ADVERTISEMENT

ಯಡಿಯೂರಪ್ಪ-ಈಶ್ವರಪ್ಪ ಮುಖಾಮುಖಿ ಇಂದು

ಬಿಜೆಪಿ ರಾಜ್ಯ ಕಾರ್ಯಕಾರಿಣಿ ಇಂದಿನಿಂದ *ಹೈ.ಕ.ಭಾಗದ ಚಿಂತನ ಮಂಥನ * ‘ರಾಯಣ್ಣ ಬ್ರಿಗೇಡ್‌’ ನಿಂದ ತಾರಕಕ್ಕೇರಿದ ಭಿನ್ನಾಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 21 ಜನವರಿ 2017, 6:18 IST
Last Updated 21 ಜನವರಿ 2017, 6:18 IST
ಬಿ.ಎಸ್.ಯಡಿಯೂರಪ್ಪ, ಕೆ.ಎಸ್.ಈಶ್ವರಪ್ಪ
ಬಿ.ಎಸ್.ಯಡಿಯೂರಪ್ಪ, ಕೆ.ಎಸ್.ಈಶ್ವರಪ್ಪ   

ಕಲಬುರ್ಗಿ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಅವರ ನಡುವಿನ ‘ಬಿಜೆಪಿ–ಬ್ರಿಗೇಡ್’ ಕುರಿತ ಭಿನ್ನಾಭಿಪ್ರಾಯ ತಾರಕಕ್ಕೇರಿದೆ. ಹೀಗಾಗಿ ನಗರದಲ್ಲಿ ಜ.21 ಹಾಗೂ 22ರಂದು ನಡೆಯಲಿರುವ ಬಿಜೆಪಿ ರಾಜ್ಯ ಕಾರ್ಯಕಾರಿಣಿಯಲ್ಲಿ ಇಬ್ಬರೂ ಮುಖಾಮುಖಿಯಾಗಲಿದ್ದಾರೆ.

‘ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡುವುದೇ ರಾಯಣ್ಣ ಬ್ರಿಗೇಡ್‌ನ ಉದ್ದೇಶ. ಹಿಂದುಳಿದವರು, ಅಲ್ಪಸಂಖ್ಯಾತರು ಮತ್ತು ದಲಿತರನ್ನು ಒಂದುಗೂಡಿಸಲು ಬ್ರಿಗೇಡ್ ಸ್ಥಾಪಿಸಲಾಗಿದೆ’ ಎಂದು ಈಶ್ವರಪ್ಪ  ಆರಂಭದಲ್ಲಿ ಹೇಳಿಕೆ ನೀಡಿದ್ದರು.

ಆದರೆ, ನಗರದಲ್ಲಿ ಜ. 10ರಂದು ನಡೆದ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನ ಜಿಲ್ಲಾ ಮಟ್ಟದ ಸಮಾವೇಶದಲ್ಲಿ, ‘ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಸ್ಥಾಪನೆಯ ಉದ್ದೇಶ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಲು ಅಥವಾ ಯಾರೋ ಒಬ್ಬರನ್ನು ಶಾಸಕರನ್ನಾಗಿಸಲು ಅಲ್ಲ’ ಎಂದು ಖಡಾಖಂಡಿತವಾಗಿ ಹೇಳುವ ಮೂಲಕ ಯಡಿಯೂರಪ್ಪ ಅವರಿಗೆ ತಮ್ಮ ಬೆಂಬಲವಿಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸುವ ಪ್ರಯತ್ನ ಮಾಡಿದ್ದರು.

ಇದಾದ ಬಳಿಕ ಇಬ್ಬರ ನಡುವಿನೆ ಗುದ್ದಾಟ ತೀವ್ರಗೊಂಡಿದ್ದು, ದಿನಕ್ಕೊಂದು ಸಮಾವೇಶ, ಹೇಳಿಕೆಗಳು ಹೊರಬೀಳುತ್ತಿವೆ. ಈಶ್ವರಪ್ಪ ಅವರೊಂದಿಗೆ ಗುರುತಿಸಿಕೊಂಡು ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದವರ ಪೈಕಿ 12 ಜನರನ್ನು ಯಡಿಯೂರಪ್ಪ ಅವರು ಮಾತುಕತೆಗೆ ಆಹ್ವಾನಿಸಿದ್ದರು. ಆದರೆ ಸಂಧಾನ ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂಬ ಸಂದೇಶ ರವಾನಿಸಿದ ಭಿನ್ನರು ಯಡಿಯೂರಪ್ಪ ಮತ್ತು ಈಶ್ವರಪ್ಪ ಮಧ್ಯದ ಗುದ್ದಾಟಕ್ಕೆ ಮತ್ತಷ್ಟು ಪುಷ್ಟಿ ಒದಗಿಸಿದ್ದರು.

ಇದಾದ ಬಳಿಕ ಬಾಗಲಕೋಟೆಯಲ್ಲಿ ಮಾತನಾಡಿದ್ದ ಈಶ್ವರಪ್ಪ, ‘ಪ್ರಮುಖರು ಇದುವರೆಗೂ ಒಂದೇ ಒಂದು ಸೂಚನೆ ನೀಡಿಲ್ಲ. ಮೌನಂ ಸಮ್ಮತಿ ಲಕ್ಷಣಂ ಎಂಬುದನ್ನು ಅರಿತು ನಾನು ಸಂಘಟನೆಯಲ್ಲಿ ಸಕ್ರಿಯನಾಗಿರುವೆ’ ಎಂದು ಹೇಳುವ ಮೂಲಕ ಯಡಿಯೂರಪ್ಪನವರಿಗೆ ಮತ್ತೆ ಸೆಡ್ಡು ಹೊಡೆದಿದ್ದರು.

ಈಶ್ವರಪ್ಪ ಅವರ ಹೇಳಿಕೆಗಳಿಗೆ ಯಡಿಯೂರಪ್ಪ ಸ್ಪಷ್ಟನೆ ನೀಡದಿದ್ದಾಗ್ಯೂ, ‘ನಾನು ಯಡಿಯೂರಪ್ಪ ಈಗಲೂ ಅಣ್ಣತಮ್ಮಂದಿರು. ರಾಯಣ್ಣ ಬ್ರಿಗೇಡ್ ವಿಷಯದಲ್ಲಿ ಅವರು ನನ್ನನ್ನು ಯಾಕೆ ದ್ವೇಷಿಸುತ್ತಿದ್ದಾರೋ ಗೊತ್ತಿಲ್ಲ’ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿ ಮತ್ತೆ ಅವರನ್ನು ಕೆಣಕಿದರು.

‘ಬೆಂಗಳೂರಿನಲ್ಲಿ ಜ.19ರಂದು ನಡೆಯಲಿರುವ ಸಂಧಾನ ಸಭೆಗೆ ನಾನು ಹೋಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದ ಅವರು, ಸಂಧಾನ ಸಭೆಗೆ ಗೈರುಹಾಜರಾಗುವ ಮೂಲಕ ಮತ್ತೆ ತಮ್ಮ ಅಸಮಾಧಾನ ಹೊರಹಾಕಿದ್ದರು.

ಜ.2 ರಂದು ಮುಖಾಮುಖಿ:  ರಾಯಣ್ಣ ಬ್ರಿಗೇಡ್ ಸ್ಥಾಪನೆ ಬಳಿಕ ಪಕ್ಷದ ಚಟುವಟಿಕೆಗಳಿಂದ ಬಹುತೇಕ ದೂರವೇ ಉಳಿದಂತಿದ್ದ ಈಶ್ವರಪ್ಪ ಅವರು ಜ.3ರಂದು ಬೆಂಗಳೂರಿನಲ್ಲಿ ನಡೆದ ವಿ. ಶ್ರೀನಿವಾಸ್ ಪ್ರಸಾದ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದರು.

ಅದಾದ ಬಳಿಕ ಕಲಬುರ್ಗಿಯಲ್ಲಿ ನಡೆಯಲಿರುವ ಕಾರ್ಯಕಾರಿಣಿಯಲ್ಲಿ ಇಬ್ಬರು ನಾಯಕರು ಮುಖಾಮುಖಿ ಆಗುತ್ತಿರುವುದರಿಂದ ಸಹಜವಾಗಿ ಪಕ್ಷದ ವಲಯದಲ್ಲಿ ಕುತೂಹಲ ಮೂಡಿಸಿದೆ.

ರಾಜಕೀಯ ಚಟುವಟಿಕೆಗಳ ವೇದಿಕೆ
ರಾಜ್ಯ ಸರ್ಕಾರವು ಬರ ನಿರ್ವಹಣೆಯಲ್ಲಿ ವಿಫಲವಾಗಿದೆ ಎಂಬುದನ್ನು ಜನರಿಗೆ ಮನವರಿಕೆ ಮಾಡುವುದು. ಈ ಮೂಲಕ ಮುಂಬರುವ ಚುನಾವಣೆ ಎದುರಿಸಲು ಪಕ್ಷ ಸಂಘಟನೆ ಮಾಡುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಲಿದೆ. 27 ತಂಡಗಳನ್ನು ಸಭೆಯ ವ್ಯವಸ್ಥೆ ನೋಡಿಕೊಳ್ಳಲು ರಚಿಸಲಾಗಿದೆ.


ತೇಲ್ಕೂರ ವಿಶೇಷ ಆಹ್ವಾನಿತ
ಕಲಬುರ್ಗಿ:
 ನಗರದಲ್ಲಿ ಜ.21 ಹಾಗೂ 22ರಂದು ನಡೆಯಲಿರುವ ಬಿಜೆಪಿ ರಾಜ್ಯ ಕಾರ್ಯಕಾರಿಣಿ ವಿಶೇಷ ಆಹ್ವಾನಿತರಾಗಿ ಬಸವರಾಜ ಪಾಟೀಲ ತೇಲ್ಕೂರ ಅವರನ್ನು ಆಯ್ಕೆ ಮಾಡಲಾಗಿದೆ. ಇವರು ಈ ಹಿಂದೆ ಎರಡು ಅವಧಿಗೆ ಬಿಜೆಪಿ ನಗರ ಜಿಲ್ಲಾ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.