ADVERTISEMENT

5 ಸಾವಿರ ಶೌಚಾಲಯ ಯೋಗ್ಯವಲ್ಲ: ಕರವೇ ಆರೋಪ

​ಪ್ರಜಾವಾಣಿ ವಾರ್ತೆ
Published 19 ಜನವರಿ 2018, 8:34 IST
Last Updated 19 ಜನವರಿ 2018, 8:34 IST

ಅಫಜಲಪುರ: ‘ಸರ್ಕಾರ ಸ್ವಚ್ಛ ಭಾರತ ಮಿಷನ್‌ ಯೋಜನೆ ಅಡಿಯಲ್ಲಿ ಕೂಸು ಮತ್ತು ಸಿರಿ ಎರಡು ಶೀರ್ಷಿಕೆ ಯೋಜನೆ ಅಡಿಯಲ್ಲಿ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ 2016 – 17ನೇ ರಲ್ಲಿ ನಿರ್ಮಿಸಿರುವ 5,116 ಶೌಚಾಲಯಗಳಲ್ಲಿ 5 ಸಾವಿರ ಶೌಚಾಲಯಗಳು ಬಳಸಲು ಯೋಗ್ಯವಾಗಿಲ್ಲ. ಅವು ಸಂಪೂರ್ಣ ಕಳಪೆಯಾಗಿವೆ’ ಎಂದು ತಾಲ್ಲೂಕು ಜೈ ಕರವೇ ಅಧ್ಯಕ್ಷ ಸುರೇಶ ಅವಟೆ ಆರೋಪಿಸಿದ್ದಾರೆ.

ಅವರು ಬುಧವಾರ ಶೌಚಾಲಯಗಳ ಬಗ್ಗೆ ಮಾಹಿತಿ ನೀಡಿ, ‘ಸ್ವಚ್ಛ ಭಾರತ್ ಮಿಷನ್‌ ಯೋಜನೆ ಅಡಿಯಲ್ಲಿ 28 ಗ್ರಾಮ ಪಂಚಾಯಿತಿಗಳಿಗೆ ಪ್ರತಿ ಗ್ರಾಮ ಪಂಚಾಯಿತಿಗೆ 200 ಶೌಚಾಲಯ ನಿಗದಿ ಮಾಡಲಾಗಿತ್ತು. ಒಟ್ಟು 5,600 ಶೌಚಾಲಯಗಳ ಪೈಕಿ ಗರ್ಭಿಣಿಯರ ಯೋಜನೆ ಅಡಿಯಲ್ಲಿ ನಿರ್ಮಾಣ ಮಾಡಿರುವ ಶೌಚಾಲಯಗಳ ಸಂಖ್ಯೆ 1,015 ಮತ್ತು ಸಿರಿ ಯೋಜನೆ ಅಡಿಯಲ್ಲಿ 4,061 ಶೌಚಾಲಯ ನಿರ್ಮಿಸಲಾಗಿದೆ. ಆದರೆ, 5 ಸಾವಿರ ಶೌಚಾಲಯಗಳು ಬಳಕೆಗೆ ಯೋಗ್ಯವಾಗಿಲ್ಲ. ಅವು ಕಳಪೆ ಮಟ್ಟದ್ದಾಗಿವೆ. ದಲ್ಲಾಳಿಗಳು ಶೌಚಾಲಯ ಕಟ್ಟಿಸಿ ಹಣ ಎತ್ತಿ ಹಾಕಿದ್ದಾರೆ. ಇದರ ಬಗ್ಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತನಿಖೆ ಮಾಡಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಎಂದು ಅವರು ಆಗ್ರಹಿಸಿದರು.

ಶೌಚಾಲಯ ನಿರ್ಮಾಣದಲ್ಲಿ ಶಿಕ್ಷಕರನ್ನು ಬಳಸಿಕೊಳ್ಳಲಾಗಿದೆ. ಶೌಚಾಲಯವೂ ಕಳಪೆಯಾಗಿದೆ; ಶಿಕ್ಷಣವೂ ಹಾಳಾಗಿದೆ. ಶೌಚಾಲಯಕ್ಕೆ ಬೇಕಾಗುವ ಮೂಲ ಸೌಲಭ್ಯವನ್ನು ಸರ್ಕಾರ ಕಲ್ಪಿಸಿಕೊಡಬೇಕು. ಗ್ರಾಮಾಂತರ ಭಾಗಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಸುಮಾರು 10 ಹಳ್ಳಿಗಳಲ್ಲಿ ಕುಡಿಯುವ ನೀರಿನ ಶುದ್ಧೀಕರಣ ಘಟಕ ಹಾಳು ಬಿದ್ದಿವೆ ಅವುಗಳನ್ನು ದುರಸ್ತಿ ಮಾಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.