ADVERTISEMENT

ಸೈನಿಕರೇ ದೇಶದ ನಿಜವಾದ ಆಸ್ತಿ

​ಪ್ರಜಾವಾಣಿ ವಾರ್ತೆ
Published 27 ಜುಲೈ 2017, 5:32 IST
Last Updated 27 ಜುಲೈ 2017, 5:32 IST

ಕಲಬುರ್ಗಿ: ‘ಹಗಲು–ರಾತ್ರಿ ದೇಶದ ಗಡಿ ಕಾಯುತ್ತಿರುವ ಸೈನಿಕರೇ ಈ ದೇಶದ ನಿಜವಾದ ಆಸ್ತಿ’ ಎಂದು ಯುವ ಬ್ರಿಗೇಡ್ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಇಲ್ಲಿನ ಕಲ್ಯಾಣಿ ಕಲ್ಯಾಣ ಮಂಟಪದಲ್ಲಿ ಯುವ ಬ್ರಿಗೇಡ್ ಜಿಲ್ಲಾ ಘಟಕದಿಂದ ಬುಧವಾರ ಏರ್ಪಡಿಸಿದ್ದ ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಯೋಧರು ಸಂಬಳಕ್ಕಾಗಿ ದುಡಿಯುತ್ತಿಲ್ಲ. ದೇಶ ರಕ್ಷಣೆಯೇ ಅವರ ಗುರಿಯಾಗಿದೆ. ಎಷ್ಟೋ ಬಾರಿ ಅವರಿಗೆ ರಜೆ ಸಿಗುವುದಿಲ್ಲ. ಆದಾಗ್ಯೂ ಕುಟುಂಬದ ಸದಸ್ಯರ ಬಗ್ಗೆ ಯೋಚಿಸದೇ ಯುದ್ಧಕ್ಕೆ ಸದಾ ಸಿದ್ಧರಾಗಿರುತ್ತಾರೆ. ದೇಶ ರಕ್ಷಣೆಗಾಗಿ ತಮ್ಮ ಪ್ರಾಣವನ್ನು ಮುಡಿಪಾಗಿಡುತ್ತಾರೆ. ಹೀಗಾಗಿ ಪ್ರತಿಯೊಬ್ಬರೂ ಸೈನಿಕರ ಬಗ್ಗೆ ಗೌರವ ಭಾವನೆ ಹೊಂದಬೇಕು’ ಎಂದು ಹೇಳಿದರು.

‘1962ರಲ್ಲಿ ಚೀನಾ ಭಾರತದ ಮೇಲೆ ನೇರವಾಗಿ ಯುದ್ಧ ಮಾಡಿತ್ತು. ಆದರೆ ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಭಾರತೀಯ ಸೈನ್ಯ ಸಶಕ್ತವಾಗಿದ್ದು, ಎಲ್ಲ ಬಗೆಯ ಆಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದೆ. ಅಲ್ಲದೆ ಜಗತ್ತಿನ ಬೇರೆ ದೇಶಗಳ ಜತೆ ಉತ್ತಮ ಸಂಬಂಧ ಹೊಂದಿದೆ. ಚೀನಾ ಭಾರತದ ವಿರುದ್ಧ ಯುದ್ಧ ಆರಂಭಿಸಿದರೆ ಎಲ್ಲ ರಾಷ್ಟ್ರಗಳು ಭಾರತಕ್ಕೆ ಬೆಂಬಲವಾಗಿ ನಿಲ್ಲುತ್ತವೆ’ ಎಂದು ತಿಳಿಸಿದರು.

ADVERTISEMENT

ನಿವೃತ್ತ ಯೋಧ ಶಾಂತಯ್ಯಸ್ವಾಮಿ ಮಾತನಾಡಿ, ‘ನನಗೆ ಭಾಷಣ ಮಾಡಲು ಬರುವುದಿಲ್ಲ, ಆದರೆ ಯುದ್ಧ ಮಾಡಲು ಬರುತ್ತದೆ. ಶತೃಗಳ ಜತೆ ಹೋರಾಟ ಮಾಡುವುದು ಹೆಮ್ಮೆಯ ವಿಷಯ. 1962ರ ಭಾರತ–ಚೀನಾ ಯುದ್ಧದಲ್ಲಿ ನಾನು ಭಾಗವಹಿಸಿದ್ದೆ’ ಎಂದು ಹೇಳಿದರು. ಮೃತ ಯೋಧರ ಪತ್ನಿಯರಾದ ಸುಮಿತ್ರಾದೇವಿ ಯಶವಂತ್ ಕೋಲಕಾರ, ಲಕ್ಷ್ಮಿ ಭರತ್ ಮಸ್ಕಿ ಹಾಗೂ ಮಹಾದೇವಿ ಹನುಮಂತಪ್ಪ ಕೊಪ್ಪದ ಅವರನ್ನು ಸನ್ಮಾನಿಸಲಾಯಿತು.

ರಾಜಯೋಗಿನಿ ಶಿವಲೀಲಾ ಸಾನ್ನಿಧ್ಯ ವಹಿಸಿದ್ದರು. ಸ್ವಾತಂತ್ರ್ಯ ಹೋರಾಟಾರ ವಿದ್ಯಾಧರ ಗುರೂಜಿ, ನಿವೃತ್ತ ಯೋಧರಾದ ಬಸವರಾಜ, ಸೂರ್ಯಕಾಂತ ಸಂಗಾಣಿ, ಓಂಕಾರ ರೆಡ್ಡಿ, ಮಹಾದೇವಪ್ಪ, ರತನ್‌ಚಂದ, ನಾಗಬಸಯ್ಯಸ್ವಾಮಿ, ಬಸವರಾಜ ನಾಗೂರೆ, ನೀಲಕಂಠಯ್ಯ, ಅಮೃತರಾವ್ ಡೊಂಗರಗಾಂವ, ಗೋರಕನಾಥ, ಮಲ್ಲಿಕಾರ್ಜುನ ಮಡಿವಾಳ, ರಾಮಪ್ಪ ನೀರಹುಗ್ಗಿ, ಶಿವಶರಣ, ಜಗನ್ನಾಥ, ಆರ್.ಎಸ್.ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.