ADVERTISEMENT

ರೈತರ ಧಿಕ್ಕರಿಸಿದ ಪ್ರಧಾನಿ ಮೋದಿ

ಸಿಪಿಐ(ಎಂ) ಸಮಾವೇಶದಲ್ಲಿ ಮಾರುತಿ ಮಾನ್ಪಡೆ ಆರೋಪ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2017, 9:33 IST
Last Updated 14 ಫೆಬ್ರುವರಿ 2017, 9:33 IST
ಚಿತ್ತಾಪುರದ ಭುವನೇಶ್ವರಿ ವೃತ್ತದ ಬಳಿ ಭಾರತ ಕಮ್ಯುನಿಸ್ಟ್ ಪಕ್ಷದಿಂದ (ಮಾರ್ಕ್ಸ್‌ವಾದಿ) ಶನಿವಾರ ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ವಿ.ಜಿ.ಕೆ ನಾಯರ್ ಅವರು ಮಾತನಾಡಿದರು
ಚಿತ್ತಾಪುರದ ಭುವನೇಶ್ವರಿ ವೃತ್ತದ ಬಳಿ ಭಾರತ ಕಮ್ಯುನಿಸ್ಟ್ ಪಕ್ಷದಿಂದ (ಮಾರ್ಕ್ಸ್‌ವಾದಿ) ಶನಿವಾರ ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ವಿ.ಜಿ.ಕೆ ನಾಯರ್ ಅವರು ಮಾತನಾಡಿದರು   
ಚಿತ್ತಾಪುರ: ಆರು ದಶಕ ಕೇಂದ್ರದಲ್ಲಿ ಆಳ್ವಿಕೆ ಮಾಡಿದ ಕಾಂಗ್ರೆಸ್ ದೇಶವನ್ನೇ ಹಾಳು ಮಾಡಿದೆ. ಈಗ ಪ್ರಧಾನಿ ಮೋದಿ ಅವರು ಚುನಾವಣೆಯಲ್ಲಿ ಅದಾನಿ ಹೆಸರಿನ ವಿಮಾನದಲ್ಲಿ ತಿರುಗಾಡಿ ಅವರ ಋಣ ತೀರಿಸಲು ವಿದೇಶಗಳಿಂದ ಬೇಳೆಕಾಳುಗಳನ್ನು ಖರೀದಿಸಲು ಅವರಿಗೆ ಅನುಮತಿ ನೀಡಿ ದೇಶದ ರೈತರನ್ನು ಸಂಪೂರ್ಣ ಕಡೆಗಣಿಸಿದ್ದಾರೆ ಎಂದು ಕರ್ನಾಟಕ ಪ್ರಾಂತ ರೈತಸಂಘದ ರಾಜ್ಯ ಅಧ್ಯಕ್ಷ ಮಾರುತಿ ಮಾನ್ಪಡೆ ಆಕ್ರೋಶ ವ್ಯಕ್ತಪಡಿಸಿದರು. 
 
ಪಟ್ಟಣದ ಭುವನೇಶ್ವರಿ ವೃತ್ತದ ಬಳಿ ಭಾರತ ಕಮ್ಯುನಿಸ್ಟ್ ಪಕ್ಷದಿಂದ (ಮಾರ್ಕ್ಸ್‌ವಾದಿ) ಶನಿವಾರ ಹಮ್ಮಿಕೊಂ ಡಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಮೋದಿ ಭಾಷಣಕ್ಕೆ ಮಾರುಹೋಗಿ ಮತದಾನ ಮಾಡಿದ ಬಡ ರೈತರಿಗೆ ಮೋದಿ ಮೋಸ ಮಾಡಿದ್ದಾರೆ. ದೇಶ ಹಾಳು ಮಾಡಿದ ಕಾಂಗ್ರೆಸ್‌ಗೆ ಬಂದಿರುವ ದುಃಸ್ಥಿತಿಯೆ ರೈತರನ್ನು ಧಿಕ್ಕರಿಸಿದ, ಕಡೆಗಣಿಸಿದ ಬಿಜೆಪಿಗೂ ಕಾದಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಕ್ಸಮರ ನಡೆಸಿದರು.
 
ಪ್ರಧಾನಿ ಮೋದಿ ಅವರು ದಿಢೀರ್‌ನೆ ₹1,000 ಮತ್ತು ₹500ರ ನೋಟು ಗಳನ್ನು ರದ್ದು ಮಾಡಿ ದೇಶದ ಆರ್ಥಿಕ ಪರಿಸ್ಥಿತಿಯನ್ನೆ ಹಾಳು ಮಾಡಿದ್ದಾರೆ. ಅವರ ಈ ನೀತಿ ದೇಶದ ಶ್ರೀಮಂತರನ್ನು ಮತ್ತಷ್ಟು ಶ್ರೀಮಂತರನ್ನಾಗಿಸಿ ಬಡವರನ್ನು ಮತ್ತಷ್ಟು ಬಡವರನ್ನಾಗಿ ಮಾಡುವುದಾಗಿದೆ. ಕಪ್ಪುಹಣದ ಹೆಸರಿನಲ್ಲಿ ದೇಶದ ಬಡವರ, ರೈತರ ಜೀವನ ದೊಂದಿಗೆ ಚೆಲ್ಲಾಟವಾಡಿ ಕಪ್ಪುಕುಳಗಳ ರಕ್ಷಣೆಗೆ ಮುಂದಾಗಿದ್ದಾರೆ. ಇದೇ ಅಲ್ವಾ ದೇಶಕ್ಕೆ ಒದಗಿ ಬಂದಿರುವ ‘ಅಚ್ಛೇ ದಿನ್’ ಎಂದು ವ್ಯಂಗವಾಡಿದರು.
 
ಸಿಪಿಐ(ಎಂ) ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ವಿ.ಜಿ.ಕೆ ನಾಯರ್‌ ಮಾತನಾಡಿ, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈತವಿರೋಧಿ ನೀತಿ ಅನುಸರಿಸಿ ಮತ್ತು ದೇಶದ ರೈತರನ್ನು ಕಡೆಗಣಿಸಿದೆ. ವಿದೇಶಗಳಿಂದ ಬೇಳೆ ಕಾಳುಗಳನ್ನು ಆಮದು ಮಾಡಿಕೊಂಡಿರುವುದು ದೇಶಕ್ಕೆ ಒದಗಿ ಬಂದಿರುವ ಬಹು ದೊಡ್ಡ ದುರಂತ ಎಂದು ಅವರು ಕೇಂದ್ರದ ಆಮದು ನೀತಿ ಕಟುವಾಗಿ ಟೀಕಿಸಿದರು. 
 
ಕೇಂದ್ರದ ಆಮದು ನೀತಿಯಿಂದ ವಿದೇಶಗಳಿಂದ ಖರೀದಿಸಿದ ಬೇಳೆ ಕಾಳುಗಳು ಮಾರುಕಟ್ಟೆಗೆ ಸರಬರಾಜು ಆಗಿ ಮಾರುಕಟ್ಟೆಯಲ್ಲಿ ತೊಗರಿ ಬೆಲೆ ಪಾತಾಳಕ್ಕೆ ಕುಸಿದಿದೆ. ರೈತರ ಬದುಕು ಅಧೋಗತಿಗೆ ತಳಲ್ಪಟ್ಟಿದೆ. ದೇಶದ ರೈತರ ಹಿತಕ್ಕೆ ವಿರುದ್ಧವಾಗಿ ಅನುಸರಿಸು ತ್ತಿರುವ ಆಮದು ನೀತಿಯನ್ನು ರದ್ದು ಮಾಡಿ ಬೇಳೆ ಕಾಳುಗಳನ್ನು ವಿದೇಶಗ ಳಿಂದ ಆಮದು ಮಾಡಿಕೊಳ್ಳುವುದನ್ನು ಬೀಡಬೇಕು ಎಂದು ಆಗ್ರಹಿಸಿದರು. 
 
ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಶರಣಬಸಪ್ಪ ಮಮಶೆಟ್ಟಿ ಮಾತನಾಡಿ ದರು. ತಾಲ್ಲೂಕು ಘಟಕದ ಕಾರ್ಯದರ್ಶಿ ಅಶೋಕ ಮ್ಯಾಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕರ್ನಾಟಕ ಪ್ರಾಂತ ರೈತಸಂಘದ ತಾಲ್ಲೂಕು ಘಟಕದ ಉಪಾಧ್ಯಕ್ಷ ರೇವಯ್ಯಸ್ವಾಮಿ ಕಾಳಗಿ, ಸಿಐಟಿಯು ತಾಲ್ಲೂಕು ಅಧ್ಯಕ್ಷೆ ಶೇಕಮ್ಮ ಸುಗ್ಗಾ ಇದ್ದರು. ಸಾಯಬಣ್ಣ ಗುಡುಬಾ ಸ್ವಾಗತಿಸಿದರು. ದೇವಮ್ಮ ಅನ್ನದಾನಿ ನಿರೂಪಿಸಿ, ವಂದಿಸಿದರು.
 
* ಚುನಾವಣೆಯಲ್ಲಿ ವಿಮಾನ ನೀಡಿ ಸಹಾಯ ಮಾಡಿದ ಆಪ್ತಮಿತ್ರ ಗೌತಮ್ ಅದಾನಿಗೆ ವಿದೇಶಗಳಿಂದ ಬೇಳೆಕಾಳುಗಳನ್ನು ಖರೀದಿಸಲು ಅನುಮತಿ ನೀಡಿ ಮೋದಿ ಅವರು ರೈತರನ್ನು ಶೋಷಿಸಿದ್ದಾರೆ.
–ವಿ.ಜಿ.ಕೆ ನಾಯರ್‌, ಸಿಪಿಐ(ಎಂ) ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.