ADVERTISEMENT

ಆನೆ ಕಂದಕ ನಿರ್ಮಾಣಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 7 ಜುಲೈ 2017, 10:16 IST
Last Updated 7 ಜುಲೈ 2017, 10:16 IST

ಕುಶಾಲನಗರ: ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ತೀವ್ರಗೊಂಡಿದ್ದು,  ಆನೆ ಸಂಚರಿಸುವ ಮಾರ್ಗಗಳಲ್ಲಿ ಕಂದಕ ನಿರ್ಮಿಸಬೇಕು ಎಂದು ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಒತ್ತಾಯಿಸಿದರು.

ಸಮೀಪದ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿಯಿಂದ ಗುರುವಾರ ಹೊಸಪಟ್ಟಣ ಸಮುದಾಯ ಭವನದಲ್ಲಿ ಗುರುವಾರ ಗ್ರಾಮಸಭೆಯಲ್ಲಿ ಅನೆಗಳ ಹಾವಳಿ ನಿಯಂತ್ರಣಕ್ಕೆ ಒತ್ತಾಯಿಸಿದರು.

ತಾ.ಪಂ.ಮಾಜಿ ಸದಸ್ಯ ಸಿ.ಎಲ್.ವಿಶ್ವ ಮಾತನಾಡಿ, ಕಾಡಾನೆ ಹಾವಳಿಯಿಂದ ಅಪಾರ ಪ್ರಮಾಣದಲ್ಲಿ ಬೆಳೆನಷ್ಟವಾಗುತ್ತಿದೆ. ಅಲ್ಲದೇ, ಗ್ರಾಮಸ್ಥರು, ಕಾರ್ಮಿ ಕರು ಭಯದ ವಾತಾವರಣದಲ್ಲಿ ಬದುಕು ನಡೆಸಬೇಕಾಗಿದೆ. ಆದ್ದರಿಂದ ಆನೆಗಳು ಹೆಚ್ಚಾಗಿ ಸಂಚರಿಸುವ ಮೀನು ಕೊಲ್ಲಿಯಿಂದ ಚಿಕ್ಲಿಹೊಳೆವರೆಗೂ ಕಂದಕ ನಿರ್ಮಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಉಪ ವಲಯ ಅರಣ್ಯಾಧಿಕಾರಿ ದೇವಿಪ್ರಸಾದ್ ಮಾತನಾಡಿ, ಮೀನು ಕೊಲ್ಲಿ ಮೀಸಲು ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಬಹುತೇಕ ಕಡೆಗಳಲ್ಲಿ ಆನೆ ಕಂದಕ ನಿರ್ಮಿಸಲಾಗಿದೆ. ನಂಜರಾಯಪಟ್ಟಣ, ವಿರೂಪಾಕ್ಷಪುರ, ಚಿಕ್ಲಿಹೊಳೆ ಸೇರಿದಂತೆ ಇನ್ನಿತರ ಗ್ರಾಮಗಳ ಅರಣ್ಯದಂಚಿನಲ್ಲಿ ಮುಂದಿನ ದಿನಗಳಲ್ಲಿ ಕಂದಕ ನಿರ್ಮಾಣಕ್ಕೆ ಒತ್ತು ನೀಡಲಾಗುವುದು ಎಂದರು.

ದುಬಾರೆ ಕಾವೇರಿ ನದಿಯಲ್ಲಿ ಸ್ಥಳೀ ಯರು ರಿವರ್ ರ್‍ಯಾಫ್ಟಿಂಗ್ ನಡೆಸುತ್ತಿರು ವುದರಿಂದ ನೂರಾರು ಯುವಕರಿಗೆ ತಮ್ಮ ಜೀವನ ಕಂಡುಕೊಂಡಿದ್ದಾರೆ. ಆದರೆ, ರೀವರ್ ರ್‍‍ಯಾಫ್ಟಿಂಗ್ ಅನ್ನು ಹೊರಗುತ್ತಿಗೆ ನೀಡಲು ಮುಂದಾಗಿರುವ ಕ್ರಮ ಸರಿಯಲ್ಲ ಎಂದು ರ್‍್ಯಾಫ್ಟಿಂಗ್ ಅಸೋಸಿಯೇಶನ್ ಅಧ್ಯಕ್ಷ  ದಾಮೋದರ್ ಅಸಮಾಧಾನ ವ್ಯಕ್ತಪಡಿಸಿದರು.

ರ್‍್ಯಾಫ್ಟಿಂಗ್ ಹೊರಗುತ್ತಿಗೆ ನೀಡುವ ಪದ್ಧತಿ ವಿರುದ್ಧ ಗ್ರಾಮಸಭೆಯಲ್ಲಿ  ನಿರ್ಣಯ ಕೈಗೊಳ್ಳಲಾಯಿತು. ಅಲ್ಲದೆ ಗ್ರಾ.ಪಂ.ವತಿಯಿಂದ ಟೆಂಡರ್ ಕರೆಯಲು ಅವಕಾಶ ಮಾಡಿಕೊಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಕಾವೇರಿ ನದಿಯ ಪ್ರವಾಹದಿಂದ ವರ್ಷದಿಂದ ವರ್ಷಕ್ಕೆ ನದಿದಂಡೆಯಲ್ಲಿ ಕೊರತೆ ಉಂಟಾಗುತ್ತಿದೆ. ಆದ್ದರಿಂದ ಪಂಚಾಯಿತಿಯಿಂದ ತಡೆಗೋಡೆ ನಿರ್ಮಿಸಲು ಕ್ರಮ ಕೈಗೊಳ್ಳಬೇಕು ಎಂದು ಉದ್ಯಮಿ ರತೀಶ್ ಅಧ್ಯಕ್ಷರಿಗೆ ಮನವಿ ಪತ್ರ ಸಲ್ಲಿಸಿದರು.

ಕಳೆದ ಗ್ರಾಮಸಭೆಯಲ್ಲಿ ಕೈಗೊಂಡ ನಿರ್ಣಯಗಳು ಯಾವುದು ಅನುಷ್ಠಾನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಜಿ.ಪಂ.ಮಾಜಿ ಸದಸ್ಯ ಆರ್.ಕೆ.ಚಂದ್ರು, ಅನುಪಾಲನ ವರದಿ ಮಂಡಿಸುವಂತೆ ಒತ್ತಾಯಿಸಿದರು. ಇದಕ್ಕೆ ಧ್ವನಿಗೂಡಿಸಿದ ಅಸುಬೋವಣ್ಣ ಇದುವರೆಗೆ ಪಂಚಾಯಿತಿಗೆ ಬಿಡುಗಡೆಯಾದ ಅನುದಾನ ಎಷ್ಟು? ಪಂಚಾಯಿತಿ ವ್ಯಾಪ್ತಿಯಲ್ಲಿ ಕೈಗೊಂಡಿ ರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಭೆಗೆ ಮಾಹಿತಿ ನೀಡಿ ಎಂದು ಆಡಳಿತ ಮಂಡ ಳಿಯನ್ನು ತರಾಟೆಗೆ ತೆಗೆದುಕೊಂಡರು.

ಜಿ.ಪಂ.ಸದಸ್ಯ ಲತೀಫ್ ಮಾತನಾಡಿ, ನಂಜರಾಯಪಟ್ಟಣ ವ್ಯಾಪ್ತಿ ವಿವಿಧ ಗ್ರಾಮಗಳಲ್ಲಿ ಜಿ.ಪಂ.ಅನುದಾನದಿಂದ ರಸ್ತೆ, ಚರಂಡಿ ನಿರ್ಮಾಣಕ್ಕೆ ಒತ್ತು ನೀಡಿ ದ್ದೇನೆ. ದುಬಾರೆ ಬಗ್ಗೆ ಜಿ.ಪಂ.ಸಭೆಯಲ್ಲಿ ಪ್ರಾಸ್ತಾಪಿಸಿ ಸಮಗ್ರ ಅಭಿವೃದ್ಧಿಗೆ ಒತ್ತಾಯಿಸುವುದಾಗಿ ಭರವಸೆ ನೀಡಿದರು.

ಗ್ರಾ.ಪಂ.ಅಧ್ಯಕ್ಷ ಜೈನಾಭ ಸಭೆಯ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ. ಸದಸ್ಯ ವಿಜುಚಂಗಪ್ಪ, ಗ್ರಾ.ಪಂ. ಉಪಾಧ್ಯಕ್ಷೆ ಕುಮಾರಿ ಸದಸ್ಯರಾದ ಸುಮೇಶ್, ಲೋಕನಾಥ್, ನವೀನ್, ನೋಡೆಲ್ ಅಧಿಕಾರಿ ಪೂಣಚ್ಚ, ಪಿಡಿಒ ಎಂ.ಆರ್.ಸುಮೇಶ್, ಕಾರ್ಯದರ್ಶಿ ಮನ್ಸೂರುಖಾನ್ ಇದ್ದರು. ಇದೇ ಸಂದರ್ಭ ವಿವಿಧ ಇಲಾಖಾಧಿಕಾರಿಗಳು ತಮ್ಮ ಇಲಾಖೆಗಳಲ್ಲಿ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.