ADVERTISEMENT

‘ಸೌಹಾರ್ದ ಸಾರಿದ ಕುವೆಂಪು ಬದುಕು ಆದರ್ಶ’

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2017, 9:04 IST
Last Updated 30 ಡಿಸೆಂಬರ್ 2017, 9:04 IST

ಕಲಬುರ್ಗಿ: ರಾಷ್ಟ್ರಕವಿ ಕುವೆಂಪು ಅವರ ವಿಚಾರಪ್ರೇರಕ ಕೃತಿಗಳನ್ನು ಓದಿ, ಅರ್ಥೈಸಿಕೊಂಡು ಅದರಲ್ಲಿನ ಅಂಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಲ್ಲಿ ಯುವಜನರು ಉತ್ತಮ ಬದುಕು ಕಟ್ಟಿಕೊಳ್ಳಬಹುದು ಎಂದು ಹಿರಿಯ ಸಾಹಿತಿ ಡಾ.ಸ್ವಾಮಿರಾವ ಕುಲಕರ್ಣಿ ಅಭಿಪ್ರಾಯಪಟ್ಟರು.

ರಾಷ್ಟ್ರಕವಿ ಕುವೆಂಪು ಜನ್ಮದಿನದ ಪ್ರಯುಕ್ತ ಜಿಲ್ಲಾಡಳಿತದ ವತಿಯಿಂದ ನಗರದ ಎಸ್‌.ಎಂ.ಪಂಡಿತ ರಂಗಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ‘ವಿಶ್ವಮಾನವ ಸಂದೇಶ ಸಾರಿದ ಕುವೆಂಪು ಅವರ ಕೃತಿಗಳು ಯುವಜನರಿಗೆ ಸದಾ ಸ್ಫೂರ್ತಿದಾಯಕ’ ಎಂದರು.

‘ಕುವೆಂಪು ಅವರು ರಾಮಾಯಣ ದರ್ಶನಂ ಎಂಬ ಮಹತ್ವದ ಕೃತಿಯಲ್ಲದೇ ಪರಿಸರ, ವಿಜ್ಞಾನ, ಸಮಾನತೆ ಮತ್ತು ಸೌಹಾರ್ದದ ಅಂಶಗಳುಳ್ಳ ಕೃತಿಗಳನ್ನು ರಚಿಸಿದರು. ಜಾತಿ, ಧರ್ಮ ಮುಂತಾದ ಕಟ್ಟುಪಾಡುಗಳಿಲ್ಲದ ಸಮಾಜ ಹೇಗೆ ಕಟ್ಟಬೇಕು ಎಂಬುದನ್ನು ಕೃತಿಗಳ ಮೂಲಕ ತಿಳಿಯಪಡಿಸಿದರು’ ಎಂದು ಅವರು ಸ್ಮರಿಸಿದರು.

ADVERTISEMENT

‘ಹೈದರಾಬಾದ್‌ ಕರ್ನಾಟಕ ಪ್ರದೇಶ ವ್ಯಾಪ್ತಿಯ ಯುವಜನರಲ್ಲಿ ಇತ್ತೀಚಿನ ದಿನಗಳಲ್ಲಿ ಆತ್ಮವಿಶ್ವಾಸ, ಧೈರ್ಯ ಮತ್ತು ಛಲ ಕಡಿಮೆಯಾಗುತ್ತಿದೆ. ಅವರಲ್ಲಿ ಈ ನಿರಾಶಭಾವ ಮೂಡುತ್ತಿರುವುದು ಬೇಸರದ ಸಂಗತಿ’ ಎಂದು ಅವರು ವಿಷಾದಿಸಿದರು.

‘ನಿರ್ದಿಷ್ಟ ಗುರಿ ತಲುಪುವ ಛಲದಿಂದ ಮುನ್ನಡೆದಲ್ಲಿ, ಯಾರಿಗೂ ಯಾವುದೆ ರೀತಿಯ ಅಡ್ಡಿ ಆತಂಕ ತಲೆದೋರುವುದಿಲ್ಲ. ಯಾವುದೇ ಜಾತಿಯಾಗಿದ್ದರೂ ಅಥವಾ ಕುಗ್ರಾಮದ ನಿವಾಸಿಯಾಗಿದ್ದರೂ ಆ ವ್ಯಕ್ತಿಯೊಳಗಿನ ಪ್ರತಿಭೆ ಮತ್ತು ಛಲ ಸಾಧನೆಯ ಪಥದತ್ತ ಕರೆದೊಯ್ಯುತ್ತದೆ. ಅದಕ್ಕೆ ಬದ್ಧತೆ ಮತ್ತು ಪರಿಶ್ರಮ ಮುಖ್ಯ’ ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಮಾತನಾಡಿ, ‘ಸೌಹಾರ್ದ, ಭಾತೃತ್ವಕ್ಕೆ ಹೆಚ್ಚಿನ ಒತ್ತು ನೀಡಿದ ಕುವೆಂಪು ಅವರ ವೈಚಾರಿಕ ಚಿಂತನೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರತಿಯೊಬ್ಬರು ಪ್ರಯತ್ನಿಸಬೇಕು’ ಎಂದರು.

‘ಕುವೆಂಪು ಅವರು ನುಡಿದಂತೆ ನಡೆದರು. ಕೃತಿಗಳಲ್ಲಿ ಬರೆದಿದ್ದನ್ನು ತಮ್ಮ ಜೀವನದಲ್ಲಿ ಪಾಲಿಸಿದರು. ಪ್ರಾಮಾಣಿಕತೆ ಮತ್ತು ಸರಳತೆ ರೂಢಿಸಿ
ಕೊಂಡ ಅವರು ಎಲ್ಲರಲ್ಲೂ ಪ್ರೀತಿ ಮತ್ತು ಕರುಣೆ ಬಯಸಿದರು. ಮನುಷ್ಯತ್ವದಲ್ಲಿ ನಂಬಿಕೆ ಹೊಂದಿದ್ದ ಅವರು ವಿಶ್ವಮಾನವನಾಗಿ ರೂಪುಗೊಳ್ಳಲು ಪ್ರೇರೇಪಿಸಿದರು’ ಎಂದು ಸ್ಮರಿಸಿದರು.

‘ವಿಶ್ವಮಾನವ ಮತ್ತು ಸಮಾನತೆಯ ಸಂದೇಶ ಬೋಧಿಸಿ, ಪಾಲಿಸಿದವರಲ್ಲಿ ಗೌತಮ ಬುದ್ಧ ಮೊದಲಿಗರು. ಮಹನೀಯರಾದ ಬಸವಣ್ಣ, ಪುರಂದರದಾಸ, ಕನಕದಾಸ ಮುಂತಾದವರ ವಚನಗಳು, ದಾಸರಪದಗಳು ಈಗಲೂ ಪ್ರಸ್ತುತ. ಜೀವನದಲ್ಲಿ ಅನುಭವಿಸಿದ್ದನ್ನು ಅವರು ಬರಹದಲ್ಲಿ ವ್ಯಕ್ತಪಡಿಸಿದ್ದು, ಅವು ಈಗಲೂ ಪೂರಕ’ ಎಂದು ತಿಳಿಸಿದರು.

ಇದಕ್ಕೂ ಮುನ್ನ ಗಾಯಕರು ಮತ್ತು ವಿದ್ಯಾರ್ಥಿಗಳು ಕುವೆಂಪು ರಚಿತ ಗೀತೆಗಳನ್ನು ಹಾಡಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಹಣಮಂತ ಮಾಲಾಜಿ, ಕರ್ನಾಟಕ ತೊಗರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಭಾಗಣ್ಣಗೌಡ ಪಾಟೀಲ ಸಂಕನೂರು, ಮೇಯರ್ ಶರಣಕುಮಾರ ಮೋದಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಡಿ.ಕಲಬರಗಿ,  ತಹಶೀಲ್ದಾರ್ ಪ್ರಕಾಶ ಚಿಂಚೋಳಿಕರ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.