ADVERTISEMENT

ಮೂಲಸೌಕರ್ಯ ವಂಚಿತ ಬೋಜು ನಾಯಕ ತಾಂಡಾ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2017, 4:26 IST
Last Updated 18 ಏಪ್ರಿಲ್ 2017, 4:26 IST
ವಾಡಿ: ನಾಲವಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೋಜು ನಾಯಕ ತಾಂಡಾದ ನಿವಾಸಿಗಳು ಕನಿಷ್ಠ ಮೂಲ ಸೌಲಭ್ಯಗಳಿಲ್ಲದೇ ಪರದಾಡುತ್ತಿದ್ದಾರೆ.
ತಾಂಡಾದಲ್ಲಿ 100ಕ್ಕೂ ಅಧಿಕ ಮನೆಗಳಿದ್ದು, 800 ಜನ ವಾಸಿಸುತ್ತಿದ್ದಾರೆ.

ಆದರೆ, ಇಲ್ಲಿ ಒಂದೇ ಒಂದು ಸಾಮೂಹಿಕ ಹಾಗೂ ವೈಯುಕ್ತಿಕ ಶೌಚಾಲಯವಾಗಲಿ ಇಲ್ಲ. ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇಲ್ಲಿನ ನಿವಾಸಿಗಳಿಗೆ ಶೌಚಾಲಯದ ಮಹತ್ವ ತಿಳಿಸಿಕೊಡುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಇಲ್ಲಿನ ನಿವಾಸಿಗಳಿಗೆ ಬಯಲು ಶೌಚ ಅನಿವಾರ್ಯ ಎನ್ನುವ ದೂರು ಇದೆ.
 
ತಾಂಡಾದಲ್ಲಿ ನೀರಿನ ಸಮಸ್ಯೆ ವಿಪರೀತವಾಗಿದ್ದು, ಎತ್ತಿನ ಬಂಡಿ ಮೂಲಕ ಸಮೀಪದ ತೋಟಗಳಿಂದ ನೀರು ತರುವುದು ಸಾಮಾನ್ಯವಾಗಿದೆ. ಅಲ್ಲಲ್ಲಿ ನೀರಿನ ಗುಮ್ಮಿಗಳನ್ನು ಅಳವಡಿಸಲಾಗಿದೆ. ಗುಮ್ಮಿಗಳಿಗೆ ನೀರು ಸರಬರಾಜು ಮಾಡುವ ಪೈಪ್‌ಗಳು ಒಡೆದ ಕಾರಣ ಜನರಿಗೆ ಸಮರ್ಪಕ ನೀರು ಸಿಗುತ್ತಿಲ್ಲ.

‘ಮನೆಗಳಿಗೆ ನಲ್ಲಿಯ ವ್ಯವಸ್ಥೆ ಕಲ್ಪಿಸುವಲ್ಲಿ ಸ್ಥಳೀಯ ಪಂಚಾಯಿತಿ ವಿಫಲವಾಗಿದೆ. ಒಡೆದ ಪೈಪ್‌ಗಳಿಂದ ನೀರು ಸೋರಿಕೆಯಾಗಿ ನಲ್ಲಿಗಳಲ್ಲಿ ಹೊಲಸು ನೀರು ಬರುತ್ತಿದೆ’ ಎನ್ನುತ್ತಾರೆ ಸ್ಥಳೀಯ ನಿವಾಸಿ ರವಿ ರಾಠೋಡ. 
 
ತಾಂಡಾದಲ್ಲಿ ಸಿ.ಸಿ ರಸ್ತೆ ಹಾಗೂ ಒಳ ಚರಂಡಿ ವ್ಯವಸ್ಥೆಯ ಕೊರತೆ ಎದ್ದು ಕಾಣುತ್ತಿದೆ. ಪ್ರತಿ ಮನೆಯ ಮುಂದೆ ಕೊಳಚೆ ನೀರು ಸಂಗ್ರಹವಾಗಿ ಸಾಂಕ್ರಾಮಿಕ ರೋಗಗಳು ಸಾಮಾನ್ಯ ಎನ್ನುವಂತಾಗಿದೆ. 
 
ನಿಂತ ಕೊಳಚೆ ನೀರಿನಿಂದ ತಾಂಡಾದಲ್ಲಿ ಸೊಳ್ಳೆಗಳ ಹಾಗೂ ನೊಣಗಳ ಕಾಟ ವಿಪರೀತವಾಗಿ ಜನ ನಲುಗಿ ಹೋಗಿದ್ದಾರೆ. ‘ನಮ್ಮ ಮನೆಯ ಪಕ್ಕದಲ್ಲಿ ಚರಂಡಿ ಇದ್ದು, ಸದಾ ದುರ್ಗಂಧ ಬೀರುತ್ತಿದೆ. ಚರಂಡಿ ಸ್ವಚ್ಛ ಮಾಡಿ ಎಂದು ಪಂಚಾಯಿತಿಗೆ ಹೇಳಿದರೂ ಪ್ರಯೋಜನವಾಗಿಲ್ಲ. ಹೊಲಸು ವಾಸನೆಗೆ ನಾವು ಬೇಸತ್ತು ಹೋಗಿದ್ದೇವೆ’ ಎನ್ನುತ್ತಾರೆ ನಿವಾಸಿ ಚಾಂದಿಬಾಯಿ. 
 
ಅಂಗನವಾಡಿ ಕಟ್ಟಡ ಇಲ್ಲದ ಕಾರಣ ಬಾಡಿಗೆ ಕೋಣೆಯಲ್ಲಿ ಕೇಂದ್ರ ನಡೆಯುತ್ತಿದೆ. ಕೇಂದ್ರದಲ್ಲಿ 80 ಮಕ್ಕಳು ಇದ್ದಾರೆ. ಗರ್ಭಿಣಿ ಹಾಗೂ ಬಾಣಂತಿಯರಿಗೆ ಪೌಷ್ಟಿಕ ಆಹಾರ ಪೊರೈಸಿ ಗ್ರಾಮಸ್ಥರ ಅನಾರೋಗ್ಯ ತೊಲಗಿಸಬೇಕಾದ ಅಂಗನವಾಡಿ ಕೇಂದ್ರ ಅನಾರೋಗ್ಯದ ತಾಣವಾಗಿದೆ. ಹೊಸ ಅಂಗನವಾಡಿ ಕಟ್ಟಡ ಕಟ್ಟಿಸಿ ಅನುಕೂಲ ಮಾಡಿಕೊಡಬೇಕು ಎನ್ನುವ ಗ್ರಾಮಸ್ಥರ ಬೇಡಿಕೆ ಈಡೇರಿಲ್ಲ. 
 
‘ಕಳೆದ ಆರು ವರ್ಷಗಳಿಂದ ನಿರ್ಮಿಸಲಾಗುತ್ತಿರುವ ಬಿಸಿಯೂಟ ಕೋಣೆ ಇನ್ನೂ ಪೂರ್ಣಗೊಳ್ಳದ ಕಾರಣ ಅಡುಗೆ ತಯಾರಿಗೆ ತುಂಬಾ ಹಿನ್ನಡೆಯಾಗಿದೆ’ ಎಂದು ಪೋಷಕರು ಅಸಮಧಾನ ವ್ಯಕ್ತಪಡಿಸುತ್ತಾರೆ.

‘ಸ್ಥಳೀಯ ಪಂಚಾಯಿತಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನಮ್ಮ ಸಮಸ್ಯೆಗೆ ಸ್ಪಂದಿಸಿ ಮೂಲಸೌಲಭ್ಯ ಕಲ್ಪಿಸಿಕೊಡಬೇಕು’ ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.