ADVERTISEMENT

ಹಬ್ಬದ ಮಾರನೇ ದಿನವೂ ಸಡಗರ, ಸಂಭ್ರಮ

ಮುಂದುವರಿದ ಈದ್‌ ಉಲ್‌ ಫಿತ್ರ್‌ ಸಂಭ್ರಮ; ಕುಟುಂಬದೊಂದಿಗೆ ಸಾಮೂಹಿಕ ಭೋಜನ, ಆಟ, ಹಾಡು, ಹರಟೆ

ಸಂತೋಷ ಈ.ಚಿನಗುಡಿ
Published 18 ಜೂನ್ 2018, 5:20 IST
Last Updated 18 ಜೂನ್ 2018, 5:20 IST
ಕಲಬುರ್ಗಿಯ ಸಾರ್ವಜನಿಕ ಉದ್ಯಾನದಲ್ಲಿ ಭಾನುವಾರ ಮಹಿಳೆಯರು ಕುಟುಂಬ ಸಮೇತ ಐಸ್‌ಕ್ರೀಂ ಸವಿದರು
ಕಲಬುರ್ಗಿಯ ಸಾರ್ವಜನಿಕ ಉದ್ಯಾನದಲ್ಲಿ ಭಾನುವಾರ ಮಹಿಳೆಯರು ಕುಟುಂಬ ಸಮೇತ ಐಸ್‌ಕ್ರೀಂ ಸವಿದರು   

ಕಲಬುರ್ಗಿ: ಅರಳಿನಿಂತ ಹೂಗಳು, ನಳನಳಿಸುವ ಎಲೆಗಳು, ಹಸಿರು ಹುಲ್ಲುಹಾಸು ಸೇರಿದಂತೆ ಎಲ್ಲೆಡೆಯೂ ಅತ್ತರ್‌ನ ಪರಿಮಳ. ಒಂದೆಡೆ ಮಕ್ಕಳ ಆಟ, ಇನ್ನೊಂದೆಡೆ ಹಿರಿಯರ ಭೋಜನ ಕೂಟ, ವಯಸ್ಕರ ಲೋಕಾಭಿರಾಮ.. ಇವು ನಗರದ ಸಾರ್ವಜನಿಕ ಉದ್ಯಾನದಲ್ಲಿ ಭಾನುವಾರ ಕಂಡು ಬಂದ ದೃಶ್ಯ. ಈದ್ ಉಲ್ ಫಿತ್ರ್ ಮಾರನೇ ದಿನವೂ ಮುಸ್ಲಿಂ ಕುಟುಂಬಗಳಲ್ಲಿ ಸಂಭ್ರಮ ಮನೆ ಮಾಡಿತ್ತು.

ಶನಿವಾರವಷ್ಟೇ ರೋಜಾ ಮುಗಿಸಿದವರೆಲ್ಲ ಉದ್ಯಾನ, ಕೆರೆ, ಪ್ರವಾಸಿ ತಾಣಗಳಿಗೆ ದಾಂಗುಡಿ ಇಟ್ಟರು. ಅದರಲ್ಲೂ ಪಾಲಿಕೆ ಆವರಣದಲ್ಲಿರುವ ಸಾರ್ವಜನಿಕ ಉದ್ಯಾನ, ಅದರ ಪಕ್ಕದ ಮಕ್ಕಳ ಉದ್ಯಾನದಲ್ಲಿ ಕುಟುಂಬ ಸಮೇತ ಖುಷಿಯ ಕ್ಷಣಗಳನ್ನು ಕಳೆದರು. ಎಲ್ಲರ ಮೊಗದಲ್ಲೂ ಬತ್ತದ ಉತ್ಸಾಹ ಕಂಡು ಬಂತು.

ಮಕ್ಕಳ ಉಲ್ಲಾಸಕ್ಕೆ ಪಾರವೇ ಇರಲಿಲ್ಲ. ಎರಡು ದಿನ ರಜೆ ಸಿಕ್ಕಿದ್ದರಿಂದ ಸಹಜವಾಗಿ ಮಕ್ಕಳ ಖುಷಿ ಇಮ್ಮಡಿಯಾಗಿತ್ತು.  ಕುಟುಂಬದೊಂದಿಗೆ ಉದ್ಯಾನಕ್ಕೆ ಬಂದ ಪುಳಕದಲ್ಲೇ ಚಿಣ್ಣರೆಲ್ಲ ಕಾಲ ಕಳೆದರು. ಹುಲ್ಲಿನ ಮೇಲೆ ಪಾದರಸದಂತೆ ಓಡಾಡಿ, ಹಾಡು ಹಾಡಿ, ಆಟವಾಡಿ, ಮಿಮಿಕ್ರಿ ಮಾಡಿ... ಪಾಲಕರನ್ನು ರಂಜಿಸಿದರು. ಪುಟಾಣಿ ಪುಟಾಣಿ ಜೋಕುಗಳನ್ನು ಹೇಳಿ ನಕ್ಕು–ನಗಿಸಿದರು. ಉಯ್ಯಾಲೆ, ಸೀಸಾ, ಗಿರಿಗಿಟ್ಲೆ, ಜಾರುಬಂಡಿಗಳ ಮೇಲೆ ಮಕ್ಕಳ ಮನದಣಿಯೆ ಕುಣಿದಾಡಿದರು.

ADVERTISEMENT

ಮಹಿಳೆಯರಂತೂ ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟ, ಸಂಜೆಯ ಕುರುಕಲು ತಿಂಡಿ, ಕುಡಿಯುವ ನೀರಿನ ಕೊಡಗಳ ಸಮೇತ ಬಂದಿದ್ದರು. ಕುಟುಂಬದವರೆಲ್ಲ ಮರದಡಿ ಕುಳಿತು ಹರಟುತ್ತಲೇ ಊಟ ಮಾಡಿದರು. ಮಕ್ಕಳ ಆಟ ನೋಡಿ ನಲಿದರು. ತಿಂಗಳ ಕಾಲ ಉಪವಾಸ ವ್ರತ ಆಚರಿಸಿ ಹೊರಬಂದ ಮನಸ್ಸುಗಳೆಲ್ಲ ಇಲ್ಲಿ ಉಲ್ಲಾಸಕ್ಕೆ ತೆರೆದುಕೊಂಡಿದ್ದವು. ಕೆಲವರು ಮರದ ನೆರಳಲ್ಲಿ ಹಾಯಾದ ನಿದ್ರೆಗೆ ಜಾರಿದ್ದರು.

‘ಪ್ರತಿವರ್ಷ ಈ ರೀತಿ ಪ್ರವಾಸಕ್ಕೆ ಬಂದು ಖುಷಿಪಡುತ್ತೇವೆ. ಸಿಹಿ‍ ತಿಂಡಿ, ಭರ್ಜರಿ ಊಟ ಸವಿಯುತ್ತೇವೆ. ಬೆಳಿಗ್ಗೆ 8ಕ್ಕೆ ಬಂದವರು ಹೋಗುವುದು ರಾತ್ರಿ 8ರ ನಂತರವೇ’ ಎಂದು ಬಾನುಬಿ ಖುಷಿಯಿಂದಲೇ ಹೇಳಿದರು.

‘ದಿನವಿಡೀ ಸಂಭ್ರಮಿಸಲು ಇಲ್ಲಿಗೆ ಬರುತ್ತೇವೆ. ಮಾಮೂಲಿಯಾಗಿ ಬರುವುದಕ್ಕೂ ಹಬ್ಬದ ದಿನ ಬರುವುದಕ್ಕೂ ತುಂಬ ವ್ಯತ್ಯಾಸ ಅನ್ನಿಸುತ್ತದೆ. ಇಂದು ಉದ್ಯಾನಕ್ಕೆ ಹೊಸ ಕಳೆ ಬಂದಂತಿದೆ. ರಂಜಾನ್‌ ತಿಂಗಳಿಡೀ ಪ್ರಾರ್ಥನೆಗೆ ಮೀಸಲು. ನಂತರ ಮೂರು ದಿನ ಈದ್‌ ಸಂಭ್ರಮ ಇರುತ್ತದೆ. ಒಬ್ಬರಿಗೊಬ್ಬರು ಊಟ ಹಂಚಿಕೊಳ್ಳುತ್ತೇವೆ; ಭಾವನೆ ಮತ್ತು ಸಂಭ್ರಮವನ್ನೂ’ ಎನ್ನುತ್ತಾರೆ ಯುವಕರಾದ ಮಹಮದ್‌ ಆಸಿಫ್‌, ಮಹಮದ್‌ ರಫೀಕ್‌, ಸೈಯ್ಯದ್‌ ವಾಜಿದ್‌, ಅಮ್ಜದ್‌ ಹಾಗೂ ದಿಶಾನ್‌ ಅಹ್ಮದ್‌.

ತಂಡತಂಡವಾಗಿ ಬಂದಿದ್ದ ಯುವಕ, ಯುವತಿಯರು ಟೆನಿಸ್‌, ವಾಲಿಬಾಲ್‌, ಕ್ರಿಕೆಟ್‌, ಫುಟ್‌ಬಾಲ್‌, ಕಬಡ್ಡಿ ಆಡಿ ನಲಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.