ADVERTISEMENT

ಇಂದಿನಿಂದ ‘ಚೈಲ್ಡ್‌ಲೈನ್‌ ಸೇ ದೋಸ್ತಿ’

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2017, 7:11 IST
Last Updated 14 ನವೆಂಬರ್ 2017, 7:11 IST

ಮಡಿಕೇರಿ: ‘ಚೈಲ್ಡ್‌ಲೈನ್– 1098’ ವತಿಯಿಂದ ನ. 14ರಿಂದ 21ರವರೆಗೆ ‘ಚೈಲ್ಡ್‌ಲೈನ್ ಸೇ ದೋಸ್ತಿ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಸಂಯೋಜಕ ನವೀನ್‌ಕುಮಾರ್ ತಿಳಿಸಿದರು. ನಗರದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಮಕ್ಕಳ ಹಕ್ಕುಗಳ ರಕ್ಷಣೆ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಹಾಗೂ ಜಾಗೃತಿ ಮೂಡಿಸುವ ಉದ್ದೇಶದಿಂದ ದೇಶದಾದ್ಯಂತ ಪ್ರತಿವರ್ಷ ಚೈಲ್ಡ್‌ಲೈನ್‌ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಅದರಂತೆ ಜಿಲ್ಲೆಯಲ್ಲೂ ಈ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಚೈಲ್ಡ್‌ಲೈನ್– 1098ರ ಕಳೆದ ಐದು ವರ್ಷಗಳಿಂದ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಸುಮಾರು 789ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿಕೊಂಡು ಸರ್ಕಾರದ ಯೋಜನೆಗಳಿಗೆ ಸಂಪರ್ಕ ಸೇತುವೆಯಾಗಿದೆ’ ಎಂದು ವಿವರಿಸಿದರು.

‘14ರಂದು ಕಡಗದಾಳು ಸರ್ಕಾರಿ ಪ್ರೌಢಶಾಲೆಯಲ್ಲಿ ಕಾರ್ಯಕ್ರಮ ಉದ್ಘಾಟಿಸಲಾಗುವುದು. ಅದೇ ದಿನ ಕ್ಯಾಲೆಂಡರ್ ಬಿಡುಗಡೆ, ಅಭಿಯಾನ ಹಾಗೂ ರಕ್ಷಾಬಂಧನ ಕಾರ್ಯಕ್ರಮ ನಡೆಯಲಿದೆ’ ಎಂದು ತಿಳಿಸಿದರು.

ADVERTISEMENT

15ರಂದು ಸಿದ್ದಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜು, ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆ ಮತ್ತು ಮೂರ್ನಾಡು ಪ್ರೌಢಶಾಲೆಗಳಲ್ಲಿ ಸಾಮಾಜಿಕ ಜಾಲತಾಣಗಳ ಸುರಕ್ಷತೆ ಮತ್ತು ಮಾದಕ ವಸ್ತುಗಳ ಕುರಿತು ಚರ್ಚಿಸಲಾಗುವುದು. 16ರಂದು ಶಿರಂಗಾಲ ಪ್ರೌಢಶಾಲೆಯಲ್ಲಿ ಸಾಮಾಜಿಕ ಜಾಲತಾಣಗಳ ಸುರಕ್ಷತೆ ಮತ್ತು ಮಾದಕ ವಸ್ತುಗಳ ಕುರಿತು ಜಾಥಾ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.

17ರಂದು ಗೋಣಿಕೊಪ್ಪಲು ಹಾಗೂ ಸುಂಟಿಕೊಪ್ಪದಲ್ಲಿ ಬಾಲಕಾರ್ಮಿಕ ಕುರಿತು ಅರಿವು ಕಾರ್ಯಕ್ರಮ, 18ರಂದು ಆಲೂರು ಸಿದ್ದಾಪುರದಲ್ಲಿ ಮಕ್ಕಳ ಸ್ನೇಹಿ ಶಾಲೆ ಹಾಗೂ ಬಾಲ್ಯವಿವಾಹ ಮುಕ್ತ ಗ್ರಾಮವನ್ನಾಗಿ ಮಾಡುವ ಕಾರ್ಯಕ್ರಮ, 19ರಂದು ಮಡಿಕೇರಿಯಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಕುರಿತು ಶ್ವೇತವರ್ಣದ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.

20ರಂದು ದೇವರಪುರದ ಅಮೃತವಾಣಿ ಶಾಲೆಯಲ್ಲಿ ವಿಶೇಷ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ, 21ರಂದು ಭಾಗಮಂಡಲ ಅಟಲ್ ಬಿಹಾರಿ ವಾಜಿಪೇಯಿ ವಸತಿ ಶಾಲೆಯಲ್ಲಿ ಮಕ್ಕಳ ಹಕ್ಕುಗಳ ಕುರಿತು ಪ್ರಬಂಧ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.

ಚೈಲ್ಡ್‌ಲೈನ್ ಸಂಕಷ್ಟದಲ್ಲಿರುವ ಮಕ್ಕಳಿಗೆ ದಿನದ 24 ಗಂಟೆಯೂ ಉಚಿತ ಮತ್ತು ತುರ್ತು ಸೇವೆ ಒದಗಿಸುತ್ತಿದೆ ಎಂದು ಮಾಹಿತಿ ನೀಡಿದರು. ಸಹಾಯವಾಣಿ ನಿರ್ದೇಶಕ ವಿ.ಎಸ್.ರಾಯ್ ಡೇವಿಡ್, ಆಪ್ತ ಸಮಾಲೋಚಕಿ ರೋಹಿಣಿ, ಕಾರ್ಯಕರ್ತರಾದ ಕುಸುಮ, ಪ್ರವೀಣ್‌ಕುಮಾರ್, ನಯನ್‌ಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.