ADVERTISEMENT

ಸದಸ್ಯರಿಂದ ಲಂಚಕ್ಕೆ ಬೇಡಿಕೆ: ಅಧಿಕಾರಿ ಆರೋಪ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2017, 6:46 IST
Last Updated 8 ಸೆಪ್ಟೆಂಬರ್ 2017, 6:46 IST

ಕಲಬುರ್ಗಿ: ‘ಸದಸ್ಯ ಸಿದ್ದಾರ್ಥ ಪಟ್ಟೇದಾರ ನಮ್ಮ ಸಿಬ್ಬಂದಿಯನ್ನು ಕೂಡಿ ಹಾಕಿ, ಹಣ ತಂದು ಕೊಡುವಂತೆ ಒತ್ತಡ ಹೇರಿದ್ದರು’ ಎಂದು ಪರಿಸರ ಎಂಜಿನಿಯರ್‌ ಸುಷ್ಮಾ ಸಾಗರ ಅವರು ಗುರುವಾರ ನಡೆದ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಆರೋಪಿಸಿದರು.

ಇದು ಸದಸ್ಯರು ಹಾಗೂ ಅಧಿಕಾರಿಗಳ ಮಧ್ಯೆ ಜಟಾಪಟಿಗೂ ಕಾರಣವಾಯಿತು. ಅಧಿಕಾರಿಗಳು ಅರ್ಧಗಂಟೆಗೂ ಹೆಚ್ಚು ಕಾಲ ಎದ್ದು ನಿಂತು ಪ್ರತಿಭಟಿಸಿದರೆ, ಸದಸ್ಯರೂ ಅದೇ ಮಾರ್ಗ ಅನುಸರಿಸಿದರು. ಸುಷ್ಮಾ ಅವರನ್ನು ಪಾಲಿಕೆಯ ಸೇವೆಯಿಂದ ಬಿಡುಗಡೆ ಮಾಡುವ ನಿರ್ಣಯವನ್ನು ಸಭೆ ಅಂಗೀಕರಿಸಿತು.

‘ಸಾರ್ವಜನಿಕರ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಹೇಳಲೂ ಆಗುತ್ತಿಲ್ಲ. ವಿನಾಕಾರಣ ಮೊಕದ್ದಮೆ ದಾಖಲಿಸುವ ಮೂಲಕ ಅಧಿಕಾರಿಗಳು ಸದಸ್ಯರಲ್ಲಿ ಭಯದ ವಾತಾವರಣ ನಿರ್ಮಿಸಿದ್ದಾರೆ’ ಎಂದು ಕೆಲ ಸದಸ್ಯರು ಸಭೆಯ ಆರಂಭದಲ್ಲಿ ಆರೋಪಿಸಿದರು.

ADVERTISEMENT

ಆಗ ಮಧ್ಯಪ್ರವೇಶಿಸಿದ ಆಯುಕ್ತ ಪಿ.ಸುನೀಲಕುಮಾರ್‌, ‘ಬುಧವಾರ ಒಬ್ಬ ಸದಸ್ಯರ ಮೇಲೆ ಮೊಕದ್ದಮೆ ದಾಖಲಿಸಿದ್ದಕ್ಕೆ ಹೀಗೆ ಸಭೆಯನ್ನು ತಪ್ಪು ದಾರಿಗೆ ಎಳೆಯಲಾಗುತ್ತಿದೆ. ನೀವು ಯಾರನ್ನು ಹೆದರಿಸುತ್ತಿದ್ದೀರಿ? ನಾವು ಹೆದರಿ ಕೆಲಸ ಮಾಡಬೇಕಾ? ನಮ್ಮ ಮಹಿಳಾ ಅಧಿಕಾರಿಗೆ ನಿಂದಿಸಿ, ಬೆದರಿಕೆ ಹಾಕಿದರೂ ನಾವು ಸುಮ್ಮನಿರಬೇಕಾ? ನಿಮಗೆ ಕೈಮುಗಿದು ಕೇಳ್ತೀನಿ, ಪ್ರಕರಣದ ವಿವರ ನೀಡಲು ಆ ಅಧಿಕಾರಿಗೆ ಅವಕಾಶ ನೀಡಿ’ ಎಂದರು.

‘ಸದಸ್ಯ ಸಿದ್ಧಾರ್ಥ ಪಟ್ಟೇದಾರ ಅವರು ಧೂಮೀಕರಣ ಮಾಡುವ ಸಿಬ್ಬಂದಿ ಮೇಲ್ವಿಚಾರಕರಿಬ್ಬರನ್ನು ಕೂಡಿ ಹಾಕಿದ್ದರು. ನೀವು ಅಥವಾ ನಿಮ್ಮ ಪರಿಸರ ಎಂಜಿನಿಯರ್‌ ಯಾರಾದರೂ ಸರಿ, ಗುತ್ತಿಗೆದಾರರಿಂದ ಹಣ ಇಸಿದು ಕೊಡಿ ಎನ್ನುತ್ತಿದ್ದಾರೆ. ಬೆದರಿಕೆ ಹಾಕಿದ್ದರಿಂದ ಅವರ ವಿರುದ್ಧ ಮೊಕದ್ದಮೆ ದಾಖಲಿಸಿದ್ದೇನೆ’ ಎಂದು ಸುಷ್ಮಾ ಹೇಳಿದರು.

‘ನಾನು ಪರಿಶಿಷ್ಟ ಜಾತಿಯವಳು ಎಂಬ ಕಾರಣಕ್ಕೂ ಹೀಗೆ ಮಾಡಲಾಗುತ್ತಿದೆ’ ಎಂದೂ ಅವರು ದೂರಿದರು.ಇದಕ್ಕೆ ಮೇಯರ್‌ ಮತ್ತು ಸದಸ್ಯರು ವಿರೋಧ ವ್ಯಕ್ತಪಡಿಸಿ, ಲಂಚ ಕೇಳಿದ ದಾಖಲೆ ಸಲ್ಲಿಸುವಂತೆ ಪಟ್ಟು ಹಿಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.