ADVERTISEMENT

ಮಹಿಳೆ ಕೊಲೆ: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2017, 7:18 IST
Last Updated 15 ಫೆಬ್ರುವರಿ 2017, 7:18 IST
ಜೇವರ್ಗಿ ತಾಲ್ಲೂಕಿನ ಚಿಗರಳ್ಳಿ ಕ್ರಾಸ್ ಬಳಿ ನಡೆದ ಮಹಿಳೆಯೊಬ್ಬರ ಕೊಲೆ ಪ್ರಕರಣದ ಬಂಧಿತ ಆರೋಪಿಗಳ ಜತೆ ಪೊಲೀಸರು
ಜೇವರ್ಗಿ ತಾಲ್ಲೂಕಿನ ಚಿಗರಳ್ಳಿ ಕ್ರಾಸ್ ಬಳಿ ನಡೆದ ಮಹಿಳೆಯೊಬ್ಬರ ಕೊಲೆ ಪ್ರಕರಣದ ಬಂಧಿತ ಆರೋಪಿಗಳ ಜತೆ ಪೊಲೀಸರು   
ಜೇವರ್ಗಿ: ಕಳೆದ ಫೆ.9ರಂದು ತಾಲ್ಲೂಕಿನ ಚಿಗರಳ್ಳಿ ಕ್ರಾಸ್‌ನ ಕೃಷ್ಣಾ ಭಾಗ್ಯ ಜಲ ನಿಗಮದ ವಿತರಣಾ ಕಾಲುವೆ ಬಳಿ ನಡೆದ ಮಹಿಳೆಯೊಬ್ಬರ ಕೊಲೆ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
 
ಮೋರಟಗಿ ಗ್ರಾಮದ ಗುರುಪಾದ ಕುಪ್ಪಾ ಜೇರಟಗಿ (55) ಮತ್ತು ಆತನ ಮಗ ಚನಬಸಪ್ಪ ಜೇರಟಗಿ(22) ಬಂಧಿತ ಆರೋಪಿಗಳು.
ಬಂಧಿತ ಆರೋಪಿ ಗುರುಪಾದ ಜೇರಟಗಿ ಅವರು ಕೃಷಿ ಕೆಲಸದ ಖರ್ಚಿಗಾಗಿ ಮೃತ ಪಾರ್ವತಿ ಅವರಿಂದ ₹2 ಲಕ್ಷ  ಸಾಲ ಪಡೆದಿದ್ದರು.

ಸಾಲ ಮರುಪಾವತಿಸಲು ಸಾಧ್ಯವಾಗದ ಆರೋಪಿಗಳು ಹಣ ಮರಳಿ ನೀಡುವುದಾಗಿ ನಂಬಿಸಿ ತಮ್ಮ ಬೈಕ್‌ನಲ್ಲಿ ಮಹಿಳೆಯನ್ನು ಜೇವರ್ಗಿಗೆ ಕರೆ ತಂದಿದ್ದಾರೆ. ನಂತರ ಜೇವರ್ಗಿಯಲ್ಲಿ ಹಣದ ವ್ಯವಸ್ಥೆಯಾಗಿಲ್ಲ.

ಮತ್ತೆ ಚಿಗರಳ್ಳಿಯಲ್ಲಿ ತಮ್ಮ ಸಂಬಂಧಿಕರ ಹತ್ತಿರ ಹಣ ಕೊಡಿಸುವುದಾಗಿ ನಂಬಿಸಿ ಚಿಗರಳ್ಳಿ ಮತ್ತು ಮುದವಾಳ (ಬಿ) ಹತ್ತಿರ ಇರುವ ಕಾಲುವೆ ಕಡೆ ಕರೆದುಕೊಂಡು ಹೋಗಿದ್ದಾರೆ. ಕಾಲುವೆಯಲ್ಲಿ ಪಾರ್ವತಿ ನೀರು ಕುಡಿಯುತ್ತಿದ್ದಾಗ ಆಕೆಯನ್ನು ಕಾಲುವೆಗೆ  ತಳ್ಳಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿಗಳನ್ನು ಮಂಗಳವಾರ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.  ಘಟನೆ ಕುರಿತು ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.  
  
ಫೆ.9ರಂದು ತಾಲ್ಲೂಕಿನ ಚಿಗರಳ್ಳಿ ಕ್ರಾಸ್‌ ಬಳಿ ಇರುವ ಕೃಷ್ಣಾ ಭಾಗ್ಯ ಜಲ ನಿಗಮದ ವಿತರಣಾ ಕಾಲುವೆಯಲ್ಲಿ ಮಹಿಳೆ ಶವ ಪತ್ತೆಯಾಗಿತ್ತು. ಪತ್ರಿಕೆಗಳಲ್ಲಿ ವರದಿ ಪ್ರಕಟವಾದ ನಂತರ ಮಹಿಳೆಯು ಸಿಂದಗಿ ತಾಲ್ಲೂಕಿನ ಮೋರಟಗಿ ಗ್ರಾಮದ ಪಾರ್ವತಿ ನೀಲಪ್ಪಗೌಡ ಪಾಟೀಲ್ (46) ಎಂದು ಗುರ್ತಿಸಲಾಗಿತ್ತು.
 
ಲಾರಿ–ಬಸ್‌ ಡಿಕ್ಕಿ    

ಕಮಲಾಪುರ:ಬಸ್‌ ಹಾಗೂ ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಪ್ರಯಾಣಿಕರು ಗಾಯಗೊಂಡ ಘಟನೆ ಮಂಗಳವಾರ ಕುರಿಕೋಟಾ ಸಮೀಪ ನಡೆದಿದೆ.
 
ಬಸ್‌–ಲಾರಿ ಮಧ್ಯ ಮುಖಾಮುಖಿ ಡಿಕ್ಕಿ ಹೊಡೆದಿದ್ದು, ಹಿಂದಿನಿಂದ ಬಂದ ಕಾರು ಬಸ್‌ನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಬಸ್ಸಿನಲ್ಲಿದ್ದ ಐದಾರು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಜಿಲ್ಲಾಸ್ಪತ್ರಗೆ ದಾಖಲಿಸಲಾಗಿದೆ ಎಂದು ಎಸ್‌ಐ ಮಂಜುನಾಥ ಹೂಗಾರ ತಿಳಿಸಿದ್ದಾರೆ. ಮಹಾಗಾಂವ ಪೊಲೀಸ್‌ ಠಾಣಿಯಲ್ಲಿ ಪ್ರಕರಣ ದಾಖಲಾಗಿದೆ.
 
ಸವಾರ ಗಾಯ

ಚಿಟಗುಪ್ಪ: ದ್ವಿಚಕ್ರ ವಾಹನದಿಂದ ಆಯ ತಪ್ಪಿ ಬಿದ್ದು ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಸಮೀಪದ ರಾಷ್ಟ್ರೀಯ ಹೆದ್ದಾರಿ 9ರಲ್ಲಿ ಸೋಮವಾರ ನಡೆದಿದೆ.
 
ಚಿಂಚೋಳಿ ತಾಲ್ಲೂಕಿನ ಸಾಸರಗಾಂವ ಗ್ರಾಮದ ಸೂರ್ಯಕಾಂತ ಅಣ್ಣಾರಾವ ಪಾಟೀಲ (53) ಗಾಯಗೊಂಡವರು. ತೆಲಂಗಾಣದ ಜಹಿರಾಬಾದ್‌ನಿಂದ ಸ್ವ ಗ್ರಾಮಕ್ಕೆ ಬರುವ ವೇಳೆ ಮರಕುಂದಾ ಗ್ರಾಮದ ಸೇತುವೆ ಬಳಿ ಬೈಕ್ ಆಯತಪ್ಪಿ ಬಿದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.