ADVERTISEMENT

‘ಯೋಗದಿಂದ ಖಿನ್ನತೆ ದೂರ’

‘ದುಃಖವನ್ನು ಭರಿಸಿ ನೆಮ್ಮದಿಯಿಂದ ಜೀವಿಸಿ’ ಪುಸ್ತಕ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2017, 4:05 IST
Last Updated 19 ಏಪ್ರಿಲ್ 2017, 4:05 IST
ಕಲಬುರ್ಗಿ: ‘ತೃಪ್ತಿಯಿಂದ ಸರಳ ಜೀವನ ನಡೆಸಬೇಕು, ಆಗ ಮಾತ್ರ ಖಿನ್ನತೆಯಿಂದ ಮುಕ್ತರಾಗಲು ಸಾಧ್ಯ’ ಎಂದು ಮನೋವೈದ್ಯ ಡಾ.ಸಿ.ಆರ್‌. ಚಂದ್ರಶೇಖರ್‌ ಹೇಳಿದರು.
 
ಕರ್ನಾಟಕ ರಾಜ್ಯ ಸರ್ಕಾರಿ ಫಾರ್ಮಾಸಿಸ್ಟ್‌ ಸಂಘ, ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ ಹಾಗೂ ಜಿಲ್ಲಾ ಕನ್ನಡ ವೈದ್ಯ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ಮಂಗಳವಾರ  ಆಯೋಜಿಸಿದ್ದ ವಿಶ್ವ ಆರೋಗ್ಯ ದಿನಾಚಾರಣೆ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
 
ಮಂಕುತನ, ಒಂಟಿಯಾಗಿರುವುದು, ಇತರ ಮಕ್ಕಳೊಂದಿಗೆ ಬೆರೆಯದಿರುವುದು, ಜನರಿಂದ ದೂರವಿರುವುದು, ಆಹಾರ ಸೇವನೆ ಮಾಡದಿರುವುದು, ನಿದ್ರಾಹೀನತೆ, ನಿದ್ರೆಯಲ್ಲಿ ಮಾತನಾಡುವುದು, ಹಲ್ಲು ಮಸೆಯುವುದು, ನಿದ್ರೆಯಲ್ಲಿ ಮೂತ್ರ ವಿಸರ್ಜಿಸುವುದು, ಕಲಿಕೆಯಲ್ಲಿ ಹಿಂದುಳಿಯುವುದು, ಪರೀಕ್ಷೆಯಲ್ಲಿ ಫೇಲಾಗುವುದು, ಹವ್ಯಾಸ– ಆಟೋಟಗಳಲ್ಲಿ ಭಾಗವಹಿಸದಿರುವುದು ಖಿನ್ನತೆಯ ಲಕ್ಷಣಗಳಾಗಿರಬಹುದು ಎಂದರು.
 
ಖಿನ್ನತೆಗೆ ಪರಿಹಾರ:  ಔಷಧಿಗಳು, ವಿದ್ಯುತ್‌ ಕಂಪನ ಚಿಕಿತ್ಸೆ, ಮನೋ ಚಿಕಿತ್ಸೆ– ಆಪ್ತ ಸಮಾಲೋಚನೆ ಇತ್ಯಾದಿ ಚಿಕಿತ್ಸಾ ವಿಧಾನಗಳು;  ವಿರಮಿಸುವ ಚಟುವಟಿಕೆಗಳು, ಯೋಗ  ಇತ್ಯಾದಿಗಳಿಂದ ಖಿನ್ನತೆ ಕಡಿಮೆ ಮಾಡಿಕೊಳ್ಳಬಹುದು ಎಂದು ಸಲಹೆ  ನೀಡಿದರು.
 
ಜಿಲ್ಲಾ ಕನ್ನಡ ವೈದ್ಯ ಸಾಹಿತ್ಯ ಪರಿಷತ್ತು ಕಾರ್ಯದರ್ಶಿ ಎಸ್‌.ಎಸ್‌.ಹಿರೇಮಠ ಅವರು ಪ್ರಸ್ತಾವಿಕವಾಗಿ ಮಾತನಾಡಿದರು. ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞೆ ಡಾ. ಅನ್ನಪೂರ್ಣ ಹೊಗಾಡೆ, ಸರ್ಕಾರಿ ಬಿ.ಇಡಿ ಕಾಲೇಜು ಪ್ರಾಚಾರ್ಯೆ ಅಮಿತಾ ಯರಗೋಳಕರ, ಕರ್ನಾಟಕ ರಾಜ್ಯ ಸರ್ಕಾರಿ ಫಾರ್ಮಾಸಿಸ್ಟ್‌ ಸಂಘದ ಅಧ್ಯಕ್ಷ ಬಿ.ಎಸ್‌.ದೇಸಾಯಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ ಕುಸುಮಾ, ಸಕ್ರಪ್ಪಗೌಡ ಬಿರಾದಾರ, ಎಸ್‌.ವಿ. ವಾಲಿ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.