಪುರ, ರೇವಣಸಿದ್ದ ಲಾಲಶ್ರೀ, ಮಹೇಶ ಗೌತಮ, ಶೈಲಾಸಕುಮಾರ ಇತಾಪುರ ಇದ್ದರು.

ಚಿಂಚೋಳಿ ವರದಿ: ಮಹಿಳೆಯರ ಹಬ್ಬ ಎಂದೇ ಕರೆಯಲ್ಪಡುವ ಶ್ರಾವಣ ಮಾಸದ ಮೊದಲ ಹಬ್ಬ ನಾಗ ಪಂಚಮಿಯ ಪ್ರಯುಕ್ತ ಗುರುವಾರ ನಾಗಚತುರ್ಥಿಯನ್ನು ಸಂಪ್ರದಾಯದಂತೆ ಮಹಿಳೆಯರು ಆಚರಿಸಿದರು. ಪುರಸಭೆ ವ್ಯಾಪ್ತಿಯ ಚಿಂಚೋಳಿ, ಚಂದಾಪುರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಗುರುವಾರ ನಾಗ ಚತುರ್ಥಿ ಆಚರಿಸಿ, ಶುಕ್ರವಾರ ಹಬ್ಬ ಆಚರಣೆಗೆ ಆಣಿಯಾದರು.

ಪ್ರಯುಕ್ತ ವಿವಿಧೆಡೆ ನಾಗದೇವರ ಮೂರ್ತಿಗಳಿಗೆ ಬೆಲ್ಲದ ನೀರು ಎರೆದು ಹೆಂಗಳೆಯರು, ಪಂಚಮಿಗೆ ಶುಭಾರಂಭ ಮಾಡಿದರು. ಅಳ್ಳು, ಬೆಲ್ಲದ ನೀರು, ಗುಗ್ಗರಿ, ನೂಲಿನ ದಾರ ದೇವರಿಗೆ ಅರ್ಪಿಸಿದರು.

* * 

ಮೂಢನಂಬಿಕೆ ಹೋಗಲಾಡಿಸಿ ಸಮಾನತೆಯ ಸಮಾಜ ನಿರ್ಮಾಣಕ್ಕೆ ಬಸವೇಶ್ವರ ಹಾಗೂ ಅಂಬೇಡ್ಕರ್‌ ಅವರು ಪ್ರತಿಪಾದಿಸಿದ ಸಿದ್ಧಾಂತದಲ್ಲಿ ಸಾಮ್ಯತೆಯಿದೆ.
ರಾಮಚಂದ್ರ ಜಾಧವ್‌
ಜಿಲ್ಲಾ ಅಧ್ಯಕ್ಷರು, ಬಂಜಾರಾ ಸಮಾಜ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.