ADVERTISEMENT

ಆಕ್ಷೇಪಣೆ ಸಲ್ಲಿಕೆ; ಕಾನೂನು ಹೋರಾಟ

ಕಸ್ತೂರಿ ರಂಗನ್‌ ವರದಿ ಪರಿಸರ ಸೂಕ್ಷ್ಮ ವಲಯ ಘೋಷಣೆಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2017, 7:21 IST
Last Updated 11 ಮಾರ್ಚ್ 2017, 7:21 IST
ಆಕ್ಷೇಪಣೆ ಸಲ್ಲಿಕೆ; ಕಾನೂನು ಹೋರಾಟ
ಆಕ್ಷೇಪಣೆ ಸಲ್ಲಿಕೆ; ಕಾನೂನು ಹೋರಾಟ   
ಮಡಿಕೇರಿ:  ಕಸ್ತೂರಿ ರಂಗನ್‌ ವರದಿ ಅನ್ವಯ ಜಿಲ್ಲೆಯ 55 ಗ್ರಾಮಗಳನ್ನು ಪರಿಸರ ಸೂಕ್ಷ್ಮ ವಲಯವೆಂದು ಘೋಷಣೆ ಮಾಡಲು ಕೇಂದ್ರ ಸರ್ಕಾರ ಹೊರಡಿಸಿದ್ದ ಕರಡು ಅಧಿಸೂಚನೆಗೆ ಭಾರಿ ವಿರೋಧ ವ್ಯಕ್ತವಾಗಿದ್ದು, ದೊಡ್ಡ ಹೋರಾಟಕ್ಕೆ ಕೊಡಗು ಅಣಿ ಆಗುತ್ತಿದೆ.
 
ನಗರದ ಕ್ರಿಸ್ಟಲ್‌ ಹಾಲ್‌ನಲ್ಲಿ ಡಾ.ಕಸ್ತೂರಿ ರಂಗನ್‌ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಹೋರಾಟ ರೂಪುರೇಷೆ ಕುರಿತು ಶಾಸಕರಾದ ಕೆ.ಜಿ.ಬೋಪಯ್ಯ ಹಾಗೂ ಎಂ.ಪಿ.ಅಪ್ಪಚ್ಚು ರಂಜನ್‌ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಮತ್ತೊಮ್ಮೆ 5 ಸಾವಿರ ಆಕ್ಷೇಪಣೆ ಸಲ್ಲಿಸುವ ಜತೆಗೆ, ಕಾನೂನು ಹೋರಾಟ ನಡೆಸಲು ಸಮಿತಿ ತೀರ್ಮಾನ ತೆಗೆದುಕೊಂಡಿತು.
 
ಆರಂಭದಲ್ಲಿ ಮಾತನಾಡಿದ ಸಣ್ಣ ಕಾಫಿ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ನಂದ ಸುಬ್ಬಯ್ಯ, ಕಸ್ತೂರಿ ರಂಗನ್‌ ವರದಿ ಸಂಬಂಧ ಈ ಹಿಂದೆ ಕರೆಯಲಾಗಿದ್ದ ಸಭೆಗೆ ಸಚಿವ ಅನಂತಕುಮಾರ್‌ ಬಿಟ್ಟರೆ ರಾಜ್ಯದ ಬೇರೆ ಯಾವ ಸಂಸದರೂ ಪಾಲ್ಗೊಂಡಿಲ್ಲ. ಮೈಸೂರು– ಕೊಡಗು ಸಂಸದ ಪ್ರತಾಪಸಿಂಹ ಸಹ ಹೋಗದಿರುವುದು ವಿಷಾದ. ಇದರ ಪರಿಣಾಮವಾಗಿ ಮತ್ತೊಮ್ಮೆ ಕರಡು ಅಧಿಸೂಚನೆ ಜಾರಿಗೊಂಡಿದೆ ಎಂದು ಹೇಳಿದರು.
 
ಮಾಧವ್‌ ಗಾಡ್ಗಿಲ್‌ ವರದಿ ಅನುಷ್ಠಾನಕ್ಕೆ ಹಿಂದಿನ ಸರ್ಕಾರ ಕಸ್ತೂರಿ ರಂಗನ್‌ ಅವರ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಮೈಸೂರಿನ ಕೊಡವ ಸಮಾಜ ಹಾಗೂ ಕೇರಳದಲ್ಲಿ ತಲಾ ಒಂದೊಂದು ಸಭೆ ಮಾತ್ರ ನಡೆಸಿತ್ತು. ಆ ಸಂದರ್ಭದಲ್ಲಿ ಕೆಲವರು ಕೊಡಗಿನ ಮೂರು ತಾಲ್ಲೂಕುಗಳನ್ನೂ ಪೂರ್ಣವಾಗಿ ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಣೆ ಮಾಡುವಂತೆ ಆಗ್ರಹಿಸಿದ್ದರು.
 
ಆಗ ನಾವೆಲ್ಲ ಆಕ್ಷೇಪ ವ್ಯಕ್ತಪಡಿಸಿದ್ದೆವು. ಹಿಂದೆ ಆಕ್ಷೇಪ ಸಲ್ಲಿಸಿದ್ದರೂ ಕೊಡಗಿನ ಅಷ್ಟೇ ಗ್ರಾಮಗಳನ್ನು ಪಟ್ಟಿ ಮಾಡಿ ಪರಿಸರ ಸೂಕ್ಷ್ಮ ವಲಯ ಘೋಷಣೆಗೆ ಕೇಂದ್ರ ಸರ್ಕಾರ ಮುಂದಾಗಿದೆ. ಬಿಜೆಪಿ ಸರ್ಕಾರವೂ ಅದೇ ಸಮಸ್ಯೆ ಹುಟ್ಟು ಹಾಕಲು ಮುಂದಾಗಿದೆ ಎಂದು ದೂರಿದರು. 
 
ಸೂಕ್ಷ್ಮ ವಲಯ ಘೋಷಣೆಯಾದರೆ ಆ ವ್ಯಾಪ್ತಿಯಲ್ಲಿ ಸುಣ್ಣ ಸುಡುವುದು, ಮೀನು ಸಾಕಾಣಿಕೆ, ಅರಣ್ಯದ ಅಂಚಿನ ಗ್ರಾಮದ ಮನೆಗಳಲ್ಲಿ ಸೌದೆ ಬಳಕೆ, ರೈಲ್ವೆ ಯೋಜನೆ, ಕಾಫಿ ಉದ್ಯಮ, ವಿಮಾನ ನಿಲ್ದಾಣ ಸೇರಿದಂತೆ ಹಲವು ಅಭಿವೃದ್ಧಿ ಚಟುವಟಿಕೆಗಳಿಗೆ ತೊಡಕಾಗಲಿದೆ. ಆನೆಕಾಡು ಸಹ ಪರಿಸರ ಸೂಕ್ಷ್ಮ ವಲಯದ ಪಟ್ಟಿಯಲ್ಲಿರುವ ಕಾರಣ, ಕುಶಾಲನಗರದ ಅಭಿವೃದ್ಧಿಗೂ ಸಮಸ್ಯೆ ಉಂಟಾಗಲಿದೆ ಎಂದು ಎಚ್ಚರಿಸಿದರು. 
 
ವಿಧಾನ ಪರಿಷತ್‌ ಮಾಜಿ ಸದಸ್ಯ ಅರುಣ್‌ ಮಾಚಯ್ಯ ಮಾತನಾಡಿ, ‘ಇದು ಪಕ್ಷಾತೀತ ಹೋರಾಟವಾಗಿ ರೂಪುಗೊಳ್ಳಲಿ. ಕಸ್ತೂರಿ ರಂಗನ್‌ ವರದಿ ಜಾರಿಯಾದರೆ ಜನರು ಸಂಕಷ್ಟಕ್ಕೆ ಒಳಗಾಗುತ್ತಾರೆ’ ಎಂದು ವಿವರಿಸಿದರು.
 
ಜೆಡಿಎಸ್‌ ಮುಖಂಡ ಭರತ್‌ ಮಾತನಾಡಿ, ‘ಮುಂದಿನ ಸಭೆಗೆ ಸಂಸದ ಪ್ರತಾಪಸಿಂಹ ಅವರೂ ಬರಲಿ. ಅವರ ಸಮ್ಮುಖದಲ್ಲೇ ಚರ್ಚೆ ನಡೆಸಿ, ಕೇಂದ್ರದ ಮೇಲೆ ಒತ್ತಡ ಹೇರೋಣ’ ಎಂದು ಹೇಳಿದರು.
 
ಕಾಂಗ್ರೆಸ್‌ ಮುಖಂಡ ತನ್ನೀರ್ ಮೈನಾ, ಕೊಡಗಿನ 55 ಗ್ರಾಮಗಳಲ್ಲೂ ಗ್ರಾಮಸಭೆ ನಡೆಸಿ, ಅಲ್ಲಿನ ಅಭಿಪ್ರಾಯ ಕ್ರೋಡೀಕರಿಸಿ ಕೇಂದ್ರಕ್ಕೆ ಆಕ್ಷೇಪ ಸಲ್ಲಿಸೋಣ ಎಂದು ಸಲಹೆ ನೀಡಿದರು. ಅದಕ್ಕೆ ಪ್ರತಿಕ್ರಿಯಿಸಿದ ನಂದ ಸುಬ್ಬಯ್ಯ, ಈ ಹಿಂದೆಯೇ ಅಂತಹ ಎಲ್ಲ ಪ್ರಯತ್ನಗಳನ್ನೂ ಮಾಡಲಾಗಿತ್ತು. ಆದರೆ, ಕೇಂದ್ರ ಸರ್ಕಾರ ನಮ್ಮ ಆಕ್ಷೇಪಣೆಗಳು ಸಿಕ್ಕಿರುವ ಬಗ್ಗೆ ಒಂದು ಮಾಹಿತಿಯನ್ನೂ ನೀಡಲಿಲ್ಲ ಎಂದು ಆರೋಪಿಸಿದರು. 
 
ಹಳೆಯ ಆಕ್ಷೇಪಣೆಗಳನ್ನು ಮತ್ತೊಮ್ಮೆ ಸಲ್ಲಿಸಿ ಕೇಂದ್ರದ ಗಮನ ಸೆಳೆಯೋಣ. ಕಸ್ತೂರಿನ ರಂಗನ್‌ ಜಾರಿ ಸಂಬಂಧ ರಾಜ್ಯ ಸರ್ಕಾರ ಇದುವರೆಗೂ ಮೌನ ವಹಿಸಿತ್ತು. ಪದೇ ಪದೇ ಕರ್ನಾಟಕದೊಂದಿಗೆ ನೀರಿಗೆ ವಿವಾದ ತೆಗೆಯುವ ತಮಿಳುನಾಡು ಈ ವಿಚಾರವಾಗಿ ಸುಮ್ಮನಾಯಿತು. ಆದರೆ, ಕೇರಳ ಮಾತ್ರ ಸಮರ್ಪಕವಾಗಿ ಹೋರಾಟ ನಡೆಸಿ, ತನ್ನ ವ್ಯಾಪ್ತಿಯನ್ನೇ ಕಡಿಮೆ ಮಾಡಿಕೊಂಡಿದೆ.
 
ಹಿಂದೆಯೇ ಪ್ರತಿ ಗ್ರಾಮಕ್ಕೂ ನೋಡಲ್‌ ಅಧಿಕಾರಿಯ ನೇಮಕ ಮಾಡಿ, ಗ್ರಾಮಸಭೆ ನಡೆಸುವ ಮೂಲಕ ಹೋರಾಟ ನಡೆಸಿತ್ತು. ಎಲ್ಲ ರೀತಿಯ ಮಾಹಿತಿಯನ್ನು ಸರ್ಕಾರವೇ ಕ್ರೋಡೀಕರಿಸಿ ಕೇಂದ್ರಕ್ಕೆ ಸಲ್ಲಿಕೆಯಾಗಿತ್ತು. ಅವರು ರೂಪಿಸಿದ ಹೋರಾಟ ಹಾದಿಯ ಬಗ್ಗೆ ಮಾಹಿತಿ ಪಡೆದುಕೊಳ್ಳುವುದು ಒಳ್ಳೆಯದು ಎಂದು ಶಾಸಕ ಬೋಪಯ್ಯ ಹೇಳಿದರು.
 
‘ಇದೇ 15 ಹಾಗೂ 16ರಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಆಗುತ್ತಿದ್ದು, ವರದಿಗೆ ಜಾರಿ ಮಾಡದಂತೆ ಆಗ್ರಹಿಸಲಿದ್ದಾರೆ. ಪಶ್ಚಿಮ ಘಟ್ಟ ವ್ಯಾಪ್ತಿಯ ಸಂಸದರೂ ಪಾಲ್ಗೊಳ್ಳಲಿದ್ದಾರೆ’ ಎಂದು ವಿವರಿಸಿದರು. 
 
ಶಾಸಕ ಅಪ್ಪಚ್ಚು ರಂಜನ್‌ ಮಾತನಾಡಿ, ಅಧಿವೇಶನದಲ್ಲೂ ಈ ವಿಷಯ ಪ್ರಸ್ತಾಪಿಸಲಾಗುವುದು. ಪಶ್ಚಿಮಘಟ್ಟ ವ್ಯಾಪ್ತಿಯ ಶಾಸಕರು ಹಾಗೂ ಸಚಿವರು ಬೆಂಗಳೂರಿನಲ್ಲಿ ಸಭೆ ನಡೆಸಿ ಮುಂದಿನ ಹೋರಾಟದ ರೂಪುರೇಷೆ ನಿರ್ಧರಿಸಲಾಗುವುದು ಎಂದು ಹೇಳಿದರು.
 
ಕೆಲವರು ಮುಖ್ಯಮಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಆಗಿ ಮನವಿ ಸಲ್ಲಿಸೋಣ ಎಂದು ಸಲಹೆ ನೀಡಿದರು. ‘ಬಜೆಟ್‌ ಅಧಿವೇಶನದ ಬಳಿಕ ಈ ಸಂಬಂಧ ಮುಖ್ಯಮಂತ್ರಿಯೊಂದಿಗೆ ಮಾತುಕತೆ ನಡೆಸುತ್ತೇನೆ’ ಎಂದು ವಿಧಾನ ಪರಿಷತ್‌ ಸದಸ್ಯೆ ವೀಣಾ ಅಚ್ಚಯ್ಯ ಭರವಸೆ ನೀಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.