ADVERTISEMENT

ಸೌಲಭ್ಯ ವಂಚಿತ ಅಶೋಕನಗರ

​ಪ್ರಜಾವಾಣಿ ವಾರ್ತೆ
Published 23 ಮೇ 2017, 6:53 IST
Last Updated 23 ಮೇ 2017, 6:53 IST

ಕಾಳಗಿ: ಮಳೆಗಾಲದಲ್ಲಿ ಇಡೀ ಊರನ್ನು ಸುತ್ತುವರೆಯುವ ಹಳ್ಳದ ನೀರಿಗೆ ರೋಸಿ ಹೋಗಿದ್ದ ಚಿತ್ತಾಪುರ ತಾಲ್ಲೂಕಿನ ಬೆಣ್ಣೂರ ಕೆ. ಗ್ರಾಮಸ್ಥರಿಗೆ ಪರ್ಯಾಯ ನಿರ್ಮಿಸಲಾದ ಅಶೋಕನಗರ ಜನವಸತಿ ಕೇಂದ್ರವಾಗಿ ಅರ್ಧ ಶತಮಾನವಾದರು ಇನ್ನು ಸಮರ್ಪಕವಾದ ಸೌಲಭ್ಯ ಸಿಗದೆ ಜನರು ಪರದಾಡುವಂತಾಗಿದೆ.

ಕುರಿಕೋಟಾ, ನಾಗೂರ, ಹೇರೂರ, ಜೀವನ ಮಾರಡಗಿ, ಹೆಬ್ಬಾಳ ಮಾರ್ಗವಾಗಿ ಹರಿದುಬರುವ ಹಳ್ಳದ ನೀರು (ಈಗಿನ ಬೆಣ್ಣೆತೊರಾ ಜಲಾಶಯ ನೀರು) ಪ್ರತಿವರ್ಷ ಬೆಣ್ಣೂರ ಕೆ. ಗ್ರಾಮ ಪ್ರವೇಶಿಸಿ ಮುಂದಕ್ಕೆ ಹರಿದು ಹೋಗುವುದರ ಪರಿಣಾಮ ಮನೆ ಬಿಟ್ಟು ಹೆಬ್ಬಾಳ ಕ್ರಾಸ್ (ಅಶೋಕನಗರ) ಸೇರಿಕೊಂಡ ಜನತೆಗೆ ಸರ್ಕಾರದ ಸವಲತ್ತು ಮರೀಚಿಕೆ ಆಗಿದೆ.

ಅಂದಿನ ಮೈಸೂರು ರಾಜ್ಯದ ಲೋಕೋಪಯೋಗಿ ಇಲಾಖೆ ಸಚಿವರಾಗಿದ್ದ ವೀರೇಂದ್ರ ಪಾಟೀಲ್ 1967ರಲ್ಲಿ ಹೆಬ್ಬಾಳ ಕ್ರಾಸ್‌ನಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ತೆರೆಯುವ ಮೂಲಕ ‘ಅಶೋಕನಗರ’ಕ್ಕೆ ಶಂಕು ಸ್ಥಾಪನೆ ಮಾಡಿದರು. ಅಂದಿನಿಂದ ಬೆಣ್ಣೂರ ಕೆ. ಗ್ರಾಮಸ್ಥರು ಒಬ್ಬೊಬ್ಬರಾಗಿ ಈ ‘ಅಶೋಕನಗರ’ವನ್ನು  ಗ್ರಾಮವಾಗಿ ಮಾಡಿಕೊಂಡು ಹಳ್ಳದ ದಂಡೆಯ ಬೆಣ್ಣೂರ ಕೆ. ಗ್ರಾಮವನ್ನು ಸಂಪೂರ್ಣವಾಗಿ ಖಾಲಿ ಮಾಡಿದರು.

ADVERTISEMENT

‘ಮನೆ, ಮಠ ಬಿಟ್ಟು ಸುರಕ್ಷಿತ ಸ್ಥಳ ಅಶೋಕನಗರಕ್ಕೆ ಬಂದು ನೆಲೆಸಿದ ಜನತೆಗೆ ಸರ್ಕಾರದಿಂದ ಸಹಾಯಧನ ಇನ್ನು ಸಿಕ್ಕಿಲ್ಲ. ಹಣ ಇದ್ದವರು ಜಾಗ ಖರೀದಿಸಿ ಮನೆ ಕಟ್ಟಿಕೊಂಡಿದ್ದಾರೆ. ಬಡವರು ಬಾಡಿಗೆ ಜಾಗದಲ್ಲಿ ಟೀನ್‌ ಶೆಡ್‌ ಹಾಕಿಕೊಂಡು ಜೀವನ ಸಾಗಿಸುತ್ತಿದ್ದಾರೆ’ ಎಂದು ಯುವ ಮುಖಂಡ ಶಾಂತಕುಮಾರ ಪಾಟೀಲ ಹೇಳುತ್ತಾರೆ.

ಈ ಊರಿಗೆ ಹೆಸರಿಗಷ್ಟೇ ಅಶೋಕನಗರ ಎಂದು ಹೇಳಲಾಗುತ್ತಿದೆ (ಶಾಲೆ ಹೆಸರು ಮಾತ್ರ ಅಶೋಕನಗರ (ಕೋರವಾರ) ಎಂತಿದೆ.) ಉಳಿದ ಎಲ್ಲವು ಬೆಣ್ಣೂರ ಕೆ. ಎಂತಲೇ ದಾಖಲೆಯಲ್ಲಿದೆ. ಇಲ್ಲಿ 265ಕ್ಕೂ ಹೆಚ್ಚು ಮನೆಗಳು, 900ಕ್ಕೂ ಹೆಚ್ಚಿನ ಮತದಾರರು ಇದ್ದು, ಗ್ರಾಮಾಡಳಿತದ ಕೇಂದ್ರಸ್ಥಾನ ಗೋಟೂರ. ಇಬ್ಬರು ಗ್ರಾಮ ಪಂಚಾಯಿತಿ ಸದಸ್ಯರು ಇದ್ದಾರೆ.

ಊರಿನಲ್ಲಿ ಅನೇಕ ವರ್ಷಗಳ ಹಿಂದೆ ನಿರ್ಮಿಸಲಾದ ಪಶು ಚಿಕಿತ್ಸಾಲಯದ ಕಟ್ಟಡ ಸಿಬ್ಬಂದಿ ಕಾಣದೆ ಹಾಳುಬಿದ್ದಿದೆ. ಆದರಿಂದ  ಜಾನುವಾರುಗಳಿಗೆ 5–8 ಕಿ.ಮೀ ದೂರದ ಕಾಳಗಿ, ಹೆಬ್ಬಾಳ ಪಶು ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಕೊಡಿಸಬೇಕು ಎನ್ನುತ್ತಾರೆ ನಾಗರಿಕರು.

4 ಕಿ.ಮೀ ದೂರದ ಹೆಬ್ಬಾಳ, 3 ಕಿ.ಮೀ ದೂರದ ಕೋರವಾರ ಮತ್ತು 8 ಕಿ.ಮೀ ದೂರದಲ್ಲಿರುವ ಕಾಳಗಿಯಲ್ಲಿ ಸಾರ್ವಜನಿಕ ಆಸ್ಪತ್ರೆ ಇದೆ.  ಆದರೆ, ಈ ಜನತೆಗೆ 16ಕಿ.ಮೀ ದೂರದ ಕಲ್ಲಹಿಪ್ಪರ್ಗಾ ಪ್ರಾಥಮಿಕ ಆರೋಗ್ಯ ಕೇಂದ್ರದ ಗಂಟು ಹಾಕಲಾಗಿದೆ. ಇಲ್ಲಿಗೆ ಹೋಗಲು ಸರಿಯಾದ ರಸ್ತೆ, ಬಸ್ಸಿನ ಸೌಕರ್ಯ ಇಲ್ಲದೆ ಗರ್ಭಿಣಿ ಮಹಿಳೆಯರು ಹಾಗೂ ತುರ್ತು ಚಿಕಿತ್ಸೆ ರೋಗಿಗಳ ಪಾಡು ಹೇಳತೀರದು.

‘ಇಲ್ಲಿನ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಕಾಣಲು ಮತ್ತು ಪಡಿತರ ಆಹಾರ ಧಾನ್ಯ ಪಡೆಯಲು 2.5ಕಿ.ಮೀ ದೂರದ ಗೋಟೂರ ಗ್ರಾಮಕ್ಕೆ ಹೋಗಬೇಕಿದೆ’ ಎನ್ನುತ್ತಾರೆ ನಿವಾಸಿ ಅಣ್ಣರಾವ ಬಿರಾದಾರ. ‘ಕುಡಿಯುವ ನೀರಿಗೆ ಕೊರತೆಯಿಲ್ಲ, ಆದರೆ, ನೀರು ಪೂರೈಸುವ ಕೊಳವೆ ಬಾವಿಯ ಗುಮ್ಮಿಯ ಸುತ್ತಲಿನ ನಿರ್ವಹಣೆ ಕೊರತೆಗೆ ಕೆಸರು, ಮುಳ್ಳಿನ ಗಿಡಗಂಟಿ ಹರಡಿಕೊಂಡು ಗಲೀಜು ನಿರ್ಮಾಣವಾಗಿದೆ. ಪ್ರೋತ್ಸಾಹ ಧನ ವಿತರಣೆಯಲ್ಲಿ ಗ್ರಾಮಾಡಳಿತ ತೊಂದರೆ ನೀಡುತ್ತದೆ ಎಂಬ ಉದ್ದೇಶದಿಂದ ವೈಯಕ್ತಿಕ ಶೌಚಾಲಯಗಳ ನಿರ್ಮಾಣಕ್ಕೆ ಸ್ಥಳೀಯರು ಮುಂದಾಗುತ್ತಿಲ್ಲ ಎನ್ನುತ್ತಾರೆ ನಿವಾಸಿ ಜಗನ್ನಾಥ ಜಾದವ್‌.

ಊರಿನ ತುಂಬೆಲ್ಲ ಒಳಚರಂಡಿ, ಸಿಸಿ ರಸ್ತೆ  ಹಾಗೂ ಆರೋಗ್ಯ ಇಲಾಖೆಯ ಘಟಕ ತೆರೆಯುವಂತೆ ಗ್ರಾಮಸ್ಥ ಕೃಷ್ಣ ಕಟ್ಟಿಮನಿ ಆಗ್ರಹಿಸಿದ್ದಾರೆ. ಕೂಡಲೇ ಸರ್ಕಾರದ ಎಲ್ಲ ದಾಖಲೆಗಳಲ್ಲಿ ಬೆಣ್ಣೂರ ಕೆ. ಬದಲಾಗಿ ಅಶೋಕನಗರ ಎಂದು ನಮೂದಿಸಿ ಜನವಲಯದಲ್ಲಿ ಸೃಷ್ಟಿಯಾಗಿರುವ ಗೊಂದಲವನ್ನು ನಿವಾರಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
 

* * 

ಐವತ್ತು ವರ್ಷ ಉರುಳಿದರು ಮನೆ ಕಳೆದುಕೊಂಡವರಿಗೆ ಸರ್ಕಾರದಿಂದ ಇನ್ನೂ ಸಹಾಯಧನ ಸಿಕ್ಕಿಲ್ಲ
ಶಾಂತಕುಮಾರ ಪಾಟೀಲ
ಯುವ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.