ADVERTISEMENT

ಐದು ಶಾಲೆಗಳಲ್ಲಿ ‘ಅರಿವಿನ ಸಿಂಚನ’

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2017, 6:32 IST
Last Updated 13 ಮಾರ್ಚ್ 2017, 6:32 IST

ಮಡಿಕೇರಿ: ಅಂಗವಿಕಲರು ಹಾಗೂ ಹಿರಿಯ ನಾಗರಿಕರಿಗೆ ಸರ್ಕಾರವು ಹಲವು ಸೌಲಭ್ಯಗಳನ್ನು ಕಲ್ಪಿಸಿದ್ದು ಇದರ ಸದುಪಯೋಗವನ್ನು ಅರ್ಹರು ಪಡೆದುಕೊಳ್ಳಬೇಕು ಎಂದು ಹಿರಿಯ ನಾಗರಿಕ ಜಿ.ಟಿ. ರಾಘವೇಂದ್ರ ತಿಳಿಸಿದರು.
 
ನಗರದ ಬಿಆರ್‌ಸಿ ಕ್ಷೇತ್ರ ಸಂಪನ್ಮೂಲ ಕಚೇರಿ ಸಭಾಂಗಣದಲ್ಲಿ  ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಈಚೆಗೆ ನಡೆದ ಅರಿವಿನ ಸಿಂಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಂಗವಿಕಲ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ, ಅಂಗವಿಕಲ ಮಕ್ಕಳು ಮತ್ತು ಹಿರಿಯರಿಗೆ ಸಾಧನ ಸಲಕರಣೆಗಳು, ಮಾಸಿಕ ವೇತನ... ಹೀಗೆ ಹಲವು ಸೌಲಭ್ಯಗಳಿವೆ. ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು ಇತರರಂತೆಯೇ ಬದುಕು ಕಟ್ಟಿಕೊಳ್ಳಿ ಎಂದು ಮನವಿ ಮಾಡಿದರು.

ವಿಕಲಚೇನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ಎನ್.ಎಂ. ಜಗದೀಶ್ ಮಾತನಾಡಿ, ಸರ್ಕಾರದ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲು ಸರ್ಕಾರ ಅರಿವಿನ ಸಿಂಚನ ಕಾರ್ಯಕ್ರಮ ಏರ್ಪಡಿ ಸಿದ್ದು, ಜಿಲ್ಲೆಯ ಐದು ಶಾಲೆಗಳಲ್ಲಿ ಈ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾ ಗಿದೆ ಎಂದು ಮಾಹಿತಿ ನೀಡಿದರು.

ಶೇ 40ಕ್ಕಿಂತ ಹೆಚ್ಚು ಅಂಗವಿಲತೆ ಹೊಂದಿರುವವರು ಗುರುತಿನ ಚೀಟಿ ಪಡೆದುಕೊಂಡರೆ ಸೌಲಭ್ಯ ಪಡೆದು ಕೊಳ್ಳಲು ಅನುಕೂಲವಾಗಲಿದೆ ಎಂದು ಮಾಹಿತಿ ನೀಡಿದರು.

ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಬಿ.ಶಿವರಾಮ್ ಮಾತನಾಡಿ, ಕಲಿಕೆ ಎಂಬುದು ಸಾಗರವಿ ದ್ದಂತೆ; ವಿದ್ಯಾರ್ಥಿಗಳು ನಿರಂತರ ಕಲಿಕೆಯಲ್ಲಿ ತೊಡಗಬೇಕು. ಹುಟ್ಟಿನಿಂದ ಬದುಕಿರುವವರೆಗೆ ಕಲಿಕೆ ನಿರಂತರವಾಗಿ ನಡೆಯಬೇಕು ಎಂದು ಹೇಳಿದರು.

ವಾರ್ತಾಧಿಕಾರಿ ಚಿನ್ನಸ್ವಾಮಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿ ನಿಲಯಕ್ಕೆ ಪ್ರವೇಶ ಪಡೆಯುವ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ವಿದ್ಯಾರ್ಥಿಗಳು ವಿದ್ಯಾರ್ಥಿ ನಿಲಯಕ್ಕೆ ಪ್ರವೇಶ ಪಡೆದು ವಿದ್ಯಾಭ್ಯಾಸವನ್ನು ಉತ್ತಮ ಪಡಿಸಿಕೊಳ್ಳುವಂತೆ  ಸಲಹೆ ನೀಡಿದರು.
ಶಿಕ್ಷಕರಾದ ವೀಣಾ, ಅಪೂರ್ವಾ, ಕಿಶೋರ್, ಮಮತಾ, ಸತೀಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.