ADVERTISEMENT

ಸಾಮಾಜಿಕ ಬಹಿಷ್ಕಾರಕ್ಕೂ ಹೆದರದ ದಂಪತಿ

‘ಸಾವಿತ್ರಿಬಾಯಿ ಫುಲೆ ಜೀವನ ಸಾಧನೆ’ ವಿಶೇಷ ಉಪನ್ಯಾಸ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2017, 7:40 IST
Last Updated 2 ಫೆಬ್ರುವರಿ 2017, 7:40 IST
ಚಿತ್ತಾಪುರ: ದೇಶ ಕಂಡರಿಯದ ರೀತಿಯಲ್ಲಿ ಮಹಿಳಾ ಶಿಕ್ಷಣಕ್ಕೆ ನಾಂದಿ ಹಾಡಿದ, ಅಕ್ಷರ ಕ್ರಾಂತಿಯ ಹೊಸ ಇತಿಹಾಸ ರಚಿಸಿದ ಸಾವಿತ್ರಿಬಾಯಿ ಫುಲೆ ಹಾಗೂ ಜ್ಯೋತಿಬಾ ಫುಲೆ ಅವರು ಶಿಕ್ಷಣ ಕ್ಷೇತ್ರಕ್ಕೆ ಮಹತ್ತರ ಕೊಡುಗೆ ಸಲ್ಲಿಸಿದ್ದಾರೆ ಎಂದು ನಿವೃತ್ತ ಪ್ರಾಧ್ಯಾಪಕ ಡಾ. ಪ್ರಭು ಖಾನಾಪುರ ತಿಳಿಸಿದರು. 
 
ಪಟ್ಟಣದ ನಾಗಾವಿ ಶಿಕ್ಷಣ ಸಂಸ್ಥೆಯ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಹೈದರಾಬಾದ ಕರ್ನಾಟಕ ಸರ್ಕಾರಿ ಕಾಲೇಜು ಅಧ್ಯಾಪಕರ ಸಂಘದ ಆಶ್ರಯದಲ್ಲಿ ನಡೆದ ‘ಅಕ್ಷರದ ಅವ್ವ ಸಾವಿತ್ರಿಬಾಯಿ ಫುಲೆ ಅವರ ಜೀವನ ಹಾಗೂ ಸಾಧನೆ’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು. 
 
ಪುರೋಹಿತಶಾಹಿ ವರ್ಗದ ದಬ್ಬಾಳಿಕೆ, ದೌರ್ಜನ್ಯ, ಕೊಲೆ ಬೆದರಿಕೆ, ಅವಮಾನ, ಮಾನಸಿಕ ಹಿಂಸೆ, ಶೋಷಣೆ ಮತ್ತು ಸಾಮಾಜಿಕ ಬಹಿಷ್ಕಾರದ ಬೆದರಿಕೆಗೂ ಹೆದರದೆ ಶೈಕ್ಷಣಿಕ ಕ್ರಾಂತಿ ಮಾಡಿದ ಸಾವಿತ್ರಿಬಾಯಿ ಫುಲೆ ಮತ್ತು ಜ್ಯೋತಿಬಾ ಫುಲೆ ಮಹಾನುಭಾವರು. ಅವರು ಎಲ್ಲರಿಗೂ ಸ್ಫೂರ್ತಿ ಮತ್ತು ಮಾದರಿ ಎಂದು ಅವರು ತಿಳಿಸಿದರು. 
 
ಹೆಣ್ಣು ಮಕ್ಕಳು ಶಿಕ್ಷಣ ಪಡೆದರೆ ಅಥವಾ ಶಾಲೆಗೆ ತೆರಳಿದರೆ ಅವರ ಗಂಡಂದಿರ ಸಾವು ಸಂಭವಿಸುತ್ತದೆ. ಸಮಾಜದಲ್ಲಿ ಅನಾಚಾರ, ಅನೈತಿಕತೆ ಹೆಚ್ಚಾಗುತ್ತವೆ. ಮನೆಯ, ಸಮಾಜದ ಘನತೆ, ಗೌರವ ಹಾಳಾಗುತ್ತದೆ. ಅವರಿಗೆ ಶಿಕ್ಷಣ ಪಡೆಯುವ ಹಕ್ಕಿಲ್ಲ ಎಂದು ವಿರೋಧಿಸುತ್ತಿದ್ದ ಪುರೋಹಿತಶಾಹಿಗಳ ವಿರೋಧ ಲೆಕ್ಕಿಸದೇ ಅವರಿಬ್ಬರೂ ಮಕ್ಕಳಿಗೆ ಶಿಕ್ಷಣ ನೀಡಿದರು ಎಂದು ತಿಳಿಸಿದರು. 
 
ಶಾಲೆಗೆ ಹೋಗದೆ ಶಿಕ್ಷಣ ಪಡೆಯದೆ ಗಂಡನಿಂದ ಅಕ್ಷರ ಜ್ಞಾನ ಪಡೆದು ಮಹಿಳೆಯರ ಶಿಕ್ಷಣಕ್ಕೆ ಹೊಸ ಕ್ರಾಂತಿ ಮಾಡಿದ ಮೊದಲ ಶಿಕ್ಷಕಿ ಹಾಗೂ ಮಹಾರಾಷ್ಟ್ರದ ಮೊದಲ ಕವಿಯಿತ್ರಿ ಸಾವಿತ್ರಿಬಾಯಿ. ಗಂಡ ಸತ್ತ ನಂತರ ಹೆಂಡತಿ ತಲೆ ಬೋಳಿಸಬೇಕು ಎನ್ನುವ ಹೀನ ಪುರೋಹಿತಶಾಹಿ ಸಂಪ್ರದಾಯಕ್ಕೆ, ಸಂಸ್ಕೃತಿಗೆ ಕಡಿವಾಣ ಹಾಕಿದ ಮಹಾನ್‌ ಹೋರಾಟಗಾರ್ತಿ. ಹಿಂದೂ ಧಾರ್ಮಿಕ ಜೀವನ ಪದ್ಧತಿಯನ್ನು ಧಿಕ್ಕರಿಸಿದ ಸಾವಿತ್ರಿಬಾಯಿ ತಮ್ಮ ಗಂಡನ ಚಿತೆಗೆ ಬೆಂಕಿಯಿಟ್ಟ ಮೊದಲ ಮಹಿಳೆ ಎಂದು ಅವರು ಹೇಳಿದರು.
 
ಸಂಘದ ಅಧ್ಯಕ್ಷ ಡಾ.ಶರಣಪ್ಪ ಸೈದಾಪುರ ಮಾತನಾಡಿ, ಚಳವಳಿ ಮತ್ತು ಚಿಂತನೆ ಸಮನಾಗಿ ನಡೆಯಬೇಕು. ಸಮಸಮಾಜ ಸಿದ್ಧಾಂತಗಳ ವಿರೋಧಿ ಸಂಕೋಲೆಗಳಿಂದ ಸಮಾಜವು ವಿಮೋಚನೆ ಪಡೆದಾಗ ಮಾತ್ರ ಸುಂದರ ಸಮಾಜದ ನಿರ್ಮಾಣ ಸಾಧ್ಯ. ಅದಕ್ಕಾಗಿಯೆ ತಮ್ಮ ಬದುಕು ಸವೆಸಿದ ಸಾವಿತ್ರಿಬಾಯಿ ಫುಲೆ ಅವರ ಸಿದ್ದಾಂತ, ಆದರ್ಶ, ನೀತಿ, ತತ್ವಗಳನ್ನು ಇಂದಿನ ವಿದ್ಯಾರ್ಥಿಗಳು, ಯುವಕರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
 
ನಾಗಾವಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಚಂದ್ರಶೇಖರ ಕಾಂತಾ, ಕಾಲೇಜಿನ ಪ್ರಾಂಶುಪಾಲ ವೀರಾರೆಡ್ಡಿ ಶೇರಿ, ಸರೋಜಾ. ತಿಪ್ಪಣ್ಣ ದೊಡ್ಡಮನಿ ಮತ್ತು ಜ್ಯೋತಿ ಬಂಡಿ ಇದ್ದರು. 
 
**
ದೇಶದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ, ಜ್ಯೋತಿಬಾ ಫುಲೆ ದಂಪತಿ ಕೈಗೊಂಡ ಶಿಕ್ಷಣ ಕ್ರಾಂತಿ ಶೋಷಿತ ಸಮುದಾಯದವರ ಬದುಕಿನ ಹಣೆಬರಹವನ್ನೆ ಬದಲಿಸಿತು.
-ಡಾ.ಶರಣಪ್ಪ ಸೈದಾಪುರ,
ಅಧ್ಯಕ್ಷ, ಹೈ.ಕ ಅಧ್ಯಾಪಕರ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.