ADVERTISEMENT

ಅನುದಾನ ದುರ್ಬಳಕೆ: ಸದಸ್ಯರ ಆರೋಪ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2017, 10:22 IST
Last Updated 23 ಏಪ್ರಿಲ್ 2017, 10:22 IST
ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ ಶನಿವಾರ ಇಲ್ಲಿನ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ವಿಜಯಲಕ್ಷ್ಮಿ ಸುರೇಶ್‌ ಅಧ್ಯಕ್ಷತೆಯಲ್ಲಿ ನಡೆಯಿತು
ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ ಶನಿವಾರ ಇಲ್ಲಿನ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ವಿಜಯಲಕ್ಷ್ಮಿ ಸುರೇಶ್‌ ಅಧ್ಯಕ್ಷತೆಯಲ್ಲಿ ನಡೆಯಿತು   

ಸೋಮವಾರಪೇಟೆ:  ನಾಲ್ಕನೇ ವಾರ್ಡ್‌ನಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ₹ 3 ಲಕ್ಷ ವೆಚ್ಚದ ತಡೆಗೋಡೆಯ ಕಾಮಗಾರಿ ಕೈಗೊಳ್ಳದೆ ಹಣ ದುರ್ಬಳಕೆ ಮಾಡಲು ಗುತ್ತಿಗೆದಾರರೊಂದಿಗೆ ಕೆಲವರು ಮುಂದಾಗಿದ್ದಾರೆ ಎಂದು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷೆ ಸುಶೀಲಾ ಆರೋಪಿಸಿದರು.

ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ ಆರಂಭವಾಗುತ್ತಿದ್ದಂತೆ ಅವರು ಈ ಆರೋಪ ಮಾಡಿದ ಸುಶೀಲಾ ‘ಈ ನಿಧಿಯನ್ನು ನನ್ನ ಗಮನಕ್ಕೂ ತಾರದೆ, ಶಿವಾಜಿ ರಸ್ತೆಯಲ್ಲಿನ ಸುಸ್ಥಿತಿಯಲ್ಲಿದ್ದ ಚರಂಡಿಯನ್ನು ಕಿತ್ತು ಕಾಟಾಚಾರಕ್ಕೆ ಕಾಮಗಾರಿ ಮಾಡಲಾಗಿದೆ’ ಎಂದು ನೇರವಾಗಿ ಆರೋಪಿಸಿದರು. 
ಇಲ್ಲಿನ ಅಶೋಕ ಬಡಾವಣೆಯಲ್ಲಿ ಸಮುದಾಯ ಭವನವನ್ನು ನಿರ್ಮಿಸುವ ಉದ್ದೇಶದಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭಿವೃದ್ಧಿಗೆ ಮೀಸಲಿರಿಸಿದ್ದ 24.1ರ ನಿಧಿಯನ್ನು ಪಂಚಾಯಿತಿ ಆಡಳಿತ ನಡೆಸುತ್ತಿರುವ ಬಿಜೆಪಿಯವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ವಿಪಕ್ಷ ಸದಸ್ಯರಾದ ಕೆ.ಎ. ಆದಂ, ಮೀನಾಕುಮಾರಿ ಹಾಗೂ ಶೀಲಾ ಡಿಸೋಜ ಗೈರು ಹಾಜರಾಗಿದ್ದರು. ಇವರಿಗೆ ನಾಮಕರಣ ಸದಸ್ಯರಾದ ಉದಯ ಶಂಕರ್, ಎಚ್.ಎ. ನಾಗರಾಜು ಮತ್ತು  ಬಿ.ಜಿ. ಇಂದ್್ರೇಶ್ ಸಾಥ್‌ ನೀಡಿದರೆ, ಕಾಂಗ್ರೆಸ್ ಪಕ್ಷದ ಮತ್ತೊಬ್ಬ ಸದಸ್ಯರಾದ ಬಿ.ಸಿ. ವೆಂಕಟೇಶ್ ಸಭೆಯಲ್ಲಿ ಪಾಲ್ಗೊಂಡಿದ್ದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಅಧ್ಯಕ್ಷೆ ವಿಜಯಲಕ್ಷ್ಮಿ ಸುರೇಶ್ ಮಾತನಾಡಿ, ಬಾಬಾಸಾಹೇಬ್ ಅಂಬೇಡ್ಕರ್ ಕೇವಲ ಒಂದು ವರ್ಗದ ನಾಯಕರಲ್ಲ. ಎಲ್ಲಾ ವರ್ಗದವರಿಗೂ ಅನುಕೂಲವಾಗುವ ಉದ್ದೇಶದಿಂದ ನೂತನ ಬಡಾವಣೆಯಲ್ಲಿ ಅಂಬೇಡ್ಕರ್ ಸಮುದಾಯ ಭವನವನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಈ ವಾರ್ಡ್‌ಗೆ ಹೊಂದಿಕೊಂಡಂತಿರುವ 7, 9ನೇ ವಾರ್ಡ್‌ನಲ್ಲಿ ಹೆಚ್ಚು ದಲಿತರಿರುವುದರಿಂದ ಅವರಿಗೆಲ್ಲಾ ಅನುಕೂಲವಾಗುತ್ತದೆ. ಇದರಲ್ಲಿ ಯಾವುದೇ ದುರ್ಬಳಕೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ADVERTISEMENT

ಅಧ್ಯಕ್ಷರ ಮಾತಿಗೆ ಆಡಳಿತ ಪಕ್ಷದ  ಸದಸ್ಯರಾದ ಬಿ.ಎಂ. ಸುರೇಶ್, ಬಿ.ಎಂ. ಈಶ್ವರ್, ಸುಶೀಲಾ ಮತ್ತು ಸುಷ್ಮಾ ಶೆಟ್ಟಿ ತಮ್ಮ ಸಹಮತ ವ್ಯಕ್ತಪಡಿಸಿದರು.ಪಟ್ಟಣ ಪಂಚಾಯಿತಿ ಸಭೆಗಳಿಗೆ ಅಧಿಕಾರಿಗಳು ಮೊದಲೇ ಸೂಕ್ತ ಮಾಹಿತಿ ನೀಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಅಂದಿನ ಸಭೆಯಲ್ಲಿ ಯಾವುದೇ ವಿಷಯಗಳನ್ನಿಟ್ಟು, ಬದಲಾವಣೆ ಬಯಸಿದಲ್ಲಿ ಅದನ್ನು ಮಾಡಲಾಗುವುದಿಲ್ಲ ಎಂದು ಹೇಳಿದರು.

ಪಟ್ಟಣ ಪಂಚಾಯಿತಿಯಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳು ನಿಗದಿತ ಅವಧಿಯಲ್ಲಿ ನಡೆಯುತ್ತಿಲ್ಲ. ಕೆಲವು ಸಿಬ್ಬಂದಿಗೆ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ. ಅಗತ್ಯ ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ಜಿಲ್ಲಾಧಿಕಾರಿ ಅವರಲ್ಲಿ ಮನವಿ ಮಾಡುವಂತೆ ಸಭೆಯಲ್ಲಿ  ತೀರ್ಮಾನಿಸಲಾಯಿತು.ಸಭೆಯಲ್ಲಿ ಮುಖ್ಯಾಧಿಕಾರಿ ನಾಚಪ್ಪ, ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.