ADVERTISEMENT

ಮಿಶ್ರಬೆಳೆ ಬೆಳೆದು ಯಶಸ್ವಿಯಾದ ಕರಜಗಿ ರೈತ

ಶಿವಾನಂದ ಹಸರಗುಂಡಗಿ
Published 25 ಡಿಸೆಂಬರ್ 2017, 9:10 IST
Last Updated 25 ಡಿಸೆಂಬರ್ 2017, 9:10 IST
ಪ್ರಗತಿಪರ ರೈತ ಚಂದ್ರಶೇಖರ ಕರಜಗಿ ಕಬ್ಬಿನಲ್ಲಿ ಮಿಶ್ರಬೆಳೆ ಕಡಲೆ ಬೆಳೆದಿರುವುದು
ಪ್ರಗತಿಪರ ರೈತ ಚಂದ್ರಶೇಖರ ಕರಜಗಿ ಕಬ್ಬಿನಲ್ಲಿ ಮಿಶ್ರಬೆಳೆ ಕಡಲೆ ಬೆಳೆದಿರುವುದು   

ಅಫಜಲಪುರ: ಇಲ್ಲಿನ ಪ್ರಗತಿಪರ ರೈತರಾದ ಚಂದ್ರಶೇಖರ ಕರಜಗಿ ತಮ್ಮ ತೋಟದಲ್ಲಿ ಸುಮಾರು 6 ಎಕರೆಯಲ್ಲಿ ಕಬ್ಬಿನ ಬೆಳೆಯ ಜತೆಗೆ ಮಿಶ್ರ ಬೆಳೆಯಾಗಿ ಕಡಲೆಯನ್ನು ಬೆಳೆದು ಯಶಸ್ವಿಯಾಗಿದ್ದಾರೆ.

ಸಾಕಷ್ಟು ರೈತರಲ್ಲಿ ಮಿಶ್ರಬೆಳೆ ಬೆಳೆದರೆ ಕಬ್ಬು ಸರಿಯಾಗಿ ಬೆಳವಣಿಗೆ ಯಾಗುವುದಿಲ್ಲ ಎಂಬ ನಂಬಿಕೆ ಯಿದೆ. ಆದರೆ, ಕರಜಗಿಯವರು ಆ ನಂಬಿಕೆ ಯನ್ನು ಸುಳ್ಳು ಮಾಡಿದ್ದಾರೆ. ಕಡಲೆ ಬೆಳೆ ಜೊತೆ ಕಬ್ಬು ಚೆನ್ನಾಗಿ ಬೆಳೆದು ಬರುತ್ತಿದೆ. ಹೀಗಾಗಿ, ಮಿಶ್ರಬೆಳೆ ಲಾಭದಾಯಕ ವಾಗಿದೆ ಎಂದು ಹೇಳಲಾಗುತ್ತಿದೆ.

ಕಬ್ಬಿನಲ್ಲಿ ರೈತರು ಮಿಶ್ರ ಬೆಳೆಯಾಗಿ ಗೆಜ್ಜೆ, ಶೇಂಗಾ, ಈರುಳ್ಳಿ, ಮೆಕ್ಕೆಜೋಳ ಹೆಚ್ಚಾಗಿ ಬೆಳೆಯುತ್ತಾರೆ. ಆದರೆ, ಈ ಭಾಗದಲ್ಲಿ ಹೆಚ್ಚಿನ ರೈತರು ಕಬ್ಬಿನಲ್ಲಿ ಮಿಶ್ರಬೆಳೆಯಾಗಿ ಕಡಲೆ ಬೆಳೆಯುತ್ತಾರೆ.

ADVERTISEMENT

ಈ ಕುರಿತು ಮಿಶ್ರಬೆಳೆ ಬೆಳೆಯುತ್ತಿ ರುವ ಕರಜಗಿಯವರು ಮಾಹಿತಿ ನೀಡಿ ‘ನಾನು ಆರಂಭದಲ್ಲಿ 5 ಅಡಿ ಅಗಲದ ಕಬ್ಬಿನ ಸಾಲು ಬಿಟ್ಟು ಮೊದಲು ಎರಡು ಬದಿಯಲ್ಲಿ ಕಡಲೆ ನಾಟಿ ಮಾಡಿದ್ದೇನೆ. ನಂತರ ಕಡಲೆ ಸ್ವಲ್ಪ ಎತ್ತರವಾದ ಮೇಲೆ ಕಡಲೆ ನಡುವಿನ ಸಾಲಿನಲ್ಲಿ ಕಬ್ಬು ನಾಟಿ ಮಾಡಿದ್ದೇನೆ. ಸದ್ಯಕ್ಕೆ ಕಡಲೇ ತಿಂಗಳಲ್ಲಿ ಕಟಾವು ಆಗುತ್ತದೆ. ಜೊತೆಗೆ, ಕಬ್ಬು ಚೆನ್ನಾಗಿ ಬೆಳವಣಿಗೆಯಾಗುತ್ತಿದೆ. ನಾನು 3 ತಿಂಗಳಲ್ಲಿಯೇ ಕಡಲೆ ಬೆಳೆಯಿಂದ ಆದಾಯ ಪಡೆಯಬಹುದು. ನಂತರ ಕಬ್ಬಿನ ಆದಾಯ ಪಡೆಯಬಹುದು’ ಎಂದು ಹೇಳುತ್ತಾರೆ.

‘ಕಬ್ಬು ನಾಟಿ ಮಾಡುವವರು ಕಡ್ಡಾಯವಾಗಿ ಮಿಶ್ರಬೆಳೆ ಬೆಳೆಯ ಬೇಕು. ಕಬ್ಬಿಗೆ ಮಾಡುವ ಖರ್ಚನ್ನು ಮಿಶ್ರಬೆಳೆಯಿಂದ ಪಡೆಯ ಬಹುದು. ಕಬ್ಬಿನ ಆದಾಯ ಉಳಿಕೆಯಾಗುತ್ತದೆ. ಕೃಷಿ ಇಲಾಖೆಯಿಂದ ತುಂತುರು ಮತ್ತು ಹನಿ ನೀರಾವರಿಗೆ ಸಹಾಯಧನವಿದ್ದು, ಅದನ್ನು ಪಡೆದು ಕಬ್ಬನ್ನು ಬೆಳೆಯಬೇಕು’ ಎಂದು ಸಹಾಯಕ ಕೃಷಿ ನಿರ್ದೇಶಕ ಶರಣಗೌಡ ಪಾಟೀಲ ಹೇಳುತ್ತಾರೆ.

ಒಟ್ಟಾರೆ ಕರಜಗಿ ಮಿಶ್ರಬೆಳೆ ಬೆಳೆದು ಇತರ ರೈತರಿಗೆ ಮಾದರಿಯಾಗಿದ್ದಾರೆ. ಆದಾಯ ದುಪ್ಪಟ್ಟಾಗುತ್ತಿದೆ. ಇದರಿಂದ ಖರ್ಚು ಕಡಿಮೆ. ಸ್ವಲ್ಪ ಜಮೀನಿನಲ್ಲಿ ಹೆಚ್ಚಿನ ಆದಾಯ ಪಡೆದುಕೊಳ್ಳಲು ಅನುಕೂಲವಾಗುತ್ತದೆ.

* * 

ನಾನು 2 ತಿಂಗಳ ಹಿಂದೆ ಮಿಶ್ರಬೆಳೆಯಾಗಿ ಕಬ್ಬಿನಲ್ಲಿ ಕಡಲೆ ಬೆಳೆದಿದ್ದೇನೆ. ತಿಂಗಳಲ್ಲಿ ಕಡಲೆ ಕಟಾವಿಗೆ ಬರುತ್ತದೆ. ಜೊತೆಗೆ, ಕಬ್ಬು ಚೆನ್ನಾಗಿ ಬೆಳವಣಿಗೆಯಾಗುತ್ತಿದೆ. ಇದರಿಂದ ನನಗೆ ಕಬ್ಬಿನ ಖರ್ಚು, ನಿರ್ವಹಣೆ ಮಾಡಲು ಅನುಕೂಲವಾಗುತ್ತಿದೆ.
ಚಂದ್ರಶೇಖರ ಕರಜಗಿ, ಪ್ರಗತಿಪರ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.