ADVERTISEMENT

ರೈಲ್ವೆ ವಿಭಾಗೀಯ ಕಚೇರಿ ಆರಂಭಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 20 ಜುಲೈ 2017, 5:49 IST
Last Updated 20 ಜುಲೈ 2017, 5:49 IST

ಕಲಬುರ್ಗಿ: ಕಲಬುರ್ಗಿಯಲ್ಲಿ ರೈಲ್ವೆ ವಿಭಾಗೀಯ ಕಚೇರಿಯನ್ನು ಕೂಡಲೇ ಸ್ಥಾಪಿಸುವಂತೆ ಆಗ್ರಹಿಸಿ ಗುಲಬರ್ಗಾ ರೈಲ್ವೆ ವಿಭಾಗೀಯ ಹೋರಾಟ ಸಮಿತಿ ಸದಸ್ಯರು ಇಲ್ಲಿನ ರೈಲು ನಿಲ್ದಾಣದ ಮುಂಭಾಗದಲ್ಲಿ ಬುಧವಾರ ಧರಣಿ ನಡೆಸಿದರು.

ಕೇಂದ್ರ ಸರ್ಕಾರವು 2014ರ ಫೆಬ್ರುವರಿಯಲ್ಲೇ ಕಲಬುರ್ಗಿಗೆ ರೈಲ್ವೆವಿಭಾಗೀಯ ಕಚೇರಿಯನ್ನು ಮಂಜೂರು ಮಾಡಿದೆ. ಇದಕ್ಕಾಗಿ ಚಂದ್ರಶೇಖರ ಪಾಟೀಲ ಕ್ರೀಡಾಂಗಣದ ಬಳಿ 39 ಎಕರೆ ಜಮೀನನ್ನು ರೈಲ್ವೆ ಇಲಾಖೆಗೆ ಹಸ್ತಾಂತರಿಸಲಾಗಿದೆ.  ಅಂದು ರೈಲ್ವೆ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ₹10 ಕೋಟಿ ಅನುದಾನ ಬಿಡುಗಡೆ ಮಾಡಿದ್ದರು. ಆದಾಗ್ಯೂ ಇದುವರೆಗೂ ವಿಭಾಗೀಯ ಕಚೇರಿ ಆರಂಭವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಲಬುರ್ಗಿಯಲ್ಲಿ ರೈಲ್ವೆ ವಿಭಾಗೀಯ ಕಚೇರಿ ಆರಂಭವಾಗುವುದರಿಂದ 10 ರಿಂದ 12 ಸಾವಿರ ಜನರಿಗೆ ಉದ್ಯೋಗ ಸಿಗಲಿದೆ. ಎಲ್ಲಾ ಕಚೇರಿಗಳು ಇಲ್ಲೇ ಕಾರ್ಯಾರಂಭ ಮಾಡುವುದರಿಂದ ಆಡಳಿತಾತ್ಮಕ ಸಮಸ್ಯೆಗಳೂ ಬೇಗ ಬಗೆಹರಿಯುತ್ತವೆ. ಅಲ್ಲದೆ ವಾಡಿ, ರಾಯಚೂರು ಮತ್ತು ಸೊಲ್ಲಾಪುರ ಪ್ರಯಾಣಿಕರಿಗೆ ಮತ್ತಷ್ಟು ಅನುಕೂಲವಾಗುತ್ತದೆ. ಈ ಭಾಗದ ವಾಣಿಜ್ಯ ಚಟುವಟಿಕೆಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಆದ್ದರಿಂದ ಕೂಡಲೇ ವಿಭಾಗೀಯ ಕಚೇರಿ ಆರಂಭಿಸಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ADVERTISEMENT

ಹೋರಾಟ ಸಮಿತಿ ಅಧ್ಯಕ್ಷ ಅರುಣ ಕುಮಾರ ಪಾಟೀಲ, ಜಗನ್ನಾಥ ಸೂರ್ಯವಂಶಿ, ನಂದಕುಮಾರ ನಾಗಭುಜಂಗೆ, ಅಮೃತ ಪಾಟೀಲ, ನಾಗಲಿಂಗಯ್ಯ ಮಠಪತಿ, ಎಂಎಸ್. ಪಾಟೀಲ ನರಿಬೋಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.