ADVERTISEMENT

ಉರುಸ್‌: ಇಂದು ಸರ್ವಧರ್ಮ ಸಮ್ಮೇಳನ

ಎಮ್ಮೆಮಾಡುನಲ್ಲಿ ಬಿಗಿ ಬಂದೋಬಸ್ತ್‌; ಸಾವಿರಾರು ಜನ ಸೇರುವ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2017, 10:06 IST
Last Updated 6 ಮಾರ್ಚ್ 2017, 10:06 IST
ನಾಪೋಕ್ಲು: ಇಲ್ಲಿಗೆ ಸಮೀಪದ ಎಮ್ಮೆಮಾಡು ಗ್ರಾಮದ ಉರುಸ್‌ ಪ್ರಯುಕ್ತ ಸೋಮವಾರ ಸರ್ವಧರ್ಮ ಸಮ್ಮೇಳನ ಹಾಗೂ ಅನ್ನದಾನ ನಡೆಯಲಿದೆ.  ಉರುಸ್‌ಗೆ ಸಂಬಂಧಿಸಿದಂತೆ ಮಾ. 3ರಿಂದ ಪ್ರಮುಖ ಕಾರ್ಯಕ್ರಮಗಳು ನಡೆಯುತ್ತಿದ್ದು, 6ರಂದು (ಸೋಮ ವಾರ) ನಡೆಯುವ ಸರ್ವಧರ್ಮ ಸಮ್ಮೇಳನಕ್ಕೆ ಸಾವಿರಾರು ಭಕ್ತರು ಭಾಗವಹಿಸುವ ನಿರೀಕ್ಷೆ ಇದ್ದು, ಪೋಲಿಸ್‌ ಇಲಾಖೆ ಯಿಂದ ವಿಶೇಷ ಬಂದೋಬಸ್ತ್‌ ಕೈಗೊಳ್ಳಲಾಗಿದೆ.
 
ನಾಪೋಕ್ಲು ಪಟ್ಟಣದಲ್ಲಿ ವಾಹನ ಗಳ ಸುಗಮ ಸಂಚಾರಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ.  ಸರ್ವಧರ್ಮ ಸಮ್ಮೇಳನದಲ್ಲಿ ಶಾಸಕ ಕೆ.ಜಿ.ಬೋಪಯ್ಯ, ವಿರಾಜಪೇಟೆ ಕಳಂಚೇರಿ ಮಠದ ಶಾಂತಮಲ್ಲಿ ಕಾರ್ಜುನ ಸ್ವಾಮೀಜಿ, ಸುಂಟಿಕೊಪ್ಪ ಸೈಂಟ್‌ಮೇರಿ ಶಾಲೆಯ ಕರೆಸ್ಪಾಂಡೆಂಟ್‌ ಎಡ್ವರ್ಡ್‌ ವಿಲಿಯಂ ರಾಜ್ಯ ಹಜ್‌ಸಮಿತಿ ಸದಸ್ಯ ಅಬೂಬಕರ್‌ ಸಿದ್ದಿಕ್‌ ಜಿಲ್ಲಾಧಿಕಾರಿ ಡಾ. ರಿಚರ್ಡ್‌ ವಿನ್ಸೆಂಟ್‌ ಡಿಸೋಜ, ಪೋಲಿಸ್‌ ವರಿಷ್ಠಾಧಿಕಾರಿ ಪಿ. ರಾಜೇಂದ್ರಪ್ರಸಾದ್‌ ಪಾಲ್ಗೊಳ್ಳಲಿ ದ್ದಾರೆ. ಧಾರ್ಮಿಕ ಪ್ರವಚನ ಹಾಗೂ ಉಪನ್ಯಾಸ ನಡೆಯಲಿದೆ. 
 
ನೂತನ ಬಸ್‌ ವ್ಯವಸ್ಥೆ:  ಎಮ್ಮೆಮಾಡು ಗ್ರಾಮಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ನೂತನ ಬಸ್‌ ಸಂಚಾರಕ್ಕೆ ಚಾಲನೆ ನೀಡಲಾಗಿದೆ.
 
ಜಿಲ್ಲಾ ವಕ್ಫ್‌ ಬೋರ್ಡ್‌ ಅಧ್ಯಕ್ಷ ಎಂ.ಎಚ್‌.ಅಬ್ದುಲ್‌ ರಹಿಮಾನ್‌ ನಾಪೋಕ್ಲು ಗ್ರಾಮಪಂಚಾಯಿತಿ ಉಪಾ ಧ್ಯಕ್ಷ ಕಾಳೆಯಂಡ ಸಾಬ ತಿಮ್ಮಯ್ಯ, ಮತ್ತು  ರಾಜ್ಯ ರಸ್ತೆ ಸಾರಿಗೆ ನಿಗಮದ ನಿರ್ದೇಶಕ ಎಂ.ಎ. ಶೌಕತ್‌ಆಲಿ, ನಾಪೋಕ್ಲು ಪಟ್ಟಣದಲ್ಲಿ ನೂತನ ಬಸ್‌ ಸಂಚಾರಕ್ಕೆ ಚಾಲನೆ ನೀಡಿದರು. 
 
ಈ ಬಸ್‌ ಬೆಳಿಗ್ಗೆ 9ಗಂಟೆಗೆ, ಮಧ್ಯಾಹ್ನ 1ಗಂಟೆಗೆ ಹಾಗೂ ಸಂಜೆ 4ಗಂಟೆಗೆ  ನಾಪೋಕ್ಲುವಿನಿಂದ ಎಮ್ಮೆ ಮಾಡುವಿಗೆ ಸಂಚರಿಸಲಿದೆ. ಉರುಸ್‌ ಅಂಗವಾಗಿ ಸೋಮವಾರ ಹಲವು ಖಾಸಗಿ ಬಸ್‌ಗಳ ಸಂಚಾರ ಕಲ್ಪಿಸಲಾಗಿದೆ. 
 
ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ: ಸರ್ವಧರ್ಮ ಸಮ್ಮೇಳನ ಮತ್ತು ಅನ್ನದಾನಕ್ಕೆ ಹೆಚ್ಚಿನ ಜನ ಆಗಮಿಸುವ  ನಿರೀಕ್ಷೆ ಇರುವುದರಿಂದ ವಾಹನ ಸಂಚಾರ ಮತ್ತು ನಿಲುಗಡೆಯಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. 
 
3ರಂದು ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ  ನಾಪೋಕ್ಲು ಮಾರುಕಟ್ಟೆ ಬಳಿಯಿಂದ ಹಳೆ ತಾಲ್ಲೂ ಕಿನವರೆಗೆ ಎರಡು ಬದಿಯಲ್ಲಿಯೂ ವಾಹನ ನಿಲುಗಡೆ ನಿಷೇಧಿಸಲಾಗಿದೆ. 
 
ಎಮ್ಮೆಮಾಡು ಜಂಕ್ಷನ್‌ನಿಂದ ದರ್ಗಾದವರೆಗೆ ಮತ್ತು ಪಡಿಯಾಣಿ ಜಂಕ್ಷನ್‌ನಿಂದ ದರ್ಗಾದವರೆಗೆ ಏಕ ಮುಖ ರಸ್ತೆ ಸಂಚಾರ ಕಲ್ಪಿಸಲಾಗಿದೆ. ಎಮ್ಮೆಮಾಡುವಿನಲ್ಲಿ ವಾಹನಗಳನ್ನು  ಭತ್ತದ ಗದ್ದೆಯಲ್ಲಿ ನಿಲುಗಡೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಎಮ್ಮೆಮಾಡುವಿನಿಂದ ವಾಪಾಸ್‌ ಆಗುವವರು ಕೂರುಳಿ ರಸ್ತೆಯಲ್ಲಿ ಸಂಚರಿಸಬೇಕು ಎಂದು ಪೊಲೀಸರು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 
ನಾಪೋಕ್ಲುವಿನಲ್ಲಿ ಸಂತೆಯ ದಿನವಾದ್ದರಿಂದ ಬೆಳಿಗ್ಗೆ 10 ಗಂಟೆಯಿಂದ ಸಂಜೆವರೆಗೆ ಎಲ್ಲ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ. ಅದರಂತೆಯೇ ಸಂತೆಗೆ ಬರುವ ಖಾಸಗಿ ವಾಹನಗಳಿಗೆ ಪೊಲೀಸ್ ಮೈದಾನ ಮತ್ತು ಚೆರಿಯಪರಂಬು ರಸ್ತೆ ಬದಿಯಲ್ಲಿ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.
 
ಚಾಲನೆ: ಇಲ್ಲಿನ ಸೂಫಿ ಶಹೀದ್‌ ದರ್ಗಾ ಷರೀಫ್‌ನಲ್ಲಿ ಶುಕ್ರವಾರ ಪ್ರಾರ್ಥನೆ ಸಲ್ಲಿಸಿದ ಬಳಿಕ ಧ್ವಜಾರೋಹಣದೊಂದಿಗೆ ಬಲಿಯತ್‌ ಕಾರಂಡ ಉಸ್ಮಾನ್‌ ಹಾಜಿ ಉರುಸ್‌ಗೆ ಚಾಲನೆ ನೀಡಿದರು. 
ಬಳಿಕ ಸಾಮೂಹಿಕ ವಿವಾಹ ಸಮಾರಂಭವೂ ಜರುಗಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.